ಗಾಲಿಕುರ್ಚಿಯಲ್ಲಿ ಹುಚ್ಚುಸಾಹಸ

ಸಾಹಸ ‘ಅಪೇಕ್ಷಣೀಯ’, ಆದರೆ ಹುಚ್ಚುಸಾಹಸ ‘ಆಕ್ಷೇಪಣೀಯ’! ಸಾಹಸದಿಂದ ಜೀವಕ್ಕೂ ಜೀವನಕ್ಕೂ ಚೈತನ್ಯ ತುಂಬಿಕೊಂಡರೆ, ಹುಚ್ಚುಸಾಹಸ ಅದಕ್ಕೆ ಸಂಚಕಾರ ತರುತ್ತದೆ ಎಂಬುದು ಬಲ್ಲವರ ಮಾತು. ಆದರೆ ವ್ಯಕ್ತಿಯೊಬ್ಬ ಇಂಥ ಹುಚ್ಚುಸಾಹಸಕ್ಕೆ ಮೊರೆಹೋದ ಸುದ್ದಿ ದಕ್ಷಿಣ ಆಫ್ರಿಕಾದಿಂದ ವರದಿಯಾಗಿದೆ.

ಗಾಲಿಕುರ್ಚಿಯಲ್ಲಿದ್ದು ಕೊಂಡೇ ರಸ್ತೆಗಿಳಿದ ಅಲ್ಲಿನ ವ್ಯಕ್ತಿಯೊಬ್ಬ ತನ್ನ ಪಾಡಿಗೆ ತಾನು ಸಹಜವೇಗದಲ್ಲಿ ರಸ್ತೆಬದಿಯಲ್ಲಿ ಸಾಗುವ ಬದಲು, ಟ್ರಕ್ ಒಂದರ ಹಿಂಭಾಗವನ್ನು ಹಿಡಿದುಕೊಂಡು ಕ್ರಮೇಣ ವರ್ಧನೆಯಾದ ಅದರ ಭಾರಿ ವೇಗದ ಸಮಕ್ಕೂ ಅನುಸರಿಸಿದ್ದು ಹುಚ್ಚುಸಾಹಸವಲ್ಲದೆ ಮತ್ತೇನು? ಇದರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಈ ದೃಶ್ಯವನ್ನು ಕಂಡ ನೆಟ್ಟಿಗರಲ್ಲಿ ಕೆಲವರು ನಿಬ್ಬೆರಗಾಗಿದ್ದರೆ, ಮತ್ತೆ ಕೆಲವರು ಇಂಥದೊಂದು ಅಪಾಯಕಾರಿ ಪ್ರವೃತ್ತಿಯನ್ನು ಖಂಡಿಸಿದ್ದಾರೆ. ರಸ್ತೆಯ ಹಂಪ್​ನ ಕಾರಣದಿಂದಲೋ ಅಥವಾ ಯಾರಾದರೂ ಅಡ್ಡ ಬಂದಿದ್ದಕ್ಕೋ ಆ ಟ್ರಕ್ಕು ಒಮ್ಮಿಂದೊಮ್ಮೆಲೇ ಬ್ರೇಕ್ ಹಾಕಿದರೆ ಅಘಾತಕ್ಕೊಳಗಾಗುವುದು ಈ ಗಾಲಿಕುರ್ಚಿಯವನೇ ಅಲ್ಲವೇ? ಎಂಬುದು ಇಂಥ ಬಹುತೇಕರ ‘ಖಂಡನಾ ನಿರ್ಣಯ’!. ಒಟ್ನಲ್ಲಿ, ನೀವೇನೇ ಹೇಳಿ, ನಮ್ಮ ಬುದ್ಧಿ ನಮ್ಮ ಕೈಲಿರಬೇಕಲ್ಲವೇ?