More

    ಗುಳೆಗೆ ಗ್ರಾಮಗಳೇ ಖಾಲಿ ಖಾಲಿ!

    | ಅಶೋಕ ಶೆಟ್ಬರ ಬಾಗಲಕೋಟೆ

    ಈ ವರ್ಷ ಭೀಕರ ಬರದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಗುಳೆ ಹೋಗುವವರ ಸಂಖ್ಯೆ ದುಪ್ಪಟ್ಟಾಗಿದೆ. ಕೆಲಸ ಹುಡುಕಿಕೊಂಡು ನಿತ್ಯ ಸಾವಿರಾರು ಜನರು ಗೋವಾ, ಉಡುಪಿ, ಮಂಗಳೂರು ಕಡೆಗೆ ವಲಸೆ ಹೋಗುತ್ತಿದ್ದಾರೆ.

    ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟೆ ವಿಭಾಗವೊಂದರಿಂದಲೇ ಪ್ರತಿ ದಿನ ಮಂಗಳೂರಿಗೆ 22 ಬಸ್​ಗಳನ್ನು ಬಿಡಲಾಗುತ್ತಿದೆ. ಮಂಗಳೂರು ವಿಭಾಗದಿಂದ 20 ಬಸ್​ಗಳು ಸಂಚರಿಸುತ್ತವೆ. ಬಾಗಲಕೋಟೆಯಿಂದ ಗೋವಾಕ್ಕೆ ಪ್ರತಿದಿನ 18 ಬಸ್ ಓಡಾಡುತ್ತಿವೆ. ಹೀಗಾಗಿ ಕೂಲಿ ಕೆಲಸ ಹುಡುಕಿಕೊಂಡು ಮಂಗಳೂರು, ಗೋವಾಕ್ಕೆ ಹೋಗಿ ಬರುವ ಪ್ರಯಾಣಿಕರಿಗಾಗಿ ಇರುವ ಬಸ್​ಗಳ ಸಂಖ್ಯೆ ಭರ್ತಿ 60ಕ್ಕೇರಿದೆ. ಅನೇಕರು ಗುಂಪು ಗುಂಪಾಗಿ ಹೋಗುವ ವೇಳೆ ಖಾಸಗಿ ವಾಹನ ಮಾಡಿಕೊಂಡು ಹೋಗುತ್ತಿದ್ದಾರೆ.

    ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಾಗಲಕೋಟೆ ಜಿಲ್ಲೆಯ ಎಲ್ಲ 9 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿತು. ಆಗಿನಿಂದಲೇ ಉದ್ಯೋಗ ಅರಸಿಕೊಂಡು ಗುಳೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಬಂದಿದೆ. ಇದೀಗ ಬೇಸಿಗೆ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಉದ್ಯೋಗ ಇಲ್ಲದ್ದರಿಂದ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಮಳೆ ಆಶ್ರಿತ ತಾಲೂಕುಗಳಾದ ಬಾದಾಮಿ, ಗುಳೇದಗುಡ್ಡ, ಹುನಗುಂದ, ಇಳಕಲ್ಲ, ಬಾಗಲಕೋಟೆ ತಾಲೂಕಿನ ನೂರಕ್ಕೂ ಅಧಿಕ ಗ್ರಾಮಗಳ ಜನರು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗುತ್ತಾರೆ. ಹಳ್ಳಿಗಳಲ್ಲಿ ಕುಟುಂಬ ಸಮೇತರಾಗಿ ಗುಳೆ ಹೋದ ಕಾರಣ ಬೀಗ ಹಾಕಿರುವ ಮನೆಗಳೇ ಹೆಚ್ಚು ಕಾಣುತ್ತವೆ. ಹುನಗುಂದ ತಾಲೂಕಿನ ಬಸರೀಕಟ್ಟಿ, ಕಡಿವಾಲ, ಮುಗನೂರ, ಅಮೀನಗಡ, ಕಮತಗಿ ಭಾಗದಲ್ಲಿ ಬರುವ ಹತ್ತಾರು ಗ್ರಾಮಗಳು, ಇಳಕಲ್ಲ ತಾಲೂಕಿನ ಕರಡಿ, ತುಂಬ, ಬೂದಿಹಾಳ, ಜಂಬಲದಿನ್ನಿ, ತುರಮರಿ, ಕಂದಗಲ್ಲ, ವಜ್ಜಲ, ಗುಡೂರ, ಗುಳೇದಗುಡ್ಡ ತಾಲೂಕಿನ ಬೂದಿನಗಡ, ಲಿಂಗಾಪುರ, ಹಾನಾಪುರ, ಹುಲ್ಲಿಕೇರಿ, ಮುರುಡಿ, ಬಾದಾಮಿ ತಾಲೂಕಿನ ಮುತ್ತಲಗೇರಿ, ಇಂಜನವಾರಿ ಸೇರಿ ಹಲವುಗ್ರಾಮಗಳ ಜನರು ಉದ್ಯೋಗ ಅರಸಿ ನಗರಗಳಿಗೆ ಹೋಗುತ್ತಾರೆ.

    ಹಳ್ಳಿಯಿಂದ ಮಂಗಳೂರಿಗೆ ನೇರ ಬಸ್: ಜಿಲ್ಲೆಯಲ್ಲಿ ಹಳ್ಳಿಯ ಜನರು ಹೆಚ್ಚಿನ ಪ್ರಮಾಣದಲ್ಲಿ ಗುಳೆ ಹೋಗುವುದರಿಂದ ಸಾರಿಗೆ ಸಂಸ್ಥೆಗಳು ಹಳ್ಳಿಗಳಿಂದ ನೇರವಾಗಿ ಮಂಗಳೂರಿಗೆ ಬಸ್ ಸೌಲಭ್ಯ ಕಲ್ಪಿಸಿವೆ. ಮಂಗಳೂರು ವಿಭಾಗದಿಂದ ಬರುವ ಕೆಲ ಬಸ್​ಗಳು ಹುನಗುಂದ ತಾಲೂಕಿನ ದಮ್ಮೂರು, ಕಬ್ಬರಗಿ, ಗಂಜಿಹಾಳ, ಕೂಡಲಸಂಗಮ ಹೀಗೆ ವಿವಿಧ ಗ್ರಾಮಗಳಿಗೆ ನೇರವಾಗಿ ಬಂದು ವಾಸ್ತವ್ಯ ಮಾಡಿ, ಮಧ್ಯಾಹ್ನದ ವೇಳೆ ಆ ಊರುಗಳಿಂದ ಮಾರ್ಗದ ಗ್ರಾಮಗಳಲ್ಲಿನ ಗುಳೆ ಹೋಗುವ ಜನರನ್ನು ತುಂಬಿಕೊಂಡು ಸಂಚರಿಸುತ್ತಿವೆ.

    home

    ಮನೆ ಕಾಯಲು ವೃದ್ಧರು!: ಈ ವರ್ಷ ಬರ ಬಿದ್ದೈತಿ. ಎರಡು ಮಕ್ಕಳು ದುಡಿಯಲು ಮಂಗಳೂರಿಗೆ ಹೋಗ್ಯಾರ. ಮನೆಯಲ್ಲಿ ಒಂದು ಟಗರು, ದನ ಇದೆ. ಅವುಗಳನ್ನು ನೋಡಿ ಕೊಳ್ಳಲು ನನ್ನ ಬಿಟ್ಟು ಹೋಗ್ಯಾರ. ಹೋಗುಮುಂದ ಒಂದು ಚೀಲ ಜೋಳ ಇರಿಸಿ ಹೋಗಿದ್ರು. ಈಗ ಖಾಲಿ ಆಗಾಕ ಬಂದಾವು. ಊರ ಜಾತ್ರಿಗೆ ಬರ್ತೆವಿ ಅಂತ ಹೇಳ್ಯಾರ. ವೃದ್ಧಾಪ್ಯ ವೇತನ ಬರ್ತೆತಿ. ಅದರಲ್ಲಿ ಅದು ಇದು ತಗೊಳ್ತೇನೆ. ಮಕ್ಕಳು ದುಡ್ಡು ಕಳಿಸ್ತಾರ. ಇದು ನಂದಷ್ಟ ಅಲ್ಲ, ನಮ್ಮ ಬಸರೀಕಟ್ಟಿ ಊರಾಗ ಬಹಳ ಮಂದಿ ಪರಿಸ್ಥಿತಿ ಹಿಂಗ್ ಆಗೇತಿ. ಬದುಕಾಕ ಊರು ಬಿಟ್ಟು ಹೋಗೋ ಸ್ಥಿತಿ ನಮ್ದು ಎಂದು ಕಟ್ಟೆ ಮೇಲೆ ಬಾಡಿದ ಮೊಗದಲ್ಲಿ ಕುಳಿತಿದ್ದ ವೃದ್ಧ ಮಹಿಳೆ ರುಕ್ಮವ್ವ ಗೌಡರ ನೋವಿನಿಂದ ಹೇಳಿದರು.

    ಬೆಳಗಾವಿಯಲ್ಲೂ ಇದೇ ಸ್ಥಿತಿ: ಜಿಲ್ಲೆಯ 506 ಗ್ರಾಪಂ ವ್ಯಾಪ್ರಿಯ 640ಕ್ಕೂ ಅಧಿಕ ಹಳ್ಳಿಗಳಲ್ಲಿ ರೈತರು, ಕೂಲಿಕಾರರಿಗೆ ನರೇಗಾ ಯೋಜನೆ ಆಶ್ರಯವಾಗಿತ್ತು. ಆದರೆ, ನಾಲ್ಕೈದು ತಿಂಗಳಿನಿಂದ ಸಮಯಕ್ಕೆ ಸರಿಯಾಗಿ ಕೂಲಿ ಪಾವತಿಯಾಗದಿರುವ ಹಿನ್ನೆಲೆಯಲ್ಲಿ ಜನರು ಬೆಂಗಳೂರು, ಹೈದರಾಬಾದ್, ಬೆಳಗಾವಿ, ಮಹಾರಾಷ್ಟ್ರದ ಪುಣೆ, ಮುಂಬೈ, ಕೊಲ್ಲಾಪುರ, ಗೋವಾ ರಾಜ್ಯದ ವಾಸ್ಕೋ, ಪಣಜಿ ಸೇರಿ ಇತರ ನಗರ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಈಗಾಗಲೇ ಹಿಂಗಾರು ಹಂಗಾಮಿನ ಜೋಳ, ಕಡಲೆ, ಸೂರ್ಯಕಾಂತಿ ಸುಗ್ಗಿ ಮುಗಿದಿದೆ. ಕಬ್ಬು ಕಟಾವು ಸಹಿತ ಮುಗಿದಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಕೂಲಿಕಾರರು ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ. 60 ಕಾರ್ವಿುಕರು ಎರಡು ತಿಂಗಳಿಂದ ನರೇಗಾ ಕೆಲಸಕ್ಕೆ ಬರುತ್ತಿಲ್ಲ. 25 ಕೋಟಿ ರೂ.ಗೂ ಅಧಿಕ ನರೇಗಾ ಬಿಲ್ ಜಮೆ ಆಗಿಲ್ಲ ಎಂದು ಗ್ರಾಪಂ ಸದಸ್ಯರು ತಿಳಿಸಿದ್ದಾರೆ.

