ಗಾಂಜಾ ಮಾರಾಟಗಾರರ ಬಂಧನ

ಹುಬ್ಬಳ್ಳಿ: ಇಲ್ಲಿನ ಮಂಟೂರ ರಸ್ತೆ ಅಹ್ಮದ ನಗರದ ಮಲ್ಲು ಹೋಟೆಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ತೆಲಂಗಾಣ ಮೂಲದ ಮೂವರು ಯುವಕರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬುಧವಾರ ಬಂಧಿಸಿ, 17,850 ರೂ. ಮೌಲ್ಯದ 850 ಗ್ರಾಂ ಗಾಂಜಾ, 1,100 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಪೃಥ್ವಿರಾಜ ತಮ್ಮಲಿನಾಗಬೋತುಲಾ (20), ಸೈಯದ ಅರ್ಷದ (19) ಹಾಗೂ ಡಿ. ಪ್ರಶಾಂತ ಲಿಂಗಾಜಿ (19) ಬಂಧಿತ ಆರೋಪಿಗಳು. ಎಸಿಪಿ ಎಸ್.ಬಿ. ಕಟ್ಟಿಮನಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಬೆಂಡಿಗೇರಿ ಠಾಣೆ ಇನ್ಸ್​ಪೆಕ್ಟರ್ ಡಿ. ಸಂತೋಷಕುಮಾರ, ಪಿಎಎಸ್​ಐ ಎಸ್.ಆರ್. ಕಿತ್ತೂರ, ಸಿಬ್ಬಂದಿ ಜೆ.ಸಿ. ರಜಪೂತ, ಎಚ್.ಎಂ. ನಾಯಕ, ಪಿ.ಎಸ್. ತಗಡಿನಮನಿ, ಎಸ್.ಎಂ. ತಿರಕಣ್ಣವರ, ಡಿ.ಆರ್. ಪಮ್ಮಾರ, ಇಚ್ಚಂಗಿ, ಜಿ.ವಿ. ಹಿರೇಮಠ ತಂಡದಲ್ಲಿದ್ದರು.
ರೈಲು ಮೂಲಕ ಸಾಗಣೆ
: ಬಂಧಿತರು ಆಂಧ್ರ, ತೆಲಂಗಾಣದಿಂದ ಗಾಂಜಾ ತೆಗೆದುಕೊಂಡು ರೈಲಿನ ಮೂಲಕ ಹುಬ್ಬಳ್ಳಿಗೆ ಬಂದಿದ್ದರು. ವಿವಿಧ ಬಡಾವಣೆಗಳಲ್ಲಿ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೈಂಟಿಸ್ಟ್ ಮಂಜ್ಯಾ ವಿರುದ್ಧ ಆತ್ಮಹತ್ಯೆ ದೂರು
ಧಾರವಾಡ: ಇಲ್ಲಿನ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರೆ ವಿಷ ಸೇವನೆಗೆ ಯತ್ನಿಸಿದ್ದ ಆರೋಪಿ ಸೈಂಟಿಸ್ಟ್ ಮಂಜ್ಯಾ ವಿರುದ್ಧ ಉಪನಗರ ಠಾಣೆಯಲ್ಲಿ ಆತ್ಮಹತ್ಯೆ ಯತ್ನ ದೂರು ದಾಖಲಾಗಿದೆ.
ಹುಬ್ಬಳ್ಳಿಯ ಕುಮಾರೇಶ್ವರ ಪಿಳ್ಳೆ ಕೊಲೆ ಆರೋಪ ಎದುರಿಸುತ್ತಿರುವ ಸೈಂಟಿಸ್ಟ್ ಮಂಜ್ಯಾ ಅಲಿಯಾಸ್ ಮಂಜುನಾಥ ಕೃಷ್ಣಪ್ಪ ಭಂಡಾರಿ ಎಂಬಾತನನ್ನು 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆತರಲಾಗಿತ್ತು. ಈ ವೇಳೆ ತೆರೆದ ಕೋರ್ಟ್ ಹಾಲ್​ನಲ್ಲಿಯೇ ತನ್ನ ಜೇಬಿನಲ್ಲಿದ್ದ ವಿಷದ ಬಾಟಲ್ ತೆಗೆದು ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ನ್ಯಾಯಾಲಯದ ಪ್ರಭಾರ ಸಿಇಒ ಶಾಲಿನಿ ಜಾಧವ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೆಳಗಾವಿ ಕೇಂದ್ರ ಕಾರಾಗೃಹದಿಂದ ಬಂದಿದ್ದ ಸೈಂಟಿಸ್ಟ್ ಮಂಜ್ಯಾಗೆ ಯಾರು ವಿಷದ ಬಾಟಲ್ ನೀಡಿದರು ಎಂಬುದನ್ನು ತನಿಖೆ ಮೂಲಕ ಪತ್ತೆ ಹಚ್ಚಬೇಕಿದೆ. ಮಂಗಳವಾರ ನ್ಯಾಯಾಲಯದಲ್ಲಿ ವಿಷ ಸೇವಿಸಿದ್ದ ಆರೋಪಿ ಮಂಜ್ಯಾನನ್ನು ಕಿಮ್ಸ್​ನಲ್ಲಿ ವೈದ್ಯಕೀಯ ನಿಗಾದಲ್ಲಿ ಇಡಲಾಗಿತ್ತು. ಬುಧವಾರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದರಿಂದ ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ವಾಪಸ್ ಬೆಳಗಾವಿ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.
