ಗಾಂಧೀಜಿ ಸಂದೇಶ ಸಾರ್ವಕಾಲಿಕ

ಶಿವಮೊಗ್ಗ: ಸತ್ಯಾಗ್ರಹ, ಅಹಿಂಸಾತ್ಮಕ ಚಳವಳಿಗಳಿಂದ ಗಮನ ಸೆಳೆದಿದ್ದ ಗಾಂಧೀಜಿ ನವಯುಗ ನೇತಾರರು. ಅವರ ಸಂದೇಶಗಳು ಸಾರ್ವಕಾಲಿಕ ಎಂದು ಜಿಪಂ ಸಿಇಒ ಎಂ.ಎಲ್.ವೈಶಾಲಿ ಹೇಳಿದರು.

ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸೋಮವಾರ ಏರ್ಪಡಿಸಿದ್ದ ಗಾಂಧೀಜಿ ಜೀವನದ ವಿವಿಧ ಘಟ್ಟಗಳನ್ನು ಪರಿಚಯಿಸುವ ಮೂರು ದಿನಗಳ ವಿಶೇಷ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಹಾತ್ಮ ಗಾಂಧೀಜಿ ಜೀವನ ಅನುಕರಣೀಯ. ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿದ್ದ ಶಾಂತಿ, ಅಹಿಂಸೆ, ಸತ್ಯ ಎಂಬ ಅಂಶಗಳನ್ನು ಅಸ್ತ್ರವನ್ನಾಗಿ ಮಾರ್ಪಡಿಸಿದ ಗಾಂಧೀಜಿ ಇವುಗಳನ್ನು ಬ್ರಿಟಿಷರ ವಿರುದ್ಧ ಪ್ರಯೋಗಿಸಿ, ದೇಶಕ್ಕೆ ಸ್ವಾತಂತ್ರ್ಯಂದು ಕೊಡುವಲ್ಲಿ ಯಶಸ್ವಿಯಾಗಿದ್ದರು ಎಂದರು.

ವಾರ್ತಾ ಇಲಾಖೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ಅಪರೂಪದ ಚಿತ್ರಗಳಲ್ಲಿ ಗಾಂಧೀಜಿಯವರ ಜೀವನ, ಸಾಧನೆ ಹಾಗೂ ಅಪರೂಪದ ಘಟನಾವಳಿಗಳನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳು ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ಕಣ್ಣೆದುರು ತರುತ್ತವೆ ಎಂದು ಹೇಳಿದರು. ಗಾಂಧೀಜಿ ಅನುಯಾಯಿಗಳು, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು, ಮಕ್ಕಳು ಈ ಛಾಯಾಚಿತ್ರ ಪ್ರದರ್ಶನ ವೀಕ್ಷಿಸಿ ಗಾಂಧೀಜಿ ಜೀವನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕೆಂದರು.

23 ಛಾಯಾಚಿತ್ರಗಳು: ಈ ಪ್ರದರ್ಶನದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಘಟ್ಟಗಳನ್ನು ವಿವರಿಸುವ, ಗಾಂಧೀಜಿ ಬದುಕು, ಹೋರಾಟವನ್ನು ವಿವರಿಸುವ 23 ಛಾಯಾಚಿತ್ರಗಳನ್ನು ಇರಿಸಲಾಗಿದೆ. ಗಾಂಧೀಜಿ ಬಾಲ್ಯದ ದಿನಗಳು, ಐತಿಹಾಸಿಕ ಸಂದರ್ಭಗಳನ್ನು ವಿವರಿಸುವ ಛಾಯಾಚಿತ್ರಗಳೂ ಇಲ್ಲಿವೆ.

ಜಿಲ್ಲೆಗೆ ಭೇಟಿ ನೀಡಿದ ನೆನಪು: ಮಹಾತ್ಮ ಗಾಂಧೀಜಿ ರಾಜ್ಯದ ವಿವಿಧ ಭಾಗಗಳಿಗೆ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸ ಮಾಡಿದ ದಿನಾಂಕಗಳನ್ನು ಮಾಹಿತಿಗಾಗಿ ಇರಿಸಲಾಗಿದೆ. 1927ರ ಆಗಸ್ಟ್ 15 ರಿಂದ 18ರವರೆಗೆ ಅವರು ಜಿಲ್ಲೆಯ ವಿವಿಧೆಡೆ ಸಂಚರಿಸಿದ್ದರು. 15 ರಂದು ಶಿವಮೊಗ್ಗಕ್ಕೆ ಆಗಮಿಸಿದ್ದ ಗಾಂಧೀಜಿ 16ರಂದು ಆಯನೂರು, ಕುಂಸಿ, ಸಾಗರಕ್ಕೆ ಭೇಟಿ ನೀಡಿದ್ದರು. ಬಳಿಕ ಶಿವಮೊಗ್ಗಕ್ಕೆ ಬಂದು ವಾಸ್ತವ್ಯ ಮಾಡಿದ್ದರು. 17ರಂದು ಗಾಜನೂರು, ಮಂಡಗದ್ದೆ, ತೀರ್ಥಹಳ್ಳಿಗೆ ಭೇಟಿ ನೀಡಿ ಶಿವಮೊಗ್ಗಕ್ಕೆ ಮರಳಿದ್ದರು. 18ರಂದು ಭದ್ರಾವತಿಯಲ್ಲಿ ಸಭೆ ನಡೆಸಿ ಚಿಕ್ಕಮಗಳೂರು ಜಿಲ್ಲೆಗೆ ಪ್ರಯಾಣ ಬೆಳೆಸಿದ್ದರು ಎಂಬುವುದನ್ನು ಮಾಹಿತಿಗಾಗಿ ಇರಿಸಲಾಗಿದೆ.

ಕೆಎಸ್​ಆರ್​ಟಿಸಿ ವಿಭಾಗೀಯ ಸಂಚಾಲನ ಅಧಿಕಾರಿ ವಿ.ಸತೀಶ್, ಸಿದ್ದೇಶ್ ಹಾಗೂ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಮಾರುತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *