ಗಮಕ ಶಿಕ್ಷಕರ ನೇಮಕಕ್ಕೆ ಹಕ್ಕೊತ್ತಾಯ

ಶಿವಮೊಗ್ಗ: ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಗಮಕ ಶಿಕ್ಷಕರ ನೇಮಕ ಮಾಡುವ ಹಕ್ಕೊತ್ತಾಯ ರಾಜ್ಯದ ಎಲ್ಲ ಗಮಕ ಕಲಾ ಪರಿಷತ್​ಗಳಿಂದ ಆಗಬೇಕಿದೆ ