ಗಾಯಕಿ ನಿಮಿಕಾ ನಾಯಕಿಯಾದಾಗ..

ಸಿನಿಮಾಕ್ಕೂ ಮಾಡೆಲಿಂಗ್ ಕ್ಷೇತ್ರಕ್ಕೂ ಅವಿನಾಭಾವ ನಂಟು. ಅದೊಂದು ರೀತಿ ಹರಿವ ನೀರಿದ್ದಂತೆ. ಹೊಸ ನೀರು ಬಂದಂತೆ, ಚಿತ್ರರಂಗಕ್ಕೂ ಮಾಡೆಲಿಂಗ್​ನಲ್ಲಿ ಮಿಂಚಿದ ನಟಿಯರು ಬರುತ್ತಲೇ ಇದ್ದಾರೆ. ಇದೀಗ ಸ್ಯಾಂಡಲ್​ವುಡ್​ಗೆ 2017ರಲ್ಲಿ ಮಿಸ್ ಇಂಡಿಯಾ ಸೂಪರ್ ಟ್ಯಾಲೆಂಟ್ ಕಿರೀಟ ಮುಡಿಗೇರಿಸಿಕೊಂಡಿದ್ದ ನಿಮಿಕಾ ರತ್ನಾಕರ್ ಆಗಮನವಾಗಿದೆ.

ನಿಮಿಕಾ ಮೂಲತಃ ಮಂಗಳೂರು ಹುಡುಗಿ. ತುಳು ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವ ಅವರಿಗಿದೆ. ಕನ್ನಡದಲ್ಲಿ ‘ರಾಮಧಾನ್ಯ’, ‘ಬಿಂದಾಸ್ ಗೂಗ್ಲಿ’ ಇನ್ನೂ ಹೆಸರಿಡದ ಚಿತ್ರ ಸೇರಿ ಒಟ್ಟು ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಎಲ್ಲ ಚಿತ್ರಗಳ ಶೂಟಿಂಗ್ ಮುಗಿದಿದ್ದು, ಬಿಡುಗಡೆಯ ಹಂತದಲ್ಲಿವೆ. ಸಿನಿಮಾಕ್ಕೆ ಎಂಟ್ರಿ ಕೊಡುವ ಬಹುತೇಕರು ನಟನೆಯೊಂದನ್ನು ಮಾನದಂಡವಾಗಿಟ್ಟುಕೊಂಡು, ಅದರಲ್ಲೇ ಹೆಚ್ಚು ಪಳಗಿ ಕ್ಯಾಮರಾ ಎದುರಿಸುತ್ತಾರೆ. ಆದರೆ ನಿಮಿಕಾ ಮಾತ್ರ ಕೊಂಚ ಭಿನ್ನ. ನಟನೆಗಿಂತಲೂ ಗಾಯನದ ಮೂಲಕವೇ ಹೆಚ್ಚು ಗುರುತಿಸಿಕೊಂಡಿದ್ದಾರೆ ನಿಮಿಕಾ. ರಾಜ್ಯಪ್ರಶಸ್ತಿ ಪಡೆದ ತುಳು ಚಿತ್ರ ‘ಮದಿಪು’ದಲ್ಲಿನ ಎರಡು ಜಾನಪದ ಶೈಲಿಯ ಹಾಡುಗಳಿಗೆ ನಿಮಿಕಾ ಧ್ವನಿ ನೀಡಿದ್ದಾರೆ. ‘ಪಿಲಿಬೈಲು ಯಮನಕ್ಕ’ ಹಾಗೂ ಕನ್ನಡದ ‘ಬಿಂದಾಸ್ ಗೂಗ್ಲಿ’ ಚಿತ್ರಗಳಲ್ಲೂ ಒಂದೊಂದು ಹಾಡನ್ನು ಹಾಡಿದ್ದಾರೆ. ಈಗಾಗಲೇ ಬಿಡುಗಡೆಗೆ ಸಿದ್ಧಗೊಂಡಿರುವ ಟಿ.ಎನ್. ನಾಗೇಶ್ ನಿರ್ದೇಶನದ ‘ರಾಮಧಾನ್ಯ’ ಚಿತ್ರದಲ್ಲಿ ಮೂರು ಭಿನ್ನ ಪಾತ್ರಗಳನ್ನು ಪೋಷಿಸಿದ ಹೆಚ್ಚುಗಾರಿಕೆ ಅವರದ್ದು. ‘ಪೌರಾಣಿಕ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ ‘ರಾಮಧಾನ್ಯ’. ಸೀತೆ, ಕನಕದಾಸ ಅವರ ಪತ್ನಿ ಹಾಗೂ ಮಾಡರ್ನ್ ಹುಡುಗಿ ರೀತಿಯ ಮೂರು ಭಿನ್ನ ಶೇಡ್​ನಲ್ಲಿ ಕಾಣಿಸಿಕೊಂಡಿದ್ದೇನೆ’ ಎನ್ನುವ ನಿಮಿಕಾ, ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್ ರೀತಿಯ ಪಾತ್ರ ಸಿಕ್ಕಿದ್ದಕ್ಕೆ ಖುಷಿಯಲ್ಲಿದ್ದಾರೆ. ‘ಮೊದಲ ಸಿನಿಮಾದಲ್ಲಿ ಈ ರೀತಿಯ 3 ಭಿನ್ನ ಪಾತ್ರಗಳನ್ನು ನಿಭಾಯಿಸುವ ಪಾತ್ರ ಸಿಗುವುದು ತುಂಬ ಅಪರೂಪ. ಆದರೆ ಆ ವಿಷಯದಲ್ಲಿ ನಾನು ಲಕ್ಕಿ’ ಎಂದು ಹೇಳಿಕೊಳ್ಳುತ್ತಾರೆ. ಅದೇ ರೀತಿ ‘ಬಿಂದಾಸ್ ಗೂಗ್ಲಿ’ ಚಿತ್ರದಲ್ಲಿ ನಿಮಿಕಾ, ವಿಧವೆಯ ಪಾತ್ರವನ್ನು ನಿಭಾಯಿಸಿದ್ದಾರೆ. ಡಾನ್ಸ್​ಗೆ ಸಂಬಂಧಿಸಿದ ಈ ಸಿನಿಮಾದಲ್ಲಿ ಅವರಿಗೆ ಧರ್ಮ ಕೀರ್ತಿರಾಜ್ ಜೋಡಿಯಾಗಿದ್ದಾರೆ.

ಕೊರಿಯಾದಲ್ಲಿ ನಡೆದ ‘ಮಿಸ್ ಸೂಪರ್ ಟ್ಯಾಲೆಂಟ್ ಆಫ್ ದಿ ವರ್ಲ್ಡ್’ನಲ್ಲಿ ಬೆಸ್ಟ್ ಮ್ಯೂಜಿಷಿಯನ್ ಟೈಟಲ್ ಪಡೆದುಕೊಂಡಿದ್ದೇನೆ. ನಟನೆಗಿಂತಲೂ ಗಾಯನವನ್ನು ಹೆಚ್ಚು ಪ್ರೀತಿಸುತ್ತೇನೆ. ಅದೇ ರೀತಿ ಸಿನಿಮಾದಲ್ಲೂ ನಟಿಸುತ್ತಿದ್ದೇನೆ. ನಟನೆಯ ಜತೆ ಗಾಯನವನ್ನೂ ಮುಂದುವರಿಸಿಕೊಂಡು ಹೋಗುತ್ತೇನೆ.

| ನಿಮಿಕಾ ನಟಿ

Leave a Reply

Your email address will not be published. Required fields are marked *