ಗೀತೆಯ ಅನುಸರಣೆಯಿಂದ ಉತ್ತಮ ಸಮಾಜ

ಹುಬ್ಬಳ್ಳಿ: ಸಮಾಜದ ಇಂದಿನ ವಿಷಮ ಸ್ಥಿತಿ ನಿವಾರಣೆಗೆ ಭಗವಾನ್ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಸಂಜೀವಿನಿಯಾಗಿದ್ದು, ಜೀವನದಲ್ಲಿ ಗೀತೆಯ ಅನುಸರಣೆಯಿಂದ ಉತ್ತಮ ಸಮಾಜ ಕಟ್ಟಬಹುದಾಗಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಭಗವದ್ಗೀತಾ ಸಮರ್ಪಣಾ ಬೃಹತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ಇಲ್ಲಿಯ ಸ್ಟೇಶನ್ ರಸ್ತೆ ಶೃಂಗಾರ ಪ್ಯಾಲೇಸ್​ನಲ್ಲಿ ಅವಳಿನಗರದ ಗಣ್ಯರ ಉಪಸ್ಥಿತಿಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ವಿಶ್ವದಲ್ಲಿ ಇಂದು ಭಯೋತ್ಪಾದಕತೆ ತಾಂಡವ ವಾಡುತ್ತಿದೆ. ಉತ್ತಮವಾಗಿರುವ ಭಾರತೀಯ ಸಂಸ್ಕೃತಿಯ ಮೇಲೆ ಆಕ್ರಮಣಗಳು ನಡೆದಿದ್ದು, ಸಮಾಜ ದ್ವಂದ್ವದಲ್ಲಿ ಸಿಲುಕಿಕೊಂಡಿದೆ. ಮಾನಸಿಕ ನೆಮ್ಮದಿ ಕಳೆದುಕೊಂಡಿದೆ. ಅಲ್ಲದೆ, ಶಾರೀರಿಕ ಉತ್ತಮ ಸಂಪತ್ತನ್ನು ಹಾಳು ಮಾಡುಕೊಳ್ಳುತ್ತಿದೆ. ಇದೆಲ್ಲದರ ಪರಿಹಾರವಾಗಿ ಶ್ರೀಕೃಷ್ಣ ಉಪದೇಶಿಸಿದ ಭಗವದ್ಗೀತೆಯ ಅನುಷ್ಠಾನ ಮತ್ತು ಅನುಸಂಧಾನದಿಂದ ಮತ್ತೆ ಮಾನವ ಕುಲ ಉತ್ತಮ ಮಾರ್ಗದಲ್ಲಿ ಒಯ್ಯಲು ಸಾಧ್ಯವಾಗುತ್ತದೆ ಎಂದರು.

ಅನೇಕ ದಿನಗಳಿಂದ ಅನುಚಾನವಾಗಿ ನಡೆಸಿಕೊಂಡು ಬಂದಿರುವ ಗೀತಾ ಅಭಿಯಾನದ ಬೃಹತ್ ಸಮರ್ಪಣಾ ಸಮಾರಂಭ ಹುಬ್ಬಳ್ಳಿಯಲ್ಲಿ ಡಿಸೆಂಬರ್​ನಲ್ಲಿ ಜರುಗಲಿದ್ದು, ಭಕ್ತರು ತನು ಮನ ಧನದಿಂದ ಸೇವೆ ಸಲ್ಲಿಸಬೇಕು ಎಂದು ಹೇಳಿದರು.

ಪದ್ಮಶ್ರೀ ಡಾ. ಎಂ.ಎಂ. ಜೋಶಿ ಮಾತನಾಡಿ, ಹುಬ್ಬಳ್ಳಿ ಜನತೆ ಆಸ್ತಿಕರು, ವಿಶಾಲ ಹೃದಯಿಗಳು ಆಗಿದ್ದು, ಸ್ವರ್ಣವಲ್ಲಿ ಶ್ರೀಗಳು ಕೈಗೊಂಡ ಭಗವದ್ಗೀತಾ ಅಭಿಯಾನದ ಮೂಲಕ ಸಮಾಜದಲ್ಲಿ ನೈತಿಕತೆ ಮತ್ತು ಸಂಸ್ಕಾರ ಬಿತ್ತುತ್ತಿದ್ದಾರೆ. ಇಂಥ ಕಾರ್ಯಕ್ರಮಕ್ಕೆ ಹುಬ್ಬಳ್ಳಿ ಸದಾ ಸಿದಟಛಿವಾಗಿದ್ದು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.

ನ್ಯಾಯವಾದಿ ಬಿ.ಡಿ. ಹೆಗಡೆ, ವರ್ತಕ ವಿನಾಯಕ ಆಕಳವಾಡಿ, ಅನಂತ ಹೆಗಡೆ ಅಶೀಸರ ಇತರರು ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವುದಾಗಿ ಹೇಳಿದರು.

ಬ್ರಾಹ್ಮಣ ಸಮಾಜದ ಮುಖಂಡ ಎಂ.ಬಿ. ನಾತು ಮಾತನಾಡಿ, ಡಿ. 19ರಂದು ಭಗವದ್ಗೀತಾ ಅಭಿಯಾನ ಸಮರ್ಪಣೆ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ವಲಯಗಳನ್ನಾಗಿಸಿ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಲಕ್ಷಕ್ಕೂ ಹೆಚ್ಚು ಜನತೆ ಸೇರುವುದರಿಂದ ವಿವಿಧ ಸಮಿತಿ ರಚಿಸಲಾಗಿದೆ ಎಂದರು.

ಎಸ್​ಎಸ್​ಕೆ ಸಮಾಜದ ನೀಲಕಂಠ ಜಡಿ, ವಿಠಲ ಲದ್ವಾ, ಗೀತಾ ಅಭಿಯಾನದ ಪ್ರಚಾರ ಸಮಿತಿ ಮುಖಂಡರಾದ ಎ.ಸಿ. ಗೋಪಾಲ, ಶೃಂಗಾರ ಪ್ಯಾಲೇಸ್ ಮಾಲೀಕ ತುಳಸಿದಾಸ ಧರ್ಮದಾಸ ಬಂಧುಗಳು, ಹೋಟೆಲ್ ಉದ್ಯಮಿ ಕೃಷ್ಣರಾಜ ಕೆಮ್ತೂರು, ಜ್ಯುವೇಲರಿ ಮಾಲೀಕ ಶ್ರೀಕಾಂತ ಕರಿ, ಜಿತೇಂದ್ರ ಮಜೇಥಿಯಾ, ನೀಲಕಂಠ ಆಕಳವಾಡಿ, ಕನ್ಹಯ್ಯಾ ಲಾಲ್ ಠಕ್ಕರ್, ಮನೋಹರ್ ಪರ್ವತಿ, ವೆಂಕಟರಮಣ ಹೆಗಡೆ, ಶ್ರೀಕಾಂತ ಹೆಗಡೆ ಇತರರು ಪಾಲ್ಗೊಂಡಿದ್ದರು.

ವೀಣಾ ಶಿವರಾಮ ಹೆಗಡೆ ತಂಡದಿಂದ ಭಗವದ್ಗೀತಾ ಶ್ಲೋಕ ಪಠಿಸಲಾಯಿತು. ಸುಭಾಸಸಿಂಗ್ ಜಮಾದಾರ ಸ್ವಾಗತಿಸಿ ನಿರೂಪಿಸಿದರು. ಅರವಿಂದ ಮುತಗಿ ವಂದಿಸಿದರು.

ಇಂದು ಸಭೆ…

ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಬೃಹತ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಮಹಿಳಾ ಮಂಡಳಿಗಳ ಪೂರ್ವಭಾವಿ ಸಭೆ ಅ. 29ರಂದು ಸಂಜೆ 4.30ಕ್ಕೆ ಸ್ಟೇಶನ್ ರಸ್ತೆ ಈಶ್ವರ ದೇವಸ್ಥಾನದಲ್ಲಿ ಕರೆಯಲಾಗಿದೆ. ಎಲ್ಲ ಮಹಿಳಾ ಮಂಡಳಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿರಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.