ಗುಂಡಿಬಿದ್ದ ರಸ್ತೇಲಿ ಸಂಚಾರ ಕಷ್ಟ

ಮಾಗಡಿ: ತಾಲೂಕಿನ ಅತ್ತಿಂಗೆರೆ- ಅಣೇಕಾರನಹಳ್ಳಿ ಮುಖ್ಯರಸ್ತೆ ಡಾಂಬರು ಇಲ್ಲದೆ ಅವ್ಯವಸ್ಥೆಯಿಂದ ಕೂಡಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. 15 ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರು ಹಾಕಿದ್ದು ಬಿಟ್ಟರೆ ಮತ್ತೆ ಅಭಿವೃದ್ಧಿ ಕಂಡಿಲ್ಲ. ಅತ್ತಿಂಗೆರೆ ಗೇಟ್​ನಿಂದ ಅಣೇಕಾರನಹಳ್ಳಿವರೆಗೂ 5 ಕಿ.ಮೀ. ದೂರವಿದ್ದು, ರಸ್ತೆ ಗುಂಡಿ ಬಿದ್ದಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ. ಗ್ರಾಮಕ್ಕೆ ಒಂದು ಸರ್ಕಾರಿ ಬಸ್ ಸೇವೆ ಇದ್ದು, ಉಳಿದಂತೆ ರಾಮನಗರ ಅಥವಾ ಮಾಗಡಿಗೆ ಹೋಗಲು ಅತ್ತಿಂಗೆರೆ ಗೇಟ್​ವರೆಗೆ ನಡೆದೇ ಹೋಗಬೇಕಾಗಿದೆ. ಮಳೆಗಾಲದಲ್ಲಂತೂ ವಾಹನ ಸವಾರರ ಪಾಡು ಹೇಳತೀರದಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ರಸ್ತೆಗೆ ಡಾಂಬರು ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರಾದ ಬಸವರಾಜು, ನಂಜುಂಡಪ್ಪ, ನಂಜೇಗೌಡ, ಪ್ರಸನ್ನಕುಮಾರ್, ರಾಜಣ್ಣ, ಮಂಜುನಾಥ್, ಗಂಗರಾಜು, ಲೋಕೇಶ್, ಸಿದ್ದಗಂಗಯ್ಯ, ನಂಜುಂಡಿ ಮತ್ತಿತರರು ಒತ್ತಾಯಿಸಿದ್ದಾರೆ.

ಆಸ್ಪತ್ರೆ, ಹೈಸ್ಕೂಲ್​ಗೆ ವಿಜಿ ದೊಡ್ಡಿಗೆ ಹೋಗಬೇಕು: ಅತ್ತಿಂಗೆರೆ ಮತ್ತು ಅಣೇಕಾರನಹಳ್ಳಿಯಲ್ಲಿ 1,500ಕ್ಕೂ ಜನಸಂಖ್ಯೆಯಿದೆ. ಪ್ರಾಥಮಿಕ ಶಾಲೆ ಇದ್ದು, ಕಾಲೇಜಿಗೆ ರಾಮನಗರ ಅಥವಾ ಮಾಗಡಿಗೆ ಹೋಗಬೇಕಾಗಿದೆ. ಆಸ್ಪತ್ರೆ, ಹೈಸ್ಕೂಲ್​ಗೆ 6-8 ಕಿ.ಮೀ. ದೂರದ ವಿಜಿ ದೊಡ್ಡಿಗೆ ಹೋಗಬೇಕಾಗಿದೆ. ಸರ್ಕಾರಿ ಬಸ್ ಸೌಕರ್ಯವಿಲ್ಲದ ಕಾರಣ ಖಾಸಗಿ ವಾಹನ ಅಥವಾ ಸ್ವಂತ ವಾಹನದಲ್ಲಿ ತೆರಳಬೇಕು. ರಸ್ತೆ ಸರಿಯಿಲ್ಲದ ಕಾರಣ ಆಟೋ ಸಂಚಾರ ವಿರಳವಾಗಿದೆ. ಜತೆಗೆ ಬೆಟ್ಟಗುಡ್ಡ ಇರುವುದರಿಂದ ರಾತ್ರಿ ವೇಳೆ ಕಾಡಾನೆ ಮತ್ತು ಚಿರತೆ ದಾಳಿ ಭೀತಿ ಗ್ರಾಮಸ್ಥರನ್ನು ಕಾಡಿದೆ.

ಅಭಿವೃದ್ಧಿ ಕೆಲಸಗಳಿಗಾಗಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 13 ಕೋಟಿ ರೂ. ಅನುದಾನ ಬಂದಿದೆ. ಪಿಡಬ್ಲ್ಯುಡಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ಅತ್ತಿಂಗೆರೆ ಗೇಟ್​ನಿಂದ ಅಣೇಕಾರನ ಹಳ್ಳಿವರೆಗೂ ಡಾಂಬರು ರಸ್ತೆ ನಿರ್ವಣಕ್ಕೆ ಟೆಂಡರ್ ಕರೆಯಲಾಗಿದೆ. ಚುನಾವಣೆ ನೀತಿಸಂಹಿತೆ ಅವಧಿ ಮುಗಿದ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ.

| ಶಂಕರ್ ತಾಪಂ ಸದಸ್ಯ, ಮಾಗಡಿ

Leave a Reply

Your email address will not be published. Required fields are marked *