ಶನಿವಾರಸಂತೆ: ಆಲೂರುಸಿದ್ದಾಪುರ ರೋಟರಿ ಕ್ಲಬ್, ಶನಿವಾರಸಂತೆ ರೋಟರಿ ಕ್ಲಬ್ ಹಾಗೂ ಕೊಡಗು ಜಿಲ್ಲಾ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಯುಕ್ತಾಶ್ರಯದಲ್ಲಿ ಅರಿಶಿನಗುಪ್ಪೆ ಗ್ರಾಮದ ಆಲೂರುಸಿದ್ದಾಪುರ ರೋಟರಿ ಕ್ಲಬ್ ಅಧ್ಯಕ್ಷ ಬೇಬಿಮ್ಯಾಥ್ಯು ಅವರ ತೋಟದ ಮನೆಯ ಸಭಾಂಗಣದಲ್ಲಿ ಗಿರಿಜನ ಹಾಡಿಯ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಕೆ.ಪಿ.ಜಯಕುಮಾರ್ ಕಾರ್ಯಕ್ರಮದ ಕುರಿತು ಮಾತನಾಡಿ, ಗಿರಿಜನ ಹಾಡಿಯ ಹೆಣ್ಣು ಮಕ್ಕಳು ಆರೋಗ್ಯ, ಶುಚಿತ್ವದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ವಿಶೇಷವಾಗಿ ಗರ್ಭಿಣಿಯರು ತಾವು ಜನ್ಮ ನೀಡುವ ಮಗುವಿನ ಪೋಷಣೆಯನ್ನು ತಮ್ಮ ಉದರದಲ್ಲಿ ಶಿಶು ಇರುವಾಗಲೇ ಜಾಗೃತಿ ಹೊಂದುವಂತೆ ಸಲಹೆ ನೀಡಿದರು.
ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿಯರಾದ ನಮಿತ ಮತ್ತು ಅನುಶ್ರೀ ಗಿರಿಜನ ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯ, ಶುಚಿತ್ವ, ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಆರೋಗ್ಯ ಮುಂಜಾಗ್ರತೆ, ಆರೋಗ್ಯ ಇಲಾಖೆ ಮತ್ತು ಸರಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗಿರಿಜನ ಹಾಡಿಯ 12 ಮಂದಿ ಗರ್ಭಿಣಿಯರಿಗೆ ಸೀಮಂತ ಮಾಡಲಾಯಿತು.
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಸಂಸ್ಥೆಯ ವಲಯ ಸೇನಾನಿ ಎಚ್.ವಿ.ದಿವಾಕರ್, ಕಾರ್ಯದರ್ಶಿ ಎಚ್.ಎಂ.ಮನೋಹರ್, ಕುಶಾಲನಗರ ವಲಯ ಸೇನಾನಿ ಎಂ.ಡಿ.ಲಿಖಿತ್, ವಿವಿಧ ಕಡೆಯ ರೋಟರಿ ಕ್ಲಬ್‌ಗಳ ಪ್ರಮುಖರಾದ ಎಚ್.ಎಸ್.ವಸಂತ್, ಶ್ವೇತಾವಸಂತ್, ಉದಯ್‌ಕುಮಾರ್, ಎ.ಎಸ್.ರಾಮಣ್ಣ, ಕಿರಣ್, ವೆಂಕಟೇಶ್ ಯೂತ್ ಮೂವ್‌ಮೆಂಟಿನ ಸದಸ್ಯರಾದ ಅಂಕಚಾರಿ, ವೈಶಾಲಿ, ಹೇಮಂತ್‌ಕುಮಾರ್, ಕುಸುಮಾ ಮುಂತಾದವರು ಇದ್ದರು.