ಗಾಳಿಯೂ ಕೂಡಾ ಆಹಾರವೇ!

ವಿವಿಧ ಬಗೆಯ ಆಹಾರಗಳನ್ನು ನಾವು ವಿಭಿನ್ನ ರೀತಿಯಲ್ಲಿ ಸೇವಿಸುತ್ತೇವೆ. ಆಹಾರ ಸೇವನಾ ಕ್ರಮಕ್ಕೆ ಅನುಗುಣವಾಗಿ ಆಹಾರವನ್ನು ಐದು ವಿಧಗಳಾಗಿ ವಿಭಜಿಸಲಾಗಿದೆ. ಭಕ್ಷ್ಯ, ಭೋಜ್ಯ, ಚೋಷ್ಯ, ಲೇಹ್ಯ, ಪಾನೀಯಗಳು ಈ ವಿಧಗಳು. ಭಕ್ಷ್ಯ ಎಂದರೆ ಜಗಿದು ತಿನ್ನಬೇಕಾಗುವ ಆಹಾರ ದ್ರವ್ಯಗಳು. ಕೋಡುಬಳೆ, ನಿಪ್ಪಟ್ಟು, ಚಕ್ಕುಲಿ ಮೊದಲಾದ ಎಣ್ಣೆತಿಂಡಿಗಳು, ವಿವಿಧ ಬಗೆಯ ಸಿಹಿತಿನಿಸುಗಳು ಇದರಲ್ಲಿ ಸೇರುತ್ತವೆ. ಮೃದುವಾಗಿರುವ ಮುಖ್ಯ ಆಹಾರಗಳಾದ ಅನ್ನ, ಚಿತ್ರಾನ್ನ, ಬಿಸಿಬೇಳೆಬಾತ್ ಇತ್ಯಾದಿಗಳು ಭೋಜ್ಯಗಳು. ಕಬ್ಬು, ಮಾವಿನಹಣ್ಣನ್ನು ಹೀರಿ ಸೇವಿಸುತ್ತೇವಲ್ಲಾ ಅವೆಲ್ಲಾ ಚೋಷ್ಯಗಳು. ಕೆಲವೊಂದು ವ್ಯಂಜನಗಳನ್ನು ನೆಕ್ಕಿ ಸೇವಿಸುತ್ತೇವೆ. ಹಾಗಲಕಾಯಿ, ಮಾವು ಹಾಗೂ ಶುಂಠಿಗೊಜ್ಜುಗಳನ್ನು, ಪಾಯಸ, ಐಸ್ಕ್ರೀಮ್ಳನ್ನು ನೆಕ್ಕಿ ರುಚಿಯನ್ನು ಅನುಭವಿಸುತ್ತೇವೆ. ಇವೆಲ್ಲಾ ಲೇಹ್ಯಗಳು. ದ್ರವಾಹಾರವಾಗಿರುವ ನೀರು, ಶರಬತ್ತು, ಪಾನಕ, ಮಜ್ಜಿಗೆನೀರುಗಳೆಲ್ಲಾ ಪಾನೀಯಗಳು.

ಇಂದಿನಂತೆ ಕೇವಲ ಘನಾಹಾರ, ದ್ರವಾಹಾರ ಮಾತ್ರ ಆಯುರ್ವೆದ ಹೇಳಿದ್ದಲ್ಲ. ಗಾಳಿಯೂ ಕೂಡಾ ಆಹಾರವೇ! ಉದರದಲ್ಲಿ ವಾಯುಸಂಚಾರಕ್ಕೂ ಸ್ಥಳಾವಕಾಶಬೇಕೆಂದು ಕೇವಲ ಜೀರ್ಣದೃಷ್ಟಿಯಿಂದ ಮಾತ್ರ ಹೇಳಿದ್ದಲ್ಲ. ಅನೇಕ ತಪಸ್ವಿಗಳು ವಾಯುಸೇವನೆಯಿಂದಲೇ ಪ್ರಾಣರಕ್ಷಣೆ, ಪ್ರಾಣಪೋಷಣೆ ಮಾಡುತ್ತಿರುವುದು ಗೌಪ್ಯವಿಚಾರವೇನಲ್ಲ.

ಆಯುರ್ವೆದ ಔಷಧ ಸೇವಿಸಬೇಕಾದರೆ ಕಠಿಣವಾದ ಪಥ್ಯ ಮಾಡಲೇಬೇಕು. ಆಹಾರದಲ್ಲಿ ಹೆಚ್ಚು ಕಡಿಮೆಯಾದರೆ ಆಯುರ್ವೆದ ಔಷಧ ದೂರವಿಡಬೇಕು ಎಂಬ ಭಾವನೆ ಜನರಲ್ಲಿದೆ. ನಿಜಕ್ಕೂ ಆಹಾರ ನಿಯಮವಿರುವುದು ಔಷಧಕ್ಕಾಗಿ ಅಲ್ಲ, ರೋಗದಿಂದ ಬೇಗ ಹೊರಬರುವುದಕ್ಕಾಗಿ! ಪಥ್ಯವೇನೂ ಕಡ್ಡಾಯವಲ್ಲ. ಇದನ್ನು ಅನುಸರಿಸದಿದ್ದರೆ ಕಾಯಿಲೆಯಿಂದ ಗುಣಮುಖವಾಗಲು ಹೆಚ್ಚು ಸಮಯ ಬೇಕಾಗುತ್ತದೆ ಅಷ್ಟೆ. ಯಾವುದೇ ಪದ್ಧತಿಯ ಔಷಧ ಸೇವಿಸುವಾಗಲೂ ಆಯುರ್ವೆದ ಹೇಳಿದ ಆಹಾರ ವಿಚಾರಗಳನ್ನು ತಿಳಿದು ನಡೆದರೆ ಅನುಕೂಲ ಖಂಡಿತಾ. ರೋಗ ಗುಣಪಡಿಸಲು ಕೇವಲ ಔಷಧ ಸೇವನೆ ಸಾಕು, ಪಥ್ಯವೇನೂ ಬೇಡ ಎನ್ನುವುದು ಕೇವಲ ಪೊಳ್ಳುಮಾತುಗಳು. ಆಯುರ್ವೆದವು ಆಹಾರ ಪದ್ಧತಿಯನ್ನು ಬಹುಹಿಂದೆಯೇ ವಿವರವಾಗಿ ಹೇಳಿರುವುದರಿಂದ ಪಥ್ಯವೆಂದಾಕ್ಷಣ ಜನರು ಆಯುರ್ವೆದದತ್ತ ನೋಡುವುದು ಸ್ವಾಭಾವಿಕ. ಪಥ್ಯ ಅನುಸರಿಸುವ ಸ್ವಭಾವವಿರಲಿ.

ಪಂಚಸೂತ್ರಗಳು

ಅಶ್ವಗಂಧಬೇರು: ಜ್ವರವಿದ್ದಾಗ ಹಿತಕರ.

ಖರಬೂಜಹಣ್ಣು: ಮನಸ್ಸಿನ ತಾಪ ಪರಿಹಾರಕ.

ಬಟಾಣಿ: ಹೆಚ್ಚಾಗಿರುವ ಅಮ್ಲಪಿತ್ತ ಶಮನ.

ಹುರುಳಿ: ಬಿಕ್ಕಳಿಕೆ ನಿವಾರಕ.

ಉಂಡೆಹುಳಿ: ಭುಜಕ್ಕೆ ಶಕ್ತಿದಾಯಕ. ಕೊನೇ ಹನಿ

ಅಸ್ಥಿಶೃಂಖಲ/ಮಂಗರವಳ್ಳಿಯ ಕಾಂಡದ ಕಷಾಯ ಸೇವನೆಯು ಹೊಟ್ಟೆಯಲ್ಲಿ ಸೇರಿರುವ ನೀರನ್ನು ಹೊರಹಾಕುತ್ತದೆ.

(ಇದು ಮನೆಯಲ್ಲಿ ಮಾಡಿಕೊಳ್ಳಬಹುದಾದ ಪರಿಹಾರ. ಇದೇ ಅಂತಿಮವಲ್ಲ. ಯಾವುದೇ ಆರೋಗ್ಯ ಸಮಸ್ಯೆಗೆ ತಜ್ಞವೈದ್ಯರನ್ನು ಸಂರ್ಪಸಲು ಮರೆಯಬೇಡಿ.)

Leave a Reply

Your email address will not be published. Required fields are marked *