ಗಾಂಜಾ ಬಲೆಗೆ ಪ್ರೌಢ ಮಕ್ಕಳು!

ಹುಬ್ಬಳ್ಳಿ:ಒಂದು ಕಾಲದಲ್ಲಿ ದೊಡ್ಡವರೇ ಕದ್ದು ಮುಚ್ಚಿ ಸಿಗರೇಟ್ ಸೇದಲು ಹೆದರುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. 15 ವರ್ಷದ ಕೆಲ ಹೈಸ್ಕೂಲ್ ಹುಡುಗರು ಸಿಗರೇಟ್ ಬಾಯಿಗಿಟ್ಟು ಲೈಟರ್ ಹೊತ್ತಿಸುತ್ತಿದ್ದಾರೆ. ಆ ಮೂಲಕ ಆರಂಭವಾಗಿ ಬಳಿಕ ಮದ್ಯ ಸೇವನೆ, ಗಾಂಜಾದಂಥ ಭಯಾನಕ ಜಾಲದಲ್ಲಿ ಸದ್ದಿಲ್ಲದೇ ಬೀಳುತ್ತಿದ್ದಾರೆ ಎಂಬ ವಿಷಯ ಪಾಲಕರಲ್ಲಿ ಗಾಬರಿ ಹುಟ್ಟಿಸುತ್ತಿದೆ.

ಪ್ರತಿ ತಿಂಗಳು ನಮ್ಮ ಆಸ್ಪತ್ರೆಗೆ 30ಕ್ಕೂ ಹೆಚ್ಚು ಗಾಂಜಾ ಚಟಕ್ಕೆ ದಾಸರಾಗಿರುವ ರೋಗಿಗಳು ಬರುತ್ತಾರೆ. ಅದರಲ್ಲಿ ಮೂರ್ನಾಲ್ಕು ಹೈಸ್ಕೂಲ್ ವಿದ್ಯಾರ್ಥಿಗಳ ಪ್ರಕರಣಗಳು ಇರುತ್ತವೆ. ಮೊದ ಮೊದಲು ಸಿಗರೇಟ್ ಸೇದುತ್ತಾರೆ. ಅದು ಬೇಸರವಾದಾಗ ಮದ್ಯ ಸೇವಿಸುತ್ತಾರೆ. ಅದೂ ಬೇಸರವಾದರೆ ಕೆಲವರು ಗಾಂಜಾ ಅಮಲಿನಲ್ಲಿ ತೇಲುತ್ತಾರೆ. ಇದು ಪಾಲಕರಿಗೆ ಗೊತ್ತಾದಾಗ ವೈದ್ಯರ ಬಳಿ ಬರುತ್ತಾರೆ. ಇದರಿಂದ ತರಗತಿಗಳಿಗೆ ಗೈರಾಗುವುದು, ಶಾಲೆಯನ್ನೇ ಬಿಡುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಧಾರವಾಡದ ಡಿಮ್ಹಾನ್ಸ್ ಪ್ರಭಾರಿ ನಿರ್ದೇಶಕ ಡಾ. ಮಹೇಶ ದೇಸಾಯಿ.

ಹಾವಿನಿಂದ ಕಚ್ಚಿಸಿಕೊಳ್ತಾರೆ!

ಹುಬ್ಬಳ್ಳಿ ಮೂಲದ ಯುವಕನೊಬ್ಬ ಮುಂಬೈನ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಸ್ನೇಹಿತರ ಜತೆ ಹಾವಾಡಿಗರ ಹತ್ತಿರ ಹೋಗಿ ಹಾವಿನಿಂದ ಕಚ್ಚಿಸಿಕೊಳ್ಳುತ್ತಿದ್ದ. ಮೊದಲು ಒಂದೆರೆಡು ಬಾರಿ ಬಟ್ಟೆಗೆ ಹಾವಿನಿಂದ ಕಚ್ಚಿಸಿ ವಿಷ ತೆಗೆಸುತ್ತಾರೆ. ನಂತರ ಕಡಿಮೆ ವಿಷ ಇದ್ದಾಗ ಮನುಷ್ಯರ ದೇಹಕ್ಕೆ ಕಚ್ಚಿಸಿ ಮಜಾ ತೆಗೆದುಕೊಳ್ಳುತ್ತಾರೆ. ಈ ರೀತಿಯ ಚಟಕ್ಕೆ ಅಂಟಿಕೊಂಡು ದೈಹಿಕ- ಮಾನಸಿಕ ಆರೋಗ್ಯ ಕೆಡಿಸಿಕೊಂಡಿದ್ದ 34 ವರ್ಷದ ಯುವಕ ನನ್ನ ಬಳಿ ಚಿಕಿತ್ಸೆ ಪಡೆದುಕೊಂಡಿದ್ದ ಎನ್ನುತ್ತಾರೆ ಡಾ. ಮಹೇಶ ದೇಸಾಯಿ.

ಪೆಟ್ರೋಲ್ ಕೆಮಿಕಲ್ ಬಳಕೆ

ಇತ್ತೀಚೆಗೆ ಕೆಲ ಯುವಕರು ಸಾಲ್ವೆಂಟ್ ಅಬ್ಯೂಸ್ ಎಂಬ ಪೆಟ್ರೋಲ್ ಕೆಮಿಕಲ್ ಬಳಕೆಯ ಹಿಂದೆ ಬಿದ್ದಿದ್ದಾರೆ. ಪೆಟ್ರೋಲ್, ಥಿನ್ನರ್, ವೈಟ್ನರ್, ಫೆವಿಕಾಲ್ ವಾಸನೆ ಮೂಲಕ ನಶೆ ಅನುಭವಿಸುತ್ತಿದ್ದಾರೆ. ವೈಟ್ನರ್ ಬಿಸಿ ಮಾಡಿ ಅದರ ಉಗಾ ತೆಗೆದುಕೊಳ್ಳುತ್ತಾರೆ. ಅದು ರಕ್ತನಾಳಗಳಿಗೆ ಹೋಗಿ ವೇಗವಾಗಿ ಕಿಕ್ ಕೊಡುತ್ತದೆ. ಅಷ್ಟೇ ಬೇಗ ಆರೋಗ್ಯ ಕೆಡಿಸುತ್ತದೆ.

ಪಾಲಕರು ಏನು ಮಾಡಬೇಕು?: ಪಾಲಕರು ಮಕ್ಕಳ ಮೇಲೆ ಸದಾ ನಿಗಾ ಇಡಬೇಕು. ಅವರ ಸ್ನೇಹಿತ ವಲಯ ಎಂಥದ್ದು ಎಂದು ಗಮನಿಸಬೇಕು. ಅನುಮಾನ ಬಂದರೆ ಅವರಿಗೆ ಗೊತ್ತಾಗದಂತೆ ಪರಿಶೀಲಿಸಬೇಕು. ಗಾಂಜಾ ಮತ್ತಿತರ ಮಾದಕ ದ್ರವ್ಯಕ್ಕೆ ಅಂಟಿಕೊಂಡಿರುವ ಸಂಶಯ ಬಂದರೆ ಅದು ಅಪರಾಧ ಎಂದು ಭಾವಿಸಬಾರದು. ಅವರಿಗೆ ಶಿಕ್ಷೆ ನೀಡಬಾರದು. ಬದಲಾಗಿ ಅದೊಂದು ರೋಗ ಎಂದು ಭಾವಿಸಿ ಮನೋವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಚಿಕಿತ್ಸೆಗೆ ಸಹಕಾರ ನೀಡದಿದ್ದರೆ ಪುನರ್ ವಿಕಾಸ ಕೇಂದ್ರಕ್ಕೆ ಕಳುಹಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಇತರೆ ಮಾದಕ ದ್ರವ್ಯಗಳು

ಕೋರಿನ್ ಪಾಸ್ಟ್ರೇಟ್ ಕೆಮ್ಮಿನ ಔಷಧಿ, ಅಲ್ಟ್ರಾಸೆಟ್ ಪೇನ್ ಕಿಲ್ಲರ್ ಮಾತ್ರೆ, ಒಪಿಎಂ ಮಾತ್ರೆ, ಅಪಘಾತವಾದಾಗ ಬಳಸುವ ಕೋಡ್ಪಿನ್ ಇಂಜೆಕ್ಷನ್ ತೆಗೆದುಕೊಳ್ಳುವ ಮೂಲಕ ನಶೆಯಲ್ಲಿ ತೇಲುತ್ತಾರೆ. ಕೆಲ ಫಾರ್ಮಸಿಗಳು ಇವನ್ನು ವೈದ್ಯರ ಸಲಹೆ ಇಲ್ಲದಿದ್ದರೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಾರೆ ಎಂಬ ಆರೋಪವಿದೆ. ಇವುಗಳನ್ನು ನಿರಂತರವಾಗಿ ತೆಗೆದುಕೊಂಡರೆ ಕಿಡ್ನಿ ತೊಂದರೆ ಉಂಟಾಗುತ್ತದೆ. ಮಾನಸಿಕ ಸಮಸ್ಯೆ, ಮಿದುಳಿಗೆ ಸಮಸ್ಯೆ ಆಗುತ್ತದೆ.

ಪೊಲೀಸರ ಪಾತ್ರ ದೊಡ್ಡದು

ಗಾಂಜಾದಂಥ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ದೊಡ್ಡ ಜಾಲವೇ ಇದೆ. ಅಂತಾರಾಜ್ಯ ಮಟ್ಟದಲ್ಲಿ ವ್ಯವಹರಿಸುವ ಇವುಗಳನ್ನು ಮಟ್ಟ ಹಾಕದಿದ್ದರೆ ಸರಬರಾಜು ಸರಪಳಿ ಬೆಳೆಯುತ್ತ ಹೋಗುತ್ತದೆ. ಹೀಗಾಗಿ, ಮಾದಕ ವಸ್ತು ನಿಯಂತ್ರಣದಲ್ಲಿ ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದಾಗಿದೆ.

ಚಿಕಿತ್ಸಾ ಕೇಂದ್ರ

ಡಾ. ಮಹೇಶ ದೇಸಾಯಿ ಅವರು ಮಾದಕ ವ್ಯಸನಿಗಳ ಚಿಕಿತ್ಸೆಗಾಗಿ ಗೋಕುಲ ರೋಡ್ ಡಾಲರ್ಸ್ ಕಾಲನಿಯಲ್ಲಿ ಕುಶಲಂ ಪುನರ್​ವಸತಿ ಕೇಂದ್ರ ಆರಂಭಿಸಿದ್ದಾರೆ. ಅಲ್ಲಿ 15ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೋವೈದ್ಯರಿಂದ ಆಪ್ತ ಸಮಾಲೋಚನೆ, ಯೋಗ, ಧ್ಯಾನ, ಸತ್ಸಂಗ, ಸಂಗೀತ, ಮತ್ತಿತರ ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತದೆ.

Leave a Reply

Your email address will not be published. Required fields are marked *