ಗುಂಟೆ, ಮೀಟರ್ ಲೆಕ್ಕದಲ್ಲಿ ವರದಿ

ಹೊಸನಗರ: ನೆರೆ ಹಾನಿಯಲ್ಲಿ ಭತ್ತದ ಗದ್ದೆ ಮತ್ತು ತೋಟದಲ್ಲಿ ಮರಳು, ಮಣ್ಣು, ಕಲ್ಲು ರಾಶಿಯಾಗಿರುವುದನ್ನು ತೆರವುಗೊಳಿಸುವುದಕ್ಕೆ ರೈತರಿಗೆ ಕನಿಷ್ಠ 10 ಸಾವಿರ ರೂ. ಪರಿಹಾರ ನೀಡುವ ಬಗ್ಗೆ ಚರ್ಚೆಯಾಗಿದೆ. ಆದರೆ ಅಧಿಕಾರಿಗಳು ಮರಳು ನಿಂತಿರುವ ಜಾಗವನ್ನು ಗುಂಟೆ, ಮೀಟರ್ ಲೆಕ್ಕದಲ್ಲಿ ಮಾಪನ ಮಾಡಿ ಈ ಹಿಂದಿರುವ ನಿಯಮಾನುಸಾರ ಗುಂಟೆಗೆ 112 ರೂ.ನಂತೆ ವರದಿ ಸಿದ್ಧಪಡಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ಕುರಿತು ಡಿಸಿ ಮತ್ತು ಸಿಎಂ ಜತೆ ಮತ್ತೊಮ್ಮೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು.

ಕಸಬಾ ಹೋಬಳಿ ವ್ಯಾಪ್ತಿಯ ಪುರಪ್ಪೇಮನೆ, ಹೆಬ್ಬೈಲು, ಹರಿದ್ರಾವತಿ, ಹರತಾಳು, ಮಾರುತೀಪುರ, ಜೇನಿ ಮತ್ತಿತರ ಗ್ರಾಮಗಳ ನೆರೆಹಾನಿ ಪ್ರದೇಶವನ್ನು ಶನಿವಾರ ವೀಕ್ಷಿಸಿದ ಅವರು, ಅಧಿಕಾರಿಗಳು ವಾಸ್ತವ ಹಾನಿ ಗಮನಿಸುವುದರ ಜತೆಗೆ ಮಾನವೀಯತೆ ಕಡೆಗೂ ಗಮನಹರಿಸಬೇಕು ಎಂದು ತಿಳಿಸಿದರು.

ಒಂದು ಎಕರೆ ಭತ್ತ ನಾಟಿ ಮಾಡಿರುವ ರೈತನ ಹೊಲದ ಮೇಲೆ ಅರ್ಧ ಭಾಗದಲ್ಲಿ ಮಾತ್ರ ಮರಳು ಕಾಣುತ್ತಿದೆ ಎನ್ನುವ ಕಾರಣಕ್ಕೆ ಕೇವಲ 4 ಗುಂಟೆ ಲೆಕ್ಕಾಚಾರ ಹಾಕಿದರೆ 488 ರೂ. ಪರಿಹಾರ ಬರಲಿದೆ. ಈ ಪುಡಿಗಾಸು ಪಡೆದು ಆತ ತನ್ನ ಹೊಲ ಸರಿಪಡಿಸುವುದಾದರೂ ಹೇಗೆ? ಒಂದು ದಿನದ ಕೂಲಿಯೂ ಆಗದ ಹಣವನ್ನು ಕೊಟ್ಟರೆ ಸರ್ಕಾರಕ್ಕೂ ಕೆಟ್ಟ ಹೆಸರು. ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಹಾಗಾಗಿ ರೈತನ ಹೊಲದಲ್ಲಿ ಮರಳು ಸಂಗ್ರಹವಾಗಿದ್ದರೆ ಕನಿಷ್ಠ ಅದನ್ನು ತೆಗೆಯುವುದಕ್ಕೆ ಪೂರಕ ಸಹಕಾರ ನೀಡುವುದು ನಮ್ಮ ಕಡೆಯಿಂದ ಆಗಬೇಕು ಎಂದು ಹೇಳಿದರು.

ಅನೇಕ ಕಡೆ ಅತಿವೃಷ್ಟಿಯಿಂದ ಹಾನಿಗೊಳಗಾದ ಹೊಲದಲ್ಲಿ ರೈತರೇ ಸರಿಪಡಿಸಿಕೊಂಡು ಮತ್ತೆ ನಾಟಿ ಮಾಡಿದ್ದಾರೆ. ಸರ್ಕಾರ ಮತ್ತು ಅಧಿಕಾರಿಗಳು ಬರುವುದನ್ನು ಕಾದು ಕೂರುವಷ್ಟು ಸಮಯ ಅವರಲಿಲ್ಲ. ಮುಂದಿನ ಬೆಳೆ ಮಾಡುವುದು ಅನಿವಾರ್ಯವಾಗಿದೆ. ಆದರೆ ಈಗಾಗಲೆ ಅದರ ನಷ್ಟದ ಅಂದಾಜು ಮೊದಲ ವರದಿಯಲ್ಲಿದೆ. ಅದನ್ನು ಪರಿಗಣಿಸಿ ಪರಿಹಾರಕ್ಕೆ ಅಂತಿಮ ಪಟ್ಟಿ ಸಿದ್ಧಪಡಿಸಬೇಕು ಎಂದರು.

ಮಲೆನಾಡಿನಲ್ಲಿ ಹಾನಿಯಾದ ಬಗ್ಗೆ ಬೆಂಗಳೂರಿನಲ್ಲಿರುವ ಅನೇಕ ಅಧಿಕಾರಿಗಳಿಗೆ ಸ್ಪಷ್ಟ ಅರಿವಿಲ್ಲ. ತಗ್ಗು ಪ್ರದೇಶವಾಗಿರುವ ಇಲ್ಲಿ ಮಳೆ ನಿಂತಾಕ್ಷಣ ನೆರೆ ಇಳಿದು ಹೋಗುತ್ತದೆ. ಆದರೆ ಹಾನಿ ವಿಪರೀತವಾಗಿರುತ್ತದೆ. ಈ ಕಲ್ಪನೆ ಇಲ್ಲದೆ ಹಿಂದೆ ನಿಯಮ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ಎನ್.ಆರ್. ದೇವಾನಂದ, ತಾಲೂಕು ಅಧ್ಯಕ್ಷ ಎ.ವಿ.ಮಲ್ಲಿಕಾರ್ಜುನ್, ಗಣಪತಿ ಬೆಳೆಗೋಡು, ಮೋಹನ್ ಮಂಡಾನಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *