ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಾಳೆ

ಬ್ಯಾಡಗಿ: ನೆರೆ ಸಂತ್ರಸ್ತರಿಗೆ ಶೀಘ್ರ ಪರಿಹಾರ ವಿತರಣೆ, ರೈತರ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾವೇರಿಯ ಮಹಾತ್ಮ ಗಾಂಧಿ ಪ್ರತಿಮೆ ಎದುರು ಆ. 15ರಂದು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಂತಂತ್ರ್ಯ ಸಿಕ್ಕು ಏಳು ದಶಕಗಳಾದರೂ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಇಂದಿಗೂ ಮೂಲಸೌಲಭ್ಯ ಕಲ್ಪಿಸಿಲ್ಲ. 10 ದಿನಗಳಿಂದ ಸುರಿದ ತೀವ್ರ ಮಳೆಗೆ ಲಕ್ಷಾಂತರ ಜನ ಮನೆ, ಮಠ ಕಳೆದುಕೊಂಡು ಕೋಟ್ಯಂತರ ರೂ. ನಷ್ಟವಾಗಿದೆ. ಮುಖ್ಯಮಂತ್ರಿಗಳು ಈವರೆಗೂ ಸಚಿವ ಸಂಪುಟ ವಿಸ್ತರಣೆ ಮಾಡದೆ, ಏಕಾಂಗಿಯಾಗಿ ಆಡಳಿತ ನಡೆಸುತ್ತಿರುವುದು ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.

ಸಾವಿರಾರು ಜಾನುವಾರುಗಳು ಮೇವಿಲ್ಲದ ಜೀವಹಿಡಿದುಕೊಂಡಿದ್ದು, ಅಲ್ಲಲ್ಲಿ ಗೋಶಾಲೆ ತುರ್ತಾಗಿ ತೆರೆಯಬೇಕು ಎಂದು ಆಗ್ರಹಿಸಿದರು. ಬರ, ಅತಿವೃಷ್ಟಿಗೆ ಸಿಲುಕಿದ ರೈತರು ತೊಂದರೆಯಲ್ಲಿದ್ದು, ಸರ್ಕಾರ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಆದೇಶ ಹೊರಡಿಸಬೇಕು. ಬೆಳೆ ನಷ್ಟವಾದ ರೈತರಿಗೆ ಉಚಿತ ಬೀಜ- ಗೊಬ್ಬರ ಪೂರೈಸಲು ಮುಂದಾಗಬೇಕು ಎಂದು ಒತಾಯಿಸಿದರು.

ಜಿಲ್ಲೆಯಲ್ಲಿ 1200 ಜನ ರೈತರಿಗೆ ಬಗರ ಹುಕುಂ ಹಕ್ಕುಪತ್ರ ನೀಡಿದ್ದು, ಈವರೆಗೂ ಉತಾರ ಸಿಗುತ್ತಿಲ್ಲ. ರೈತರ ಬೆಳೆ ನಾಶವಾಗಿದ್ದು, ಅರ್ಜಿಯೊಂದಿಗೆ ಕಂದಾಯ ಇಲಾಖಾಧಿಕಾರಿಗಳು ಬೆಳೆ ದೃಢೀಕರಣ, ಉತಾರ ದಾಖಲೆ ಕೇಳುತ್ತಿದ್ದಾರೆ. ಹೀಗಾಗಿ ಸಾವಿರಾರು ರೈತರು ಜಿಲ್ಲೆಯಲ್ಲಿ ಪರಿಹಾರಕ್ಕೆ ಗೋಳಾಡುತ್ತಿದ್ದಾರೆ. ಕೂಡಲೆ ಜಿಲ್ಲಾಧಿಕಾರಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕ್ರಮ ಜರುಗಿಸಬೇಕು ಎಂದರು.

ಸಂಘದ ತಾಲೂಕಾಧ್ಯಕ್ಷ ಹೊನ್ನಪ್ಪ ರ್ಬಾ ಮಾತನಾಡಿ, ಪ್ರಸಕ್ತ ಸಾಲಿನ ಮುಂಗಾರು ಬೆಳೆ ವಿಮೆ ಕಂತು ತುಂಬಲು ನಿಗದಿಪಡಿಸಿದ್ದ ಅವಧಿ ಮುಗಿದಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆ. 14ರವರೆಗೆ ವಿಸ್ತರಿಸುವುದಾಗಿ ಹೇಳಿದ್ದರು. ಆದರೆ, ಅದು ಜಾರಿಗೆ ಬಂದಿಲ್ಲ. ಇದರಿಂದ ಸಾವಿರಾರು ರೈತರು ವಿಮೆ ಕಂತು ತುಂಬುವ ಪ್ರಕ್ರಿಯೆಯಿಂದ ವಂಚಿತರಾಗಿದ್ದು, ಕೂಡಲೆ ಅವಧಿ ವಿಸ್ತರಿಸಬೇಕು. ಕಳೆದ ಬಾರಿಯ ಬೆಳೆ ವಿಮೆ ಹಣ ಬಿಡುಗಡೆ ಮಾಡಬೇಕು. ನಿರ್ಲಕ್ಷಿಸಿದಲ್ಲಿ ಎಲ್ಲ ತಾಲೂಕಿನ ತಹಸೀಲ್ದಾರ್ ಕಾರ್ಯಾಲಯ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಉತ್ತರ ಕರ್ನಾಟಕ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಚಂದ್ರಶೇಖರ ಉಪ್ಪಿನ, ಕಾರ್ಯಾಧ್ಯಕ್ಷ ಶಂಕರರಾವ್ ಕುಲಕರ್ಣಿ, ಪದಾಧಿಕಾರಿಗಳಾದ ಸಣ್ಣಪ್ಪ ಚಿನ್ನಿಕಟ್ಟಿ, ಚಂದ್ರು ಗುತ್ತೂರು, ಕಾಳಪ್ಪ ಲಮಾಣಿ, ಷಣ್ಮುಖಪ್ಪ ಗಿರ್ಜಿ, ಮಲ್ಲೇಶ ಲಮಾಣಿ, ರಾಮಜ್ಜ ಅಂಗರಗಟ್ಟಿ, ಫಕ್ಕೀರಪ್ಪ ಅಂಗರಗಟ್ಟಿ ಇತರು ಸುದ್ದಿಗೋಷ್ಠಿಯಲ್ಲಿ ಇದ್ದರು.

Leave a Reply

Your email address will not be published. Required fields are marked *