ಗರ್ಭ ಸಂರಕ್ಷಣೆ

ಜಗತ್ತು ಸದಾ ಚಟುವಟಿಕೆಯಿಂದ ಕೂಡಿರುತ್ತದೆ. ಎಲ್ಲ ಆಗುಹೋಗುಗಳಿಗೆ ಜೀವರಾಶಿಯಲ್ಲಿರುವ ಚೈತನ್ಯವು ಮೂಲ ಸೆಲೆಯಾಗಿರುತ್ತದೆ. ಜೀವವೈವಿಧ್ಯದ ಸಂತತಿಗಳೂ ಪೀಳಿಗೆಯಿಂದ ಪೀಳಿಗೆಗೆ ಸಹಜವಾಗಿಯೇ ಬೆಳೆದುಕೊಳ್ಳುತ್ತಾ ಹೋಗುತ್ತವೆ. ಜಗತ್ತಿನಲ್ಲಿರುವ ಇಷ್ಟೊಂದು ಪ್ರಾಣಿಪಕ್ಷಿಗಳಿಗೆ ವೈದ್ಯರಿಲ್ಲ. ಪ್ರಕೃತಿಯೇ ಅವುಗಳ ಆರೈಕೆ ಮಾಡುತ್ತದೆ. ಗರ್ಭ ಧರಿಸಿದ್ದಾಗಲೂ ವಿಶೇಷ ಉಪಚಾರವೇನೂ ಇರುವುದಿಲ್ಲ. ಭ್ರೂಣದ ಬೆಳವಣಿಗೆಗೆ ಔಷಧಗಳನ್ನೂ ನುಂಗುವುದಿಲ್ಲ. ಹಾಗಿದ್ದರೂ ತಲೆಮಾರು ದಾಟುತ್ತಿದ್ದಂತೆಯೇ ಅವುಗಳ ಶಕ್ತಿಯೇನೂ ಕುಂದಿಲ್ಲ! ಅಂದಿನ ಸಿಂಹದ ಶಕ್ತಿಯೇ ಇಂದಿನ ಸಿಂಹಕ್ಕೂ ಇದೆ. ಹಿಂದಿನ ಆನೆಯ ಬಲವೇ ಇಂದಿನ ಆನೆಗೂ ಇದೆ. ಹಾಗೆ ನೋಡಿದರೆ ದೈಹಿಕವಾಗಿ ಶಕ್ತಿ ಕಡಿಮೆ ಆದದ್ದು ಗರ್ಭವನ್ನು ಬಲಗೊಳಿಸಲು ಅನೇಕ ರಾಸಾಯನಿಕ ಔಷಧಗಳನ್ನು ನುಂಗುತ್ತಿರುವ ಮಾನವರಲ್ಲೇ! ಹಾಗಿದ್ದರೆ ಗರ್ಭಿಣಿಯರಿಗೆ ವಿಶೇಷ ಆರೈಕೆ ಬೇಡವೇ ಎಂಬ ಜಿಜ್ಞಾಸೆ ಉಂಟಾಗುತ್ತದೆ.

ಯಾವುದೇ ಔಷಧ ಹಾಗೂ ಉಪಚಾರ ಇಲ್ಲದೆಯೂ ಸಂತತಿ ಅಭಿವೃದ್ಧಿಯಾಗುತ್ತದೆ. ಮಾನವರಿಗೆ ಬುದ್ಧಿಯಿದೆ. ಮುಂದಿನ ಪೀಳಿಗೆಯ ಬುದ್ಧಿಮತ್ತೆ ಹಾಗೂ ಶರೀರಬಲ ಹೆಚ್ಚಿಸಲು ಬೇಕಾದ ಉಪಕ್ರಮಗಳ ಅರಿವಿದೆ. ಗರ್ಭಪಾತದಿಂದ ಭ್ರೂಣವನ್ನು ರಕ್ಷಿಸುವ ಹೊಣೆಗಾರಿಕೆಯೂ ಇದೆ. ಪ್ರಸವಕಾಲದ ಆರೋಗ್ಯ ಸಮಸ್ಯೆಯಿಂದಾಗಿ ಜನನದ ಬಳಿಕ ಶಿಶುಮರಣ ಆಗುವುದನ್ನು ತಡೆಯಬೇಕಾದ ಜವಾಬ್ದಾರಿಯೂ ಇದೆ. ಕಷ್ಟಪಟ್ಟು ಮಗು ಹುಟ್ಟಿಬಿಟ್ಟರೆ ಮಾತ್ರ ಸಾಲದು. ಅದರ ಆರೋಗ್ಯ, ಬುದ್ಧಿ, ಬಣ್ಣ, ಬಲ, ವೀರ್ಯ, ಆಯುಷ್ಯಗಳೆಲ್ಲವೂ ಚೆನ್ನಾಗಿರಬೇಕು. ಇದೇ ತಾನೇ ಮನುಜರೆಲ್ಲರ ಹಂಬಲ ಹಾಗೂ ಪ್ರಾರ್ಥನೆ. ಮಾನಸಿಕ ಸಿದ್ಧತೆಯೊಂದಿಗೆ ಮುಂದಡಿಯಿಟ್ಟರೆ ಬಹುತೇಕ ಸಂದರ್ಭಗಳಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಉತ್ತಮ ಶಿಶು ಜನಿಸಬಹುದು. ಆದರೆ ಒಮ್ಮೆ ಮುಗ್ಗರಿಸಿದೆವೆಂದರೆ ದೈಹಿಕ ಪೂರ್ವತಯಾರಿ ಅನಿವಾರ್ಯವಾಗುತ್ತದೆ.

ಈ ಎಲ್ಲ ಕಾರಣಗಳಿಗಾಗಿ ಅಯುರ್ವೆದ ಗರ್ಭವನ್ನು ಸಂರಕ್ಷಣೆ ಮಾಡುವ ಹಲವಾರು ಪ್ರಾಕೃತಿಕ ವಿಧಾನಗಳನ್ನು ಬಣ್ಣಿಸಿರುವುದು ವಿಶ್ವಕ್ಕೆ ನೀಡಿದ ಬಲು ದೊಡ್ಡ ಬಳುವಳಿ.

ಪ್ರತಿ ತಿಂಗಳಲ್ಲಿ ಗರ್ಭಿಣಿಗೆ ಯಾವೆಲ್ಲ ಉಪಚಾರಗಳನ್ನು ಮಾಡಬೇಕು ಎಂಬುದನ್ನು ವಿವರಿಸಿದ ಆಯುರ್ವೆದವು ಗವ್ಯೋತ್ಪನ್ನಗಳ ಬಳಕೆಗೆ ವಿಶೇಷ ಒತ್ತು ನೀಡಿದೆ. ಅದರಲ್ಲೂ ಆರಂಭದಲ್ಲಿ ಹಾಲು, ಬಳಿಕ ಬೆಣ್ಣೆ, ನಂತರ ತುಪ್ಪಗಳನ್ನು ಅನುಕ್ರಮವಾಗಿ ಉಪಯೋಗಿಸಲು ಹೇಳಿರುವುದು ಮತ್ತೊಂದು ವಿಶೇಷ. ಹಾಲು ಗರ್ಭಿಣಿಯರಿಗೆ ಅಮೃತಸಮಾನ ಎಂಬಂತೆ ಕೊಂಡಾಡಿದೆ. ಆಧುನಿಕವಾಗಿಯೂ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿಗಳ ಸಮರ್ಪಕ ಪೂರೈಕೆಗಾಗಿ ಯಥೇಚ್ಛವಾಗಿ ಹಾಲು ಬಳಸಬೇಕೆಂದು ವಿಶ್ವದೆಲ್ಲೆಡೆ ನಡೆದ ಅನೇಕ ಸಂಶೋಧನೆಗಳೂ ಸಾರಿ ಹೇಳಿರುವುದು ಆಯುರ್ವೆದದ ತತ್ತ್ವವನ್ನು ಮತ್ತೊಮ್ಮೆ ದೃಢಪಡಿಸಿದಂತಾಗಿದೆ. ಎಲ್ಲ ಒಂಭತ್ತು ತಿಂಗಳುಗಳಲ್ಲೂ ತೈಲದಲ್ಲಿ ಅದ್ದಿದ ಹತ್ತಿಯನ್ನು ಯೋನಿಯಲ್ಲಿ ದಿನಂಪ್ರತಿ ಧಾರಣೆ ಮಾಡಬೇಕೆಂಬ ಸಲಹೆ ಚರಕಸಂಹಿತೆಯಲ್ಲಿದೆ. ಇದರಿಂದ ಗರ್ಭಾಶಯ, ಯೋನಿ, ಸೊಂಟ ಹಾಗೂ ಬೆನ್ನಿನ ಸನಿಹವಿರುವ ಮಾಂಸಖಂಡಗಳೆಲ್ಲ ಸಡಿಲವಾಗಿ ಸುಖಪ್ರಸವಕ್ಕೆ ನಾಂದಿ ಹಾಡುತ್ತದೆ. ಮಲ, ಮೂತ್ರ ಪ್ರವೃತ್ತಿಗಳು ಸರಿಯಾಗಿದ್ದು ಚರ್ಮವು ಮೃದುವಾಗುತ್ತದೆ.

ಬಲ, ಕಾಂತಿಗಳು ವರ್ಧಿಸಿ ಅಪೇಕ್ಷಿಸಿದ್ದಕ್ಕಿಂತ ಉತ್ತಮ ಮಗುವನ್ನು ಸರಿಯಾದ ಕಾಲದಲ್ಲಿ ಪ್ರಾಕೃತ ಪ್ರಸವದೊಂದಿಗೆ ಪಡೆಯಲು ಸಾಧ್ಯ ಎಂಬುದು ಹಳೆಯದಾದರೂ ಇಂದಿನ ಜನತೆಗೆ ಹೊಸ ಮಾಹಿತಿ!

ಪಂಚಸೂತ್ರಗಳು

  • ಕರಿಬೇವು: ಮೈಉರಿ ನಾಶಕ.
  • ನುಗ್ಗೆಸೊಪ್ಪು: ಜಂತುಹುಳ ನಿಯಂತ್ರಕ.
  • ಖರ್ಜೂರ: ಕೆಮ್ಮು ಕಡಿಮೆ ಮಾಡುತ್ತದೆ.
  • ಚಾಂಗೇರಿ/ಹುಳಿಸೊಪ್ಪು: ಜ್ವರ ಗುಣಕಾರಿ.
  • ಇಸಬ್​ಗೋಲ್: ಜಠರದ ಹುಣ್ಣು ಗುಣಕಾರಿ.

Leave a Reply

Your email address will not be published. Required fields are marked *