ಪೊಲೀಸರಿಗೆ ಸಂಕಷ್ಟ:ಈ ಹಿಂದೆ ಪ್ರಕರಣವೊಂದರಲ್ಲಿ ನ್ಯಾಯಾಲಯದಲ್ಲಿ ಗಲಾಟೆ ಮಾಡಿಕೊಂಡಿದ್ದ ಸೈಂಟಿಸ್ಟ್ ಮಂಜ್ಯಾ ವರ್ತನೆಯಿಂದ ವಿಚಾರಣೆಗೆ ಕರೆತಂದಿದ್ದ ಪೊಲೀಸರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈಗ ಮತ್ತೆ ನ್ಯಾಯಾಲಯದಲ್ಲಿ ವಿಷದ ಬಾಟಲ್ ತಂದು ಆತ್ಮಹತ್ಯೆಗೆ ಯತ್ನಿಸಿರುವುದರಿಂದ ಬೆಳಗಾವಿಯಿಂದ ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆಗೆ ಕರೆತಂದಿದ್ದ ಪೊಲೀಸರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಮಟ್ಕಾ ಜಾಲ ಭೇದಿಸಿದ ಸಿಸಿಬಿ ಪೊಲೀಸರು
ಹುಬ್ಬಳ್ಳಿ: ಇಲ್ಲಿನ ಬಾಕಳೆ ಗಲ್ಲಿ ಕರಿಯಮ್ಮನ ಗುಡಿ ಬಳಿ ಮನೆಯೊಂದರಲ್ಲಿ ಬುಧವಾರ ಮಟ್ಕಾ ದಂಧೆ ನಡೆಸುತ್ತಿದ್ದ ಬೃಹತ್ ಜಾಲ ಭೇದಿಸಿದ ಹು-ಧಾ ಸಿಸಿಬಿ ಪೊಲೀಸರು, ಇಬ್ಬರು ಬುಕ್ಕಿಗಳು ಸೇರಿ 12 ಜನರನ್ನು ಬಂಧಿಸಿದ್ದಾರೆ. 95,914 ರೂ. ನಗದು, 25 ಮೊಬೈಲ್, 1 ಬೈಕ್ ವಶಪಡಿಸಿಕೊಂಡಿದ್ದಾರೆ.
ಬುಕ್ಕಿಗಳಾದ ಸಚಿನ್ ಮಿಸ್ಕಿನ್, ಅನಿಲ್ ಮಿಸ್ಕಿನ್ ಹಾಗೂ ಇತರರು ಬಂಧಿತರು. ಕಲ್ಯಾಣಿ ಮುಂಬೈ ಪೇಟೆ ಧಾರಣೆ ಆಧಾರದ ಮೇಲೆ 1 ರೂ.ಗೆ 90 ರೂ. ಕೊಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ಮಟ್ಕಾ ಜೂಜಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸಿಪಿ ಎಸ್.ಬಿ. ಕಟ್ಟಿಮನಿ ಹಾಗೂ ಸಿಸಿಬಿ ಇನ್ಸ್​ಪೆಕ್ಟರ್ ವಿನೋದ ಮುಕ್ತೇದಾರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಈ ತಂಡಕ್ಕೆ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ತಿಳಿಸಿದರು.
ಸಚಿನ್ ಮಿಸ್ಕಿನ್ ಗಡಿಪಾರಿಗೆ ಆದೇಶ: ಮಟ್ಕಾ ಬುಕ್ಕಿ ಸಚಿನ್ ಮಿಸ್ಕಿನ್ ಗಡಿಪಾರು ಮಾಡುವಂತೆ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.