ಕೋಲಾರ: ತಾಲೂಕಿನ ಸೀಸಂದ್ರದಲ್ಲಿನ ಆಯುಷ್ ಆಸ್ಪತ್ರೆಗೆ ಬಿಡುಗಡೆಯಾದ ಅನುದಾನವನ್ನು ನಗರದ ಆಯುಷ್ ಆಸ್ಪತ್ರೆಗೆ ಬಳಸುವ ವಿಚಾರದಲ್ಲಿ ತಾಪಂ ಅಧ್ಯಕ್ಷ ಹಾಗೂ ಇಒ ಅವರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದಾರೆ.\
ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಮೀಣ ಭಾಗದಲ್ಲಿರುವ ಸೀಸಂದ್ರದಲ್ಲಿ ಏಕೈಕ ಆಯುಷ್ ಆಸ್ಪತ್ರೆಗೆ ಬೋರ್‌ವೆಲ್ ಕೊರೆಸಲು ಮಂಜೂರಾದ ಅನುದಾನದಲ್ಲಿ ಸ್ವಲ್ಪ ಹಣವನ್ನು ನಗರದ ಆಯುಷ್ ಆಸ್ಪತ್ರೆಗೆ ಬಳಸಿರುವ ಬಗ್ಗೆ ಸದಸ್ಯ ಅರಹಳ್ಳಿ ಮಂಜುನಾಥ್ ಆಕ್ಷೇಪಿಸಿ ಸ್ಥಳೀಯ ಸದಸ್ಯರ ಗಮನಕ್ಕೂ ತರದೆ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದಾದರೆ ಸದಸ್ಯರಾಗಿ ನಾವೇಕೆ ಇರಬೇಕೆಂದು ಪ್ರಶ್ನಿಸಿದರು.
ಒಂದು ಹಂತದಲ್ಲಿ ಅಶ್ಲೀಲ ಪದವನ್ನು ಸದಸ್ಯರೊಬ್ಬರು ಬಳಸಿದಾಗ ಇಒ ಎನ್.ವಿ. ಬಾಬು ಆಕ್ಷೇಪಿಸುತ್ತಾ, ಪ್ರಶ್ನಿಸಲು ಎಲ್ಲ ಅಧಿಕಾರವೂ ಇದೆ. ಆದರೆ ಪದಗಳ ಬಳಕೆಯ ಮೇಲೆ ಹಿಡಿತವಿರಲಿ ಎಂದು ತಾಕೀತು ಮಾಡಿದರು.
ಮಧ್ಯ ಪ್ರವೇಶಿಸಿದ ಅಧ್ಯಕ್ಷ ಸೂಲೂರು ಆಂಜಿನಪ್ಪ, ಅನುದಾನ ಬಳಕೆ ಬಗ್ಗೆ ಹಿಂದಿನ ಸಭೆಯಲ್ಲೇ ಪ್ರಸ್ತಾಪಿಸಿದ್ದೆ, ಸಭೆಯ ನಡಾವಳಿ ಬರೆಯುವ ಸಿಬ್ಬಂದಿ ವಿಷಯ ದಾಖಲಿಸಿಕೊಳ್ಳದ್ದು ಗೊಂದಲಕ್ಕೆ ಕಾರಣವಾಯಿತು ಎಂದು ಸಮಜಾಯಶಿ ನೀಡಿದರು.
ತಾಪಂ ವಿಷಯ ನಿರ್ವಾಹಕ, ಸಿಬ್ಬಂದಿಗೆ ವರ್ಗಾವಣೆ ಇಲ್ಲದೆ ಇಲ್ಲೇ ಇರುವುದರಿಂದ ಆಡಳಿತ ಜಿಡ್ಡುಗಟ್ಟಿದೆ. ಅಧ್ಯಕ್ಷರಿಗೆ ಅಧಿಕಾರ ನೀಡಿದ್ದು ಬೆಳಗ್ಗೆ ಕಚೇರಿಗೆ ಬಂದು ಸಂಜೆಯವರೆಗೆ ಇದ್ದು ಆಡಳಿತ ನಿರ್ವಹಿಸಿ ಎಂದು. ಬೆಳಗ್ಗೆ ಬಂದು ಮಧ್ಯಾಹ್ನ ಹೋಗುವುದಲ್ಲ. ಉಳಿದಿರುವ ಒಂದು ವರ್ಷದ ಅಧಿಕಾರಾವಧಿಯಲ್ಲಾದರೂ ಕೆಲಸ ಮಾಡಿ, ಇಲ್ಲದಿದ್ದರೆ ಧಮ್ ಇಲ್ಲದ ಸಮಿತಿ ಎಂದು ಆಡಿಕೊಳ್ಳುವಂತಾಗುತ್ತದೆ ಎಂದು ಸದಸ್ಯ ಕೃಷ್ಣೇಗೌಡ ಛೇಡಿಸಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಮುದುವಾಡಿ ಮಂಜುನಾಥ್ ಮಾತನಾಡಿ, ನಮ್ಮ ನಾಲ್ಕು ವರ್ಷಗಳ ಅಧಿಕಾರಾವಧಿ ಮುಗಿದಿದೆ. 6 ಇಒಗಳು ಬದಲಾಗಿದ್ದಾರೆ. ಉಳಿದಿರುವ ಒಂದು ವರ್ಷದಲ್ಲಿ ಯಾವುದೇ ಕಾರ್ಯಕ್ರಮ ಅನುಷ್ಠಾನ ಮಾಡಲು ಆಗಲ್ಲ, ಅಭಿವೃದ್ಧಿಗೆ ಅಧಿಕಾರಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಶೌಚಗೃಹದ ಪಿಟ್ ಖಾಲಿ ಮಾಡಿಸಲು ಸಕ್ಕಿಂಗ್ ಯಂತ್ರ ಬಳಸಬೇಕು. 8 ಕಿ.ಮೀ. ವ್ಯಾಪ್ತಿಯಲ್ಲಿದ್ದರೆ 1200 ರೂ. ಹಾಗೂ ಅದಕ್ಕಿಂತ ಹೆಚ್ಚಿನ ದೂರವಾದರೆ 2000 ರೂ. ಬಾಡಿಗೆ ಶುಲ್ಕ ನಿಗದಿಪಡಿಸಿರುವ ಬಗ್ಗೆ ಇಒ ಬಾಬು ಪ್ರಸ್ತಾಪಿಸಿದಾಗ ಸದಸ್ಯರು ಆಕ್ಷೇಪಿಸಿ ಕಡಿಮೆ ಮಾಡುವಂತೆ ಆಗ್ರಹಿಸಿದರು. ಧ್ವನಿಗೂಡಿಸಿದ ಅಧ್ಯಕ್ಷ ಆಂಜನಪ್ಪ 1200 ರೂ. ನಿಗದಿಪಡಿಸುವಂತೆ ಸೂಚಿಸಿದರು. ದಿನಗೂಲಿ ನೌಕರರಿಗೆ ಬಾಕಿ ಇರುವ ಸಂಬಳಕ್ಕೆ ಲಭ್ಯವಿರುವ 3 ಲಕ್ಷ ರೂ. ಅನುದಾನವನ್ನು ನೌಕರರ ಸಂಬಳಕ್ಕೆ ಬಳಕೆ ಮಾಡಲು ಸಾಮಾನ್ಯ ಸಭೆ ಒಪ್ಪಿಗೆ ನೀಡಿತು. ನಂತರ ಅಜೆಂಡಾ ಪ್ರಕಾರ ಇಲಾಖೆವಾರು ಪ್ರಗತಿ ಪರಿಶೀಲನೆ ನಡೆಯಿತು.
ತಾಪಂ ಉಪಾಧ್ಯಕ್ಷೆ ಲಕ್ಷ್ಮಿ ಹಾಜರಿದ್ದರು.