ಗಿಡಮರಗಳಿಂದ ಜಲ ಮೂಲಗಳ ರಕ್ಷಣೆ

ಚಿಕ್ಕಬಳ್ಳಾಪುರ: ಕೇಂದ್ರ ಜಲಶಕ್ತಿ ಅಭಿವೃದ್ಧಿ ಅನುಷ್ಠಾನದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಪರ ಕಾರ್ಯದರ್ಶಿ ಪಂಕಜ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಶುಕ್ರವಾರ ಜಿಲ್ಲೆಯ ವಿವಿಧೆಡೆ ಪ್ರವಾಸ ನಡೆಸಿತು.

ಚಿಕ್ಕಬಳ್ಳಾಪುರ ತಾಲೂಕಿನ ಕಣಿವೆ ನಾರಾಯಣಪುರಕ್ಕೆ ಭೇಟಿ ನೀಡಿದ ತಂಡ ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಲ್ಲಿ 50 ಹೆಕ್ಷೇರ್ ಪ್ರದೇಶದಲ್ಲಿ ಬೆಳೆಸಿದ ತೋಪು ಪರಿಶೀಲಿಸಿತು. ಬೆಟ್ಟಗುಡ್ಡದ ತಪ್ಪಲಿನಲ್ಲಿ ಗಿಡಮರಗಳನ್ನು ಬೆಳೆಸುವುದರಿಂದ ಹಸಿರು ಸಂಪತ್ತು ವೃದ್ಧಿಯಾಗುತ್ತದೆ. ಈ ಮೂಲಕ ಜಲಮೂಲಗಳ ರಕ್ಷಣೆಯಾಗಲಿದ್ದು, ಜನರಿಗೆ ಅನುಕೂಲವಾಗುತ್ತದೆ ಎಂದು ಪಂಕಜ್ ಕುಮಾರ್ ಸಲಹೆ ನೀಡಿದರು. ಬಳಿಕ ನಗರದ 20ನೇ ವಾರ್ಡ್​ನ ಭಾರತಿ ನಗರ ಮತ್ತು ತಾಲೂಕಿನ ರಂಗಸ್ಥಳದಲ್ಲಿ ಅಭಿವೃದ್ಧಿಪಡಿಸಿರುವ ಕಲ್ಯಾಣಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲೆಯ ಬಹುತೇಕ ಕಲ್ಯಾಣಿಗಳು ಒತ್ತುವರಿಯಾಗಿದ್ದವು. ಕಾಲ ಕಾಲಕ್ಕೆ ನಿರ್ವಹಣೆಯಲ್ಲದೇ ತ್ಯಾಜ್ಯ, ಗಿಡಗಳಿಂದ ತುಂಬಿದ್ದವು. ವಿವಿಧ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಶ್ರಮದಾನ ಕೈಗೊಂಡು ಹೊಸ ರೂಪ ನೀಡಲಾಗಿದೆ. ಪ್ರಸ್ತುತ 139 ಕಲ್ಯಾಣಿಗಳ ಪೈಕಿ 55 ಕಲ್ಯಾಣಿಗಳನ್ನು ಸ್ವಚ್ಛಗೊಳಿಸಿದ್ದು 89 ರಲ್ಲಿ ಕೆಲಸ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಪಿ.ಅನಿರುದ್ ಶ್ರವಣ್ ಮಾಹಿತಿ ನೀಡಿದರು.

ಪೋಶೆಟ್ಟಹಳ್ಳಿಯಲ್ಲಿ ಚೆಕ್ ಡ್ಯಾಂ ವೀಕ್ಷಿಸಿದ ತಂಡ, ಅಗತ್ಯವಿರುವ ಕಡೆ ಚೆಕ್ ಡ್ಯಾಂ ನಿರ್ವಿುಸುವಂತೆ ಸಲಹೆ ನೀಡಿತು. ಮಂಚೇನಹಳ್ಳಿ ರಸ್ತೆ ಬದಿಯ ಅರಣ್ಯ ಪ್ರದೇಶ, ಗೌರಿಬಿದನೂರು ತಾಲೂಕಿನ ಗೌಡಗೆರೆಯಲ್ಲಿ ನರೇಗಾ ಯೋಜನೆಯಲ್ಲಿ ಕೈಗೊಂಡಿರುವ ವಾಟರ್ ಫೂಲ್​ಗಳನ್ನು ಪರಿಶೀಲಿಸಿತು.

ಜಿಪಂ ಸಿಇಒ ಗುರುದತ್ ಹೆಗಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ರವಿಂದ್ರನಾಥ್ ತಲವಾಡೆ ಮತ್ತಿತರರು ಇದ್ದರು.

ವಿವಿಧ ಇಲಾಖೆಗಳಿಂದ ಮಾಹಿತಿ ಸಂಗ್ರಹ: ಜಿಪಂ ಮಿನಿ ಸಭಾಂಗಣದಲ್ಲಿ ಗುರುವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಕೇಂದ್ರ ತಂಡ, ಜಿಲ್ಲೆಯ ಮಳೆ ಪ್ರಮಾಣ, ಕೆರೆಗಳ ಸ್ಥಿತಿಗತಿ, ರಾಜಕಾಲುವೆ ಮತ್ತು ಕಲ್ಯಾಣಿಗಳ ಸಂರಕ್ಷಣೆ, ಮಳೆ ಕೊಯ್ಲು, ಜಲ ಮೂಲಗಳ ಸಂರಕ್ಷಣೆಗೆ ಕ್ರಮ ಸೇರಿ ಹಲವು ವಿಚಾರಗಳ ಮಾಹಿತಿ ಪಡೆದುಕೊಂಡು, ಶುಕ್ರವಾರ ಸ್ಥಳ ಪರಿಶೀಲನೆ ನಡೆಸಿತು.

ಎಚ್.ಎನ್.ವ್ಯಾಲಿ ಕಾಮಗಾರಿ ವೀಕ್ಷಣೆ: ಕಂದವಾರ ಕೆರೆಯಲ್ಲಿ ನಡೆಯುತ್ತಿರುವ ಎಚ್.ಎನ್.ವ್ಯಾಲಿ ಯೋಜನೆ ಕಾಮಗಾರಿಯನ್ನು ಕೇಂದ್ರ ವೀಕ್ಷಿಸಿತು.

ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂ.ಗ್ರಾಮಾಂತರ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಎಚ್.ಎನ್.ವ್ಯಾಲಿ ಯೋಜನೆಗೆ ಚಾಲನೆ ನೀಡಲಾಗಿದ್ದು, ತ್ಯಾಜ್ಯ ಸಂಸ್ಕರಿಸಿದ ನೀರನ್ನು ಜಿಲ್ಲೆಯ 44 ಕೆರೆಗಳಿಗೆ ಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ 23 ಕೆರೆಗಳಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಸೆ.15ರ ವರೆಗೆ ರಾಜ್ಯದ ಹಲವೆಡೆ ಪ್ರವಾಸ: ಕೇಂದ್ರ ಸರ್ಕಾರವು ಜಲಶಕ್ತಿ ಅಭಿಯಾನವನ್ನು ಜಾರಿಗೆ ತಂದಿದ್ದು ಇದರ ಯಶಸ್ಸಿಗೆ ಅಧ್ಯಯನ ನಡೆಸಲು ಜು.1 ರಿಂದ ಸೆ.15 ರವರೆಗೆ ರಾಜ್ಯದ ಹಲವೆಡೆ ಸಂಚರಿಸುತ್ತಿರುವ ಕಾರ್ಯಕ್ರಮದ ನೋಡಲ್ ಅಧಿಕಾರಿ, ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಪರ ಕಾರ್ಯದರ್ಶಿ ಪಂಕಜ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡವು ಜಿಲ್ಲೆಯಲ್ಲಿಯೇ ಎರಡು ದಿನ ಪ್ರವಾಸ ಕೈಗೊಂಡಿದೆ.

 

Leave a Reply

Your email address will not be published. Required fields are marked *