    ನಿತ್ಯ 60 ಬಸ್​ಗಳ ಸಂಚಾರ: ಮಂಗಳೂರಿಗೆ ಹೋಗುವ ಬಸ್​ಗಳಲ್ಲಿ ಪ್ರಯಾಣಿಕರ ಸಂಖ್ಯೆ ಸರಾಸರಿ 60 ರಿಂದ 75 ಇರುತ್ತದೆ. ಸಂಸ್ಥೆಗೆ ಬರುವ ಆದಾಯ ಒಂದು ಬಸ್​ನಿಂದ ಸರಾಸರಿ ಒಂದು ಲಕ್ಷ ರೂ. ವರೆಗೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳುತ್ತಾರೆ. ಪ್ರತಿ ದಿನ ಮಂಗಳೂರು ಮತ್ತು ಗೋವಾಕ್ಕೆ ಹೋಗಿ ಬರುವ ಕೂಲಿ ಕಾರ್ವಿುಕರ ಸಂಖ್ಯೆ ಅಂದಾಜು 3500 ರಿಂದ 4 ಸಾವಿರ ಇದೆ. ಇನ್ನು ಗುಳೆ ಹೋದವರು ಹಬ್ಬ, ಹರಿದಿನ, ಜಾತ್ರೆಗೆ ಕಡ್ಡಾಯವಾಗಿ ಊರಿಗೆ ಬರುತ್ತಾರೆ. ವಿಶೇಷವಾಗಿ ಮೊಹರಂ, ದಸರಾ, ದೀಪಾವಳಿ, ಊರ ಜಾತ್ರೆ ಸಂದರ್ಭದಲ್ಲಿ ಹೆಚ್ಚುವರಿ ಬಸ್​ಗಳನ್ನು ಬಿಡಲಾಗುತ್ತಿದೆ. ಮಂಗಳೂರಿಗೆ ಹೋಗಿ ಬರುವ ಬಸ್​ಗಳಲ್ಲಿ ಶೇ. 90ಕ್ಕೂ ಅಧಿಕ ಪ್ರಯಾಣಿಕರು ಕೂಲಿ ಕಾರ್ವಿುಕರು ಇರುತ್ತಾರೆ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಮತ್ತು ಆ ಮಾರ್ಗದಲ್ಲಿ ಡ್ಯೂಟಿ ಮಾಡುವ ಚಾಲಕ, ನಿರ್ವಾಹಕರು ಹೇಳುತ್ತಾರೆ.

    ನಮಗ ದುಡಿದು ತಿನ್ನೋತನ ನೆಲೆ ಇಲ್ರಿ. ಇಲ್ಲಿ ಬಂದ್ರು ಕಷ್ಟ, ಅಲ್ಲಿ ಹೋದ್ರು ಕಷ್ಟ. ಊರಾಗ ಒಂದು ಗುಂಟೆ ಜಮೀನು ಇಲ್ಲ. ಊರಾಗ ಮಾಡಾಕ ಏನೂ ಕೆಲಸ ಇಲ್ರಿ. ಮಂಗಳೂರಲ್ಲಿ 7 ಸಾವಿರ ರೂ. ಮನೆ ಬಾಡಿಗೆ, ನೀರಿನ ಬಿಲ್, ಕರೆಂಟ್ ಬಿಲ್ ಕೊಡಬೇಕು. ಒಬ್ರ ಹೋದ್ರ ಜೀವನ ಸಾಗಿಸಲು ಆಗಲ್ರಿ. ಹಿಂಗಾಗಿ ಮನ್ಯಾಗ ಮೂರ್ನಾಲ್ಕು ಮಂದಿ ಹೋಗಿ ಅಲ್ಲಿ ದುಡಿತೇವಿ. ಅಲ್ಲಿ ಒಂದೊಂದಿನ ಕೆಲಸ ಸಿಗಲ್ಲ. ಮನೆ, ಕೆಲಸ, ಗೌಂಡಿ ಕೆಲಸ ಏನ್ ಸಿಗುತ್ತ ಅದನ್ನು ಮಾಡ್ತೇವಿ. ಮನಿ, ಮಕ್ಕಳನ್ನ ಬಿಟ್ಟು ದೇಶಾಂತರ ಹೋಗ್ತೇವಿ. ದೇವರ ಕೆಲಸ ಇತ್ತು ಅಂತ ಊರಿಗೆ ಬಂದೇವಿ. ಮೂರ್ನಾಲ್ಕು ದಿನ ಬಿಟ್ಟು ಮತ್ತೆ ದೇಶಾಂತರ (ಮಂಗಳೂರ) ಹೋಗ್ಬೇಕ್ರಿ. ನಮ್ ಕಷ್ಟ ಯಾರ್ಗ ಬ್ಯಾಡ್ರಿ.

    | ಚಂದ್ರವ್ವ ಮಿರ್ಜಿ, ಬಸರೀಕಟ್ಟಿ ಗ್ರಾಮ (ಹುನಗುಂದ ತಾಲೂಕು)

    ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts