ಗಮನ ಸೆಳೆದ ಜನಜಾಗೃತಿ ಜಾಥಾ

ಗದಗ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆಯುಷ್ ಇಲಾಖೆ, ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ, ವಿವಿಧ ಶಾಲಾ-ಕಾಲೇಜ್ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಯೋಗ ಜನಜಾಗೃತಿ ಜಾಥಾ ಜರುಗಿತು.

ಬೆಟಗೇರಿ ಬಸ್ ನಿಲ್ದಾಣದಿಂದ ಆರಂಭವಾದ ಜಾಥಾ ಟೆಂಗಿನಕಾಯಿ ಬಜಾರ್, ಕುರಹಟ್ಟಿ ಪೇಟೆ, ಹೆಲ್ತ್​ಕ್ಯಾಂಪ್, ಗದಗ ಮುನ್ಸಿಪಲ್ ಕಾಲೇಜ್​ವರೆಗೂ ಸಾಗಿತು. ಪುನಃ ಅಲ್ಲಿಂದ ಮಹಾತ್ಮಗಾಂಧಿ ವೃತ್ತ, ಮಹೇಂದ್ರಕರ್ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತ ಮಾರ್ಗದಲ್ಲಿ ಜಾಥಾ ಸಂಚರಿಸಿತು.

ಮುನ್ಸಿಪಲ್ ಕಾಲೇಜ್ ಮೈದಾನದಲ್ಲಿ ಜಾಥಾಕ್ಕೆ ಚಾಲನೆ ನೀಡಿದ ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ ಮಾತನಾಡಿ, ಆಧುನಿಕ ಯುಗದಲ್ಲಿ ಮನುಷ್ಯನ ಜೀವನ ಶೈಲಿ ಬದಲಾಗುತ್ತಿದ್ದು, ಯೋಗ ಅವಶ್ಯಕವಾಗಿದೆ. ನಮ್ಮ ಪೂರ್ವಿಕರು ಕುಟ್ಟುವುದು, ಬೀಸುವುದು, ಬಾವಿಯಲ್ಲಿ ನೀರು ಸೇದುವುದು ಮುಂತಾದ ಕಾರ್ಯಗಳಿಂದಲೇ ಯೋಗ ಸಾಧಿಸುತ್ತಿದ್ದರು. ಇಂದು ತಂತ್ರಜ್ಞಾನ ಬೆಳೆದಂತೆ ಮಿದುಳಿನ ಕಾರ್ಯ ಜಾಸ್ತಿಯಾಗಿ ಶಾರೀರಿಕ ಕೆಲಸ ಕಡಿಮೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ನಿತ್ಯ ಅರ್ಧ ತಾಸಾದರೂ ಯೋಗ ಮಾಡಿ ಸದೃಢರಾಗಬೇಕು ಎಂದರು.

ಜಿಪಂ ಉಪಾಧ್ಯಕ್ಷೆ ಶಕುಂತಲಾ ಮೂಲಿಮನಿ ಮಾತನಾಡಿ, ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯದಿಂದಿರಲು ಯೋಗ ಸಹಕಾರಿಯಾಗಿದೆ. ರಕ್ತದೊತ್ತಡ, ಸಕ್ಕರೆ ಕಾಯಿಲೆಗಳ ಕಡಿವಾಣಕ್ಕೆ ಹಾಗೂ ರೋಗ ಮುಕ್ತ ಜೀವನ ಸಾಗಿಸಲು ಪ್ರತಿಯೊಬ್ಬರೂ ನಿತ್ಯ ಯೋಗ ಮಾಡಬೇಕು ಎಂದರು.

ಜಿಪಂ ಸದಸ್ಯ ವಾಸಣ್ಣ ಕುಡರಗಿ ಮಾತನಾಡಿದರು. ವಿದ್ಯಾದಾನ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ, ಗದಗ ಶಹರ ಬಿಇಒ ಎಸ್.ಎಸ್. ಕೆಳದಿಮಠ, ಯೋಗಾಚಾರ್ಯರಾದ ಕೆ.ಎಸ್. ಪಲ್ಲೇದ, ಎಸ್.ಎಸ್. ಹಿರೇಮಠ ಇತರರು ಇದ್ದರು. ಜಿಲ್ಲಾ ಯೋಗ ಸೇವಾ ಸಮಿತಿ, ಬಸವಯೋಗ ಕೇಂದ್ರ, ಪತಂಜಲಿ ಯೋಗ ಸಮಿತಿ, ಸಿದ್ಧಸಮಾಧಿ ಯೋಗ ಕೇಂದ್ರ, ಆರ್ಟ್ ಆಫ್ ಲಿವಿಂಗ್, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಅಕ್ಕಮಹಾದೇವಿ ಯೋಗ ಕೇಂದ್ರದ ಪದಾಧಿಕಾರಿಗಳು, ಜಿಲ್ಲೆಯ ಆಯುರ್ವೆದ ಕಾಲೇಜ್​ಗಳು, ಪ್ಯಾರಾಮೆಡಿಕಲ್ ಕಾಲೇಜ್, ವಿವಿಧ ಶಾಲಾ-ಕಾಲೇಜ್​ಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಡಾ. ಅಶೋಕ ಮತ್ತಿಕಟ್ಟಿ ಪ್ರಾರ್ಥಿಸಿದರು. ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ಡಾ. ಸುಜಾತಾ ಪಾಟೀಲ ಸ್ವಾಗತಿಸಿದರು.

ಯೋಗ ಪದ್ಧತಿಯಿಂದ ರೋಗ ಮುಕ್ತ ಜೀವನ ಸಾಗಿಸಬಹುದೆಂಬ ನಂಬಿಕೆಯಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಯೋಗವನ್ನು ಅನುಸರಿಸುತ್ತಿವೆ. ಮಾನವನು ಶಾರೀರಿಕವಾಗಿ, ಬೌದ್ಧಿಕವಾಗಿ, ಆಧ್ಯಾತ್ಮಿಕವಾಗಿ ಗಟ್ಟಿಗೊಂಡಾಗ ಮಾತ್ರ ಉತ್ತಮ ಜೀವನ ಸಾಗಿಸಲು ಸಾಧ್ಯ.
> ಎಸ್.ಪಿ. ಬಳಿಗಾರ, ಜಿಪಂ ಅಧ್ಯಕ್ಷ

ಯೋಗದಿಂದ ಮಾನಸಿಕ ಶಾಂತಿ

ಗದಗ: ಯೋಗದಿಂದ ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ, ಸಂಯಮ ಸಾಧಿಸಬಹುದಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 2437ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಗಿರೀಶ ಕಾರ್ನಾಡ ಅವರು ಪ್ರಗತಿಪರ ವಿಚಾರಧಾರೆಗಳನ್ನು ಹೊಂದಿ, ಕನ್ನಡ ಸಾಹಿತ್ಯದ ಸಮೃದ್ಧಿಗೆ ಶ್ರಮಿಸಿದರು. ನಾಟಕಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡಿದರು ಎಂದರು.

ಗುರುಬಸವ ಹಿರೇಮಠ ಉಪನ್ಯಾಸ ನೀಡಿ, ಯೋಗವು ವ್ಯಕ್ತಿಯಲ್ಲಿರುವ ಅಂತರ್ಗತ ಶಕ್ತಿಯನ್ನು ವಿಕಾಸಗೊಳಿಸುವ ಸಾಮರ್ಥ್ಯ ಹೊಂದಿದೆ. ಯಮ, ನಿಯಮ, ಯೋಗಾಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಸ್ಥಿತಿಗಳು ವ್ಯಕ್ತಿಯನ್ನು ಔನ್ನತ್ಯಕ್ಕೆ ಏರಿಸುವ ಸಾಧನಗಳಾಗಿವೆ ಎಂದರು.

ಶಿವಾನಂದ ಗಿಡ್ನಂದಿ ಮಾತನಾಡಿದರು. ವಿವೇಕಾನಂದಗೌಡ ಪಾಟೀಲ ರಚಿಸಿದ ಶಿವಾನುಭವಗಳ ವಿವರ ಒಳಗೊಂಡ ‘ಮಹಾನವಮಿ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ ಅವರಿಂದ ವಚನ ಸಂಗೀತ, ಸುಮಾ ಶಾವಿ ಅವರಿಂದ ವಚನ ಚಿಂತನ ಜರುಗಿತು. ಸಾಗರ ಅಳವಂಡಿ ಧರ್ಮಗ್ರಂಥ ಪಠಿಸಿದರು. ಡಾ. ಐ.ಬಿ. ಕೊಟ್ಟೂರಶೆಟ್ರ ಭಕ್ತಿಸೇವೆ ವಹಿಸಿದ್ದರು. ಗೌರಕ್ಕ ಬಡಿಗಣ್ಣವರ, ಶಶಿಧರ ಬೀರನೂರ, ಡಾ. ಪ್ರಭು ಗಂಜಿಹಾಳ, ವಿಜಯಕುಮಾರ ಹಿರೇಮಠ, ವೀರಣ್ಣ ಗೊಡಚಿ, ರಾಜು ಕುರಡಗಿ, ರಾಜು ಗುಡಿಮನಿ, ಬಸವರಾಜ ಅಂಗಡಿ, ಶಿವರಾಜ ಹಿರೇಮಠ, ಉಮೇಶ ಹಿಡ್ಕಿಮಠ, ಚನ್ನಯ್ಯ ಹಳ್ಯಾಳಮಠ, ಲಿಂಗರಾಜ ಚಂದಪ್ಪನವರ, ಅಶೋಕ ಸಂಕಣ್ಣವರ ಇದ್ದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು. ಮಲ್ಲಿಕಾರ್ಜುನ ಐಲಿ ಸ್ವಾಗತಿಸಿದರು.

ಯೋಗ ಪ್ರಾತ್ಯಕ್ಷಿಕೆ, ಉಪನ್ಯಾಸ ಇಂದು

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಠದಲ್ಲಿನ ಸಾಂಸ್ಕೃತಿಕ ವೇದಿಕೆಯಲ್ಲಿ ವಿಜಯವಾಣಿ/ದಿಗ್ವಿಜಯ ನ್ಯೂಸ್, ಪತಂಜಲಿ ಯೋಗ ಸಮಿತಿ, ಅನ್ಮೋಲ್ ಯೋಗ ಹಾಗೂ ಆಯುರ್ವೆದ ಚಿಕಿತ್ಸಾ ಕೇಂದ್ರ ಹಾಗೂ ಜಗದ್ಗುರು ಅನ್ನದಾನೀಶ್ವರ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ ಆಶ್ರಯದಲ್ಲಿ ಜೂ.21ರಂದು ಬೆಳಗ್ಗೆ 10ಗಂಟೆಗೆ ವಿಶ್ವ ಯೋಗ ದಿನಾಚರಣೆ ನಿಮಿತ್ತ ವಿಶೇಷ ಉಪನ್ಯಾಸ ಹಾಗೂ ಯೋಗ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರುಗಲಿದೆ.

ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು, ಮಕ್ಕಳ ಸಾಹಿತಿ ಡಾ.ನಿಂಗು ಸೊಲಗಿ ಉಪನ್ಯಾಸ ನೀಡುವರು. ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಎಂ.ಬಿ. ಬೆಳವಟಿಮಠ, ಜೆ.ಎ.ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲಾ ಸಮಿತಿ ಅಧ್ಯಕ್ಷ ಡಾ.ಅನ್ನದಾನಿ ಮೇಟಿ, ತಹಸೀಲ್ದಾರ್ ಡಾ. ವೆಂಕಟೇಶ ನಾಯಕ ಸೇರಿ ಇತರರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಯೋಗ ಸಪ್ತಾಹ ಸಮಾರೋಪ

ಗದಗ: ಸ್ಥಳೀಯ ಸಿದ್ಧಲಿಂಗ ನಗರದ ಬಸವೇಶ್ವರ ಪ್ರೌಢಶಾಲೆಯ ಯೋಗ ಮಂದಿರದಲ್ಲಿ ಯೋಗ ಸಪ್ತಾಹ ಸಮಾರೋಪ ಜೂ. 21ರಂದು ಸಂಜೆ 5.30ಕ್ಕೆ ಜರುಗಲಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಜರುಗಿದ ಯೋಗಾಸನ ಸ್ಪರ್ಧೆ ಹಾಗೂ ಯೋಗ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಗುವುದು ಎಂದು ಪ್ರಾಚಾರ್ಯ ಕೆ.ಎಸ್. ಪಲ್ಲೇದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *