ಗಲಾಟೆ ಮಾಡೋ ಮಕ್ಳು ಬುದ್ಧಿವಂತರು!

ಬೆಂಗಳೂರು: ಗಲಾಟೆ ಮಾಡುವ ಮಕ್ಕಳೇ ಬುದ್ಧಿವಂತರು, ಸುಮ್ಮನಿರೋರು ಪೆದ್ದರಂತಿರುತ್ತಾರೆ. ಖಾಸಗಿ ಶಾಲೆಗಳ ಶಿಕ್ಷಕರು ‘ಕ್ರಿಶ್ಚಿಯನ್ ನನ್ಸ್’ (ಕ್ರೖೆಸ್ತ ಸನ್ಯಾಸಿನಿಯರು) ಥರ ಇರ್ತಾರೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಿದ್ದರೂ ಮಕ್ಕಳು ಜಗಳವಾಡುತ್ತಿರುತ್ತಾರೆ…

ಇದು ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳು ಹಾಗೂ ಶಿಕ್ಷಕರನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ವಿಶ್ಲೇಷಿಸಿದ ರೀತಿ.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಕ್ಷಕರ ಸದನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಹಳೇ ವಿದ್ಯಾರ್ಥಿಗಳ ಸಂಘದ ರಾಯಭಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆ ಎಂದರೆ ಮಕ್ಕಳು ತರಗತಿಯಲ್ಲಿ ಸದಾ ಗಲಾಟೆ ಮಾಡುತ್ತಿರುತ್ತಾರೆ. ನಮ್ಮ ಮೇಷ್ಟ್ರು ಸುಮ್ಮನಿರಿ ಎಂದರೂ ಕೇಳದೆ ಮತ್ತಷ್ಟು ಗಲಾಟೆ ಮಾಡುತ್ತಾರೆ. ಆದರೆ, ಖಾಸಗಿ ಶಾಲೆಗಳಲ್ಲಿ ಮಕ್ಕಳು ಸೈಲೆಂಟ್ ಆಗಿ ಪೆದ್ದರಂತೆ ಇರುತ್ತಾರೆ. ಅಲ್ಲಿನ ಶಿಕ್ಷಕರು ಕ್ರಿಶ್ಚಿಯನ್ ನನ್ಸ್ ಥರ ಇರುತ್ತಾರೆ. ಅವರನ್ನು ಮಕ್ಕಳು ನೋಡಿದರೆ ಮತ್ತಷ್ಟು ಸೈಲೆಂಟ್ ಆಗಿಬಿಡುತ್ತವೆ ಎಂದು ಮಹೇಶ್ ಹೇಳಿದರು. ಸರ್ಕಾರಿ ಶಾಲೆಯ ಶಿಕ್ಷಕರು, ಖಾಸಗಿ ಶಾಲೆಯ ಶಿಕ್ಷಕರಿಗಿಂತ ನೂರು ಪಟ್ಟು ಬುದ್ಧಿವಂತರಿದ್ದಾರೆ ಎಂದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವೈ. ಮರಿಸ್ವಾಮಿ, ಮಾಜಿ ಅಧ್ಯಕ್ಷೆ ಡಾ. ಕೃಪಾ ಅಮರ್ ಆಳ್ವಾ, ಪ್ರಾಥಮಿಕ ಶಿಕ್ಷಣ ನಿರ್ದೇಶಕ ಬಸವರಾಜ ಮತ್ತಿತರರು ಉಪಸ್ಥಿತರಿದ್ದರು.

ತಪ್ಪು ಅರ್ಥ ಕಲ್ಪಿಸಬೇಡಿ

ಕ್ರಿಶ್ಚಿಯನ್ ನನ್ಸ್​ಗಳು ಶಿಸ್ತುಬದ್ಧರಾಗಿರುತ್ತಾರೆ ಎಂಬುದನ್ನು ಆ ರೀತಿ ಹೇಳಿದ್ದೇನೆ. ಇದಕ್ಕೆ ತಪ್ಪು ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಕಾರ್ಯಕ್ರಮದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ನೀವೆಲ್ಲಾ ಕಾನ್ವೆಂಟ್ ಶಾಲೆಯಲ್ಲಿ ಓದಿದ್ದೀರಿ, ನಿಮಗೆ ತಿಳಿಯುವುದಿಲ್ಲವೇ ಅಲ್ಲಿನ ವಾತಾವರಣ ಎಂದು ಪ್ರಶ್ನಿಸಿದರು. ಈ ವಿಚಾರವನ್ನು ದೊಡ್ಡದು ಮಾಡಬೇಡಿ ಎಂದೂ ವಿನಂತಿಸಿದರು.