ಗೀತಾ ಪ್ರವಚನದ ಸಮಾರೋಪ

ಗೋಕರ್ಣ: ಗೀತೆಯ ಪ್ರಧಾನ ಸಂದೇಶವಾದ ‘ಶರಣಾಗತ ಭಾವ’ ಮರೆಯಾಗುತ್ತಿರುವುದೇ ಇಂದಿನ ಹಲವು ವಿಪ್ಲವಗಳಿಗೆ ಕಾರಣ. ಅದನ್ನು ಇಂದಿನ ರಾಜಕೀಯ ದುರಂಧರರಲ್ಲಿ, ಬುದ್ಧಿಜೀವಿಗಳು ಎನಿಸಿಕೊಳ್ಳುವವರಲ್ಲಿ ವಿಪುಲವಾಗಿ ಕಾಣ ಬಹುದಾಗಿದೆ ಎಂದು ಗೀತಾ ಪ್ರವಚನದ ಸಮಾರೋಪದಲ್ಲಿ ಬಹು ಭಾಷಾ ವಿದ್ವಾಂಸ ಡಾ. ಕೆ.ಎಸ್. ನಾರಾಯಣಾಚಾರ್ಯ ಹೇಳಿದರು.

ಕಳೆದ ಶತಮಾನದಿಂದ ಈವರೆಗೂ ಇನ್ನಾವುದೇ ವಾದಕ್ಕಿಂತ ಹೆಚ್ಚಾಗಿ ಮನು ವಾದವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.ಧರ್ಮದ ಬಗ್ಗೆ ಮಾತನಾಡುವವರನ್ನು ಮನು ವಾದಿಗಳು ಎನ್ನಲಾಗುತ್ತಿದೆ. ಚೆನ್ನಾಗಿ ಬದುಕಿ ಎಂದರೂ ಅದಕ್ಕೆ ಮನು ವಾದದ ಲೇಪ ಕೊಡಲಾಗುತ್ತದೆ. ಆದರೆ, ಅದೇ ಮನು ಮಹರ್ಷಿ ಹೇಳಿದ ರಾಜ ಧರ್ಮ ಮಾತ್ರ ಇಂತಹವರಿಗೆ ಅಪಥ್ಯ. ಮನು ಹೇಳಿದ ಧರ್ವತ್ಮನಾದವ ಮಾತ್ರ ಅರಸು ಆಗುವಂತಾಗಬೇಕು ಎನ್ನುವುದರತ್ತ ಯಾರೂ ಲಕ್ಷ್ಯ ನೀಡುವುದಿಲ್ಲ. ಇದಕ್ಕೆ ಹಿನ್ನೆಲೆ ಶರಣಾಗತಿಯ ಅಭಾವ. 18ನೇ ಅಧ್ಯಾಯದ ಕೊನೆಯಲ್ಲಿ ಅರ್ಜುನನಿಗೆ ಇದನ್ನೇ ಕೃಷ್ಣ ವಿವರಿಸುತ್ತಾನೆ. ಸಂದೇಹಗಳನ್ನು ತೊರೆದು ನನಗೆ ಶರಣಾಗತನಾಗು. ‘ಮಾಮೇಕಂ ಶರಣಂ ವ್ರಜ’ ಇದೇ ಮಾತನ್ನು ವಿಶ್ವ ಕವಿ ರವೀಂದ್ರನಾಥ ಟ್ಯಾಗೋರರು ತಮ್ಮ ಗೀತಾಂಜಲಿಯಲ್ಲಿ ಹೇಳುತ್ತಾರೆ.

ನನ್ನಲ್ಲಿ ಮನೆ ಮಾಡಿರುವ ಶರಣಾಗತಿ ವಿರೋಧಿಯಾದ ಜ್ಞಾನ ದಾರಿದ್ರ್ಯ ವೃಕ್ಷಕ್ಕೆ ಕೊಡಲಿ ಏಟು ಕೊಡು ಎಂಬುದಾಗಿ ರವೀಂದ್ರರು ಪ್ರಾರ್ಥಿಸಿದ್ದಾರೆ. ಶರಣಾಗತಿಯಿಂದ ಇಹದಲ್ಲಿ ಶಾಂತಿ ಮಾತ್ರವಲ್ಲ ಪರದಲ್ಲಿಯೂ ಅದು ಮುಂದುವರಿದು ಶಾಶ್ವತ ಪರಂಧಾಮ ನಿನಗೆ ಲಭ್ಯವಾಗುತ್ತದೆ. ದ್ರೌಪದಿ ಮಾಡಿದ್ದು ಇದನ್ನೇ. ಶರಣಾತಿಯಿಂದ ಮಾತ್ರ ಜಗದ್ ರಕ್ಷಕ ಬಗ್ಗುತ್ತಾನೆ ಎಂದರು. ಈ ವೇಳೆ ಉಪನ್ಯಾಸ ಆಯೋಜಿಸಿದ್ದ ವೇದವ್ಯಾಸ ಪ್ರತಿಷ್ಠಾನ ವತಿಯಿಂದ ವೇ.ಮಧುಕರ ಭಟ್ಟ, ವೇ.ಶ್ರೀಧರ ಭಟ್ಟ ಆಚಾರ್ಯರನ್ನು ಗೌರವಿಸಲಾಯಿತು. ಸಂಸ್ಥೆಯ ಡಾ. ಮಹಾಬಲಮೂರ್ತಿ ಶಾಸ್ತ್ರಿ, ಅನಂತ ಹಾವಗೋಡಿ, ಮಹೇಶ ಹಿರೇಗಂಗೆ, ನಾಗೇಂದ್ರ ಭಟ್ಟ ನಿರ್ವಹಿಸಿದರು.