ಗೀತಾ ತತ್ತ್ವಗಳಿಂದ ಜೀವನ ಧನ್ಯ

ಧಾರವಾಡ: ಸಾಮಾಜಿಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯ, ವ್ಯಕ್ತಿತ್ವ ವಿಕಸನ ಹಾಗೂ ನೈತಿಕತೆ ಪುನರುತ್ಥಾನದ ಧ್ಯೇಯಗಳನ್ನಿಟ್ಟುಕೊಂಡು ಶ್ರೀ ಭಗವದ್ಗೀತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸರ್ವರೂ ಪಾಲ್ಗೊಂಡು ಗೀತೆಯ ತತ್ತ್ವಗಳನ್ನು ಅಳವಡಿಸಿಕೊಳ್ಳುವುದರಿಂದ ಜೀವನದಲ್ಲಿ ಶ್ರೇಯಸ್ಸು ಕಾಣಬಹುದು ಎಂದು ಸ್ವರ್ಣವಲ್ಲೀ ಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.

ನಗರದ ಮಾಳಮಡ್ಡಿಯ ಪ್ರಲ್ಹಾದ ವಿದ್ಯಾರ್ಥಿ ನಿಲಯದಲ್ಲಿ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದಿಂದ ಶ್ರೀ ಭಗವದ್ಗೀತಾ ಅಭಿಯಾನದಲ್ಲಿ ಪಾಲ್ಗೊಳ್ಳುವ ಉಪನ್ಯಾಸಕರಿಗಾಗಿ ಮಂಗಳವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಆಶೀರ್ವಚನ ನೀಡಿದರು.

ಒತ್ತಡದ ಜೀವನದಿಂದ ಆತ್ಮಹತ್ಯೆ, ಕಾಯಿಲೆಗಳು ಹೆಚ್ಚುತ್ತಿವೆ. ಆತ್ಮಹತ್ಯೆ ಕೇವಲ ಗ್ರಾಮೀಣ ಪ್ರದೇಶದಲ್ಲಷ್ಟೇ ಅಲ್ಲದೆ ಬೆಂಗಳೂರು ಕೂಡ ಆತ್ಮಹತ್ಯೆಯ ರಾಜಧಾನಿ ಎನಿಸಿಕೊಳ್ಳುತ್ತಿದೆ. ವಿದ್ಯಾರ್ಥಿಗಳು, ಐಟಿ- ಬಿಟಿ ನೌಕರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜೀವನದಲ್ಲಿ ಸೋತೆ ಎಂದುಕೊಂಡವರಿಗೆ ಜೀವನ ವಿಧಾನ ಕಲಿಸದಿದ್ದರೆ ಆತ್ಮಹತ್ಯೆಯ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುವ ಅಪಾಯವಿದೆ. ಜೀವನ ವಿಧಾನ ಕಲಿಕೆಗೆ ಭಗವದ್ಗೀತೆಗಿಂತ ಉತ್ತಮ ಕೈಪಿಡಿ ಮತ್ತೊಂದಿಲ್ಲ ಎಂದರು.

ಇಂದು ದೇಶದ ಉದ್ದಗಲಕ್ಕೂ ನೈತಿಕತೆಯ ಪತನವಾಗುತ್ತಿದೆ. ಯೋಜನೆಗಳ ಅನುಷ್ಠಾನದಲ್ಲಿ ಪರ್ಸಂಟೇಜ್ ವ್ಯವಸ್ಥೆ ಯಾವ ಸರ್ಕಾರ ಬಂದರೂ ಬದಲಾಗದು. ಸುಶಿಕ್ಷಿತರೇ ಆತಂಕವಾದದಲ್ಲಿ ತೊಡಗುತ್ತಿದ್ದು, ಶಿಕ್ಷಣ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಭಾವೈಕ್ಯದ ಬುನಾದಿಯ ಕೊರತೆಯೇ ಇದಕ್ಕೆ ಕಾರಣ. ಸರ್ಕಾರ ರಚಿಸುವ ಪಠ್ಯಕ್ರಮದಲ್ಲಿ ಆಧ್ಯಾತ್ಮಿಕತೆ, ನೈತಿಕತೆ ಸೇರಬೇಕು. ಮಕ್ಕಳಿದ್ದಾಗಲೇ ಭಗವದ್ಗೀತೆಯ ಸಾರ ತಿಳಿಸಿದರೆ ಭಯೋತ್ಪಾದಕರಾಗುವುದನ್ನು ತಡೆಗಟ್ಟಬಹುದು ಎಂದರು.

ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಎಂ.ಎ. ಹೆಗಡೆ ಮಾತನಾಡಿ, ಗೀತೆಯ ಮಹತ್ವವನ್ನು ವಿಶ್ವಕ್ಕೆ ಪ್ರಚುರಪಡಿಸಬೇಕಿದೆ. ಆದರೆ ಇದಕ್ಕೆ ಉತ್ತರ ಭಾರತದಷ್ಟು ಮಹತ್ವ ಕರ್ನಾಟಕದಲ್ಲಿ ಇಲ್ಲದಿರುವುದು ದುರ್ದೈವ. ಪವಿತ್ರವಾದ ಗ್ರಂಥದ ಬಗ್ಗೆ ಇಲ್ಲಸಲ್ಲದ ಆರೋಪಗಳು ಹಾಗೂ ಶ್ರೀಕೃಷ್ಣನ ಕುರಿತು ಅಪಪ್ರಚಾರ ನಡೆಯುತ್ತಿದ್ದು, ಅದಕ್ಕೆ ಗಮನ ಕೊಡುವ ಅಗತ್ಯವಿಲ್ಲ ಎಂದರು.

ಸಂಚಾಲಕ ಜಿ.ಆರ್. ಭಟ್ ಸ್ವಾಗತಿಸಿದರು. ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ರಾಜು ಪಾಟೀಲಕುಲಕರ್ಣಿ, ಭಗವದ್ಗೀತಾ ಅಭಿಯಾನದ ಅಧ್ಯಕ್ಷ ಆರ್.ಡಿ. ಕುಲಕರ್ಣಿ, ಜಿ.ಕೆ. ಹೆಗಡೆ, ರಾಧಾ ದೇಸಾಯಿ, ಶಾರದಾ ಮಹಿಳಾ ಮಂಡಳ ಹಾಗೂ ಪ್ರಹ್ಲಾದ ವಿದ್ಯಾರ್ಥಿ ನಿಲಯದ ಟ್ರಸ್ಟಿ ಕೆ.ಆರ್. ದೇಶಪಾಂಡೆ, ಇತರರಿದ್ದರು. ನಂತರ ಡಾ. ಶ್ರೀರಾಮ ಭಟ್ ಹಾಗೂ ಇತರರು ಉಪನ್ಯಾಸ ನೀಡಿದರು.

ಸಮಸ್ಯೆಗಳಿಗೆ ಸ್ಪಂದಿಸಿ: ಹುಬ್ಬಳ್ಳಿಯ 10 ವಲಯ ಸಮಿತಿ ಹಾಗೂ ಧಾರವಾಡದ 7 ಸಮಿತಿಗಳು ಜಿಲ್ಲಾದ್ಯಂತ 1 ಸಾವಿರ ಭಗವದ್ಗೀತೆ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸಬೇಕು. 100ಕ್ಕೂ ಹೆಚ್ಚು ಉಪನ್ಯಾಸಕರು ಭಾಗಿಯಾಗಬೇಕು. ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಉಪನ್ಯಾಸದ ಮೂಲಕ ಸ್ಪಂದಿಸಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಆತ್ಮಹತ್ಯೆ ಮಾಡಿಕೊಳ್ಳದೇ ಸಮಸ್ಯೆಯನ್ನು ನೋಡುವ ದೃಷ್ಟಿಕೋನ ಬದಲಿಸುವ ಕಾರ್ಯ ಮಾಡಬೇಕು ಎಂದು ಸ್ವರ್ಣವಲ್ಲೀ ಶ್ರೀಗಳು ಹೇಳಿದರು.