ಶ್ರೀರಂಗಪಟ್ಟಣ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದವನನ್ನು ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಮೈಸೂರು ನಗರದ ಕಲ್ಯಾಣಗಿರಿ ನಿವಾಸಿ ಸೈಯದ್ ಮೀರ್ ಅವರ ಪುತ್ರ ಸೈಯದ್ ಉಮರ್ ಬಂಧಿತ ಆರೋಪಿ. ಪಟ್ಟಣದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಕೆಳ ಸೇತುವೆಯ ಗಂಜಾಂ ರಸ್ತೆಯಲ್ಲಿ ಭಾನುವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ 2.10 ಕೆಜಿ ತೂಕದ ಹೂವಿನ ಸಮೇತ ತೆನೆ ಬೀಜ ಮಿಶ್ರಿತ ಘಾಟು ವಾಸನೆಯ ಒಣ ಗಾಂಜಾವನ್ನು ಬೈಕ್‌ನಲ್ಲಿ ಸಾಗಣೆ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಶ್ರೀರಂಗಪಟ್ಟಣ ವಲಯ ಅಬಕಾರಿ ನೀರಿಕ್ಷಕ ವೈ.ಜೆ.ಪ್ರಫುಲ್ಲಾ ಚಂದ್ರ, ಸಿಬ್ಬಂದಿ ರಾಮು, ನಾಗರಾಜು ಕಾರ್ಯಾಚರಣೆ ನಡೆಸಿ ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.