ಗಿಲ್​ಗೆ ಏಷ್ಯಾ ಪೆಸಿಫಿಕ್ ರ‍್ಯಾಲಿ ಗೌರವ

| ಮಂಜುನಾಥ್ ಎಂ.ಎನ್.

ಚಿಕ್ಕಮಗಳೂರು: ಎಫ್ಎಐ ಏಷ್ಯಾ ಪೆಸಿಫಿಕ್ ರ‍್ಯಾಲಿ ಚಾಂಪಿಯನ್ಷಿಪ್ನ ಅಂತಿಮ ಚರಣವಾದ ಕಾಫಿ ಡೇ ಇಂಡಿಯಾ ರ್ಯಾಲಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ ಗೌರವ್ ಗಿಲ್ ಹೊಸ ಇತಿಹಾಸ ಬರೆದಿದ್ದಾರೆ. ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ 2016ರಲ್ಲಿ ನಡೆದ ಎಲ್ಲ ಆರು ಸುತ್ತಿನ ಏಷ್ಯಾ ಪೆಸಿಫಿಕ್ ರ್ಯಾಲಿಗಳಲ್ಲಿ ಅಗ್ರಸ್ಥಾನ ಪಡೆದ ದಾಖಲೆಯನ್ನು ಅವರು ಬರೆದರು.

35 ವರ್ಷದ ಗೌರವ್ ಎಪಿಆರ್ಸಿಯ ಪ್ರಸಕ್ತ ಋತುವಿನಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಚೀನಾ, ಜಪಾನ್ ಮತ್ತು ಮಲೇಷ್ಯಾ ಚರಣದ ರ್ಯಾಲಿಯಲ್ಲೂ ಚಾಂಪಿಯನ್ ಆಗಿದ್ದರು. ಇದರೊಂದಿಗೆ ಅವರು ಎಫ್ಐಎ ಚಾಂಪಿಯನ್ಷಿಪ್ನ ಎಲ್ಲ ಸುತ್ತುಗಳಲ್ಲಿ ಚಾಂಪಿಯನ್ ಆದ ಮೊದಲ ಚಾಲಕರೆನಿಸಿದರು. ಈ ಮುನ್ನ 2013ರಲ್ಲಿ ಚೊಚ್ಚಲ ಗೆಲುವು ಕಂಡಿದ್ದ ಅವರು ಈ ವರ್ಷ ಆ ಸಾಧನೆ ಪುನರಾವರ್ತಿಸಿದ್ದಾರೆ.

ಸೋಮವಾರ ಮುಕ್ತಾಯಗೊಂಡ ಆರನೇ ಹಾಗೂ ಕೊನೆಯ ಸುತ್ತಿನಲ್ಲಿ ಗಿಲ್ ಅವರ ಬಹುಕಾಲದ ಜೋಡಿ ಗ್ಲೆನ್ ಮೆಕ್ಲಿನ್ ಕೂಡ ಏಷ್ಯಾ ಪೆಸಿಫಿಕ್ ರ್ಯಾಲಿಯ ಸಹ ಚಾಲಕನ ಪ್ರಶಸ್ತಿಗೆ ಪಾತ್ರರಾದರು. ಈ ಜೋಡಿ ತಮ್ಮ ಸ್ಪರ್ಧೆಯ ದೂರವನ್ನು ಕೇವಲ 3 ಗಂಟೆ 39 ನಿಮಿಷ 37.9 ಸೆಕೆಂಡ್ಗಳಲ್ಲಿ ಕ್ರಮಿಸಿ ಚಾಲನೆಯ ಜಾಣ್ಮೆ ಪ್ರದರ್ಶಿಸಿತು. ದ್ವಿತೀಯ ಸ್ಥಾನ ಪಡೆದ ಕುಸ್ಕೋ ರೇಸಿಂಗ್ ತಂಡದ ಮೈಕೆಲ್ ಯಂಗ್ ಮತ್ತು ಸಹಚಾಲಕ ಮಾಲ್ಕಮ್ ರೀಡ್ ಇದೇ ಅಂತರವನ್ನು ತಲುಪಲು 3:51:10.3 ಅವಧಿ ತೆಗೆದುಕೊಂಡರು. ಕುಸ್ಕೋ ರೇಸಿಂಗ್ನ ಮತ್ತೊಂದು ತಂಡ ಸಂಜಯ್ ಟಾಕ್ಲೆ ಹಾಗೂ ಸಹ ಚಾಲಕ ಟಾಕಶೀಟಾ ನುರಿಟೋ 4:03:51.0 ಅವಧಿಯಲ್ಲಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಎಂಆರ್ಎಫ್ ತಂಡದ ಜರ್ಮನ್ ಚಾಂಪಿಯನ್ ಫ್ಯಾಬಿಯನ್ ಕ್ರೀಮ್ ಹಾಗೂ ಸಹ ಚಾಲಕ ಫ್ರಾಂಕ್ ಕ್ರಿಸ್ಟಿಯನ್ ಅಪಘಾತದಿಂದಾಗಿ ಸ್ಪರ್ಧೆಯಿಂದ ನಿರ್ಗಮಿಸಬೇಕಾಯಿತು. ಭಾನುವಾರ ಇತರ ಸ್ಪರ್ಧಿಗಳ ಮೇಲೆ ಹಿಡಿತ ಸಾಧಿಸಿ 7 ನಿಮಿಷ ಮುನ್ನಡೆ ಪಡೆದ ಗಿಲ್ ವಾಹನದಲ್ಲಿ ಸಹ ಸಣ್ಣ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಗರಿಷ್ಠ ವೇಗ ಸಾಧಿಸಲಾಗಲಿಲ್ಲ. ಕರ್ಣ ಕಡೂರ್ ಮತ್ತು ನಿಖಿಲ್ ಜೋಡಿ ಯೋಕೋಹಾಮ 2ಕೆ ವಾಹನದಲ್ಲಿ ಎಂಆರ್ಎಫ್ ಎಫ್ಎಂಎಸ್ಸಿಐ ಇಂಡಿಯಾ ರ‍್ಯಾಲಿ ಚಾಂಪಿಯನ್ಶಿಪ್ ಮುಡಿಗೇರಿಸಿಕೊಂಡರು.

ಮುಂದಿನ ರ್ಯಾಲಿಯಲ್ಲಿ ತೀವ್ರ ಸ್ಪರ್ಧೆ ನಿಶ್ಚಿತ

ಮುಂದಿನ ಏಷ್ಯಾ ಪೆಸಿಫಿಕ್ ರ‍್ಯಾಲಿ ತೀವ್ರ ಸ್ಪರ್ಧೆಯೊಡ್ಡಲಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಲಿರುವುದಾಗಿ ಏಷ್ಯಾ ಪೆಸಿಫಿಕ್ ರ್ಯಾಲಿಯ ಚಾಂಪಿಯನ್ ಗೌರವ್ ಗಿಲ್ ಸಂಕಲ್ಪದ ನುಡಿಯಾಡಿದರು. ನಗರದ ಎಬಿಸಿ ಕಾಫಿ ಕಂಪನಿ ಆವರಣದಲ್ಲಿ ಸೋಮವಾರ ಸಂಜೆ ನಡೆದ ಟ್ರೋಫಿ ವಿತರಣಾ ಸಮಾರಂಭದ ಬಳಿಕ ಗೆಲುವಿನ ಖುಷಿ ಹಂಚಿಕೊಂಡ ಅವರು, ಮುಂದೆ ಬರುವ ಎಪಿಆರ್ಸಿ ರ್ಯಾಲಿಯಲ್ಲಿ ಇನ್ನಷ್ಟು ಕಂಪೆನಿಗಳು ಪ್ರಾಯೋಜಕರಾಗಿ ಪಾತ್ರ ವಹಿಸುವುದರಿಂದ ಸ್ಪರ್ಧೆ ಕಠಿಣವಾಗಿರಲಿದೆ ಎಂದರು. ತಮ್ಮ ಮುಂದಿನ ಗುರಿಯ ಬಗ್ಗೆ ಪ್ರಸ್ತಾಪಿಸಿದ ಅವರು, ವಿಶ್ವ ಚಾಂಪಿಯನ್ ಸ್ಪರ್ಧೆ ಹಾಗೂ ಯುರೋಪಿಯನ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳುವ ಆಸಕ್ತಿ ತಮಗಿರುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *