ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ಕೇಶ್ವಾಪುರ ಕುಸುಗಲ್ ರಸ್ತೆಯ ಆಕ್ಸ್​ಫರ್ಡ್ ಕಾಲೇಜ್ ಬಳಿ ಆಯೋಜಿಸಿದ್ದ ಎರಡು ದಿನದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶುಕ್ರವಾರ ತೆರೆ ಬಿದ್ದಿತು.

ದೇಶ, ವಿದೇಶಗಳಿಂದ ಬಂದಿದ್ದ ನೂರಾರು ಗಾಳಿಪಟ ಆಟಗಾರರು ಹಾಗೂ ಸ್ಥಳೀಯರು 2ನೇ ದಿನವೂ ಆಕಾಶದೆತ್ತರಕ್ಕೆ ನೂರಾರು ಬಗೆಯ ರಂಗು ರಂಗಿನ ಗಾಳಿಪಟಗಳನ್ನು ಹಾರಿಸಿ ಗಮನ ಸೆಳೆದರು. ಆಯೋಜಕರು ಸಾರ್ವಜನಿಕರಿಗೆ ಉಚಿತವಾಗಿ ಗಾಳಿಪಟ ವಿತರಿಸಿ, ಹಾರಿಸಲು ಅನುಕೂಲ ಮಾಡಿಕೊಟ್ಟರು.

ಶಾಲಾ- ಕಾಲೇಜ್​ಗಳ ವಿದ್ಯಾರ್ಥಿಗಳಿಗಾಗಿ ನೃತ್ಯ ಸ್ಪರ್ಧೆ, ನೃತ್ಯ ಪ್ರದರ್ಶನ, ಸಾಂಸ್ಕೃತಿಕ ಮತ್ತು ಮನರಂಜನೆ ಕಾರ್ಯಕ್ರಮ ನಡೆದವು. ಪುಟಾಣಿಗಳಿಂದ ಹಿಡಿದು ವಯೋವೃದ್ಧರವರೆಗೆ ನೂರಾರು ಜನ ಪಾಲ್ಗೊಂಡು ಸಂಭ್ರಮಿಸಿದರು.

ಅಂತಾರಾಷ್ಟ್ರೀಯ ಕೈಟ್​ಗಳಿಗೆ ಬಹುಮಾನ: ಅಂತಾರಾಷ್ಟ್ರೀಯ ಗಾಳಿಪಟ ಆಟಗಾರರಾದ ಮಲೇಷ್ಯಾದ ನಸ್ರಿ ಅಹ್ಮದ್, ಆಸ್ಟ್ರೇಲಿಯಾದ ಸಾರತ ಕಿಂಗಸ್ಲೇ ಗುನವಾರ್ಡೆನಾ, ಕೆನಡಾದ ಫೆಡ್ರಿಕ್ ಆಂಡ್ರೆ ಟೇಲರ್, ಡೊನ್ನಾ ಲಿನ್ ಟೇಲರ್, ಸಿಂಗಪುರದ ಗಡೀಸ್ ವಿದಿಯತಿ, ಟರ್ಕಿಯ ರಿಕ್ಯಾಪ್, ಎಸ್ಟೋನಿಯಾದ ಆಂಡ್ರಿಯಾ ಸೋಕ್, ಜಾನಾ ಸೂಮ್ ಪೋಲೆಂಡ್ ವ್ಹಿಸ್ಟಾ ಗ್ವಿಸದತಾ, ರಿಯಾ ಸ್ವಸ್ತಿಕಾ ಹಾಗೂ ಬೆಂಗಳೂರಿನ ಕೈಟ್ ಕ್ಲಬ್ ಇಂಡಿಯಾ ತಂಡದ ವಿ.ಕೆ. ರಾವ್ ಅವರಿಗೆ ಎರಡು ದಿನ ಗಾಳಿಪಟ ಹಾರಿಸಿ, ಜನಮನ ರಂಜಿಸಿದ ಹಿನ್ನೆಲೆಯಲ್ಲಿ ಬಹುಮಾನ ವಿತರಿಸಿ ಸತ್ಕರಿಸಲಾಯಿತು.

ಮಾಜಿ ಸಿಎಂ ಜಗದೀಶ ಶೆಟ್ಟರ್ ಗಾಳಿಪಟ ಸ್ಪರ್ಧಿಗಳಿಗೆ ಹಾಗೂ ವಿವಿಧ ಮನರಂಜನಾ ಕ್ರೀಡೆಯ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸದ ಪ್ರಲ್ಹಾದ ಜೋಶಿ, ಶಿಲ್ಪಾ ಶೆಟ್ಟರ್, ಪಾಲಿಕೆ ಮೇಯರ್ ಸುಧೀರ ಸರಾಫ, ಉಪಮೇಯರ್ ಮೇನಕಾ ಹುರಳಿ, ಸದಸ್ಯರಾದ ಶಿವು ಮೆಣಸಿನಕಾಯಿ, ವಿಜಯಾನಂದ ಶೆಟ್ಟಿ, ಶಿವಾನಂದ ಮುತ್ತಣ್ಣವರ, ಮುಖಂಡರಾದ ತಿಪ್ಪಣ್ಣ ಮಜ್ಜಗಿ, ನಾಗೇಶ ಕಲಬುರ್ಗಿ, ಮಾ. ನಾಗರಾಜ, ಮಲ್ಲಿಕಾರ್ಜುನ ಸಾಹುಕಾರ ಮತ್ತಿತರರಿದ್ದರು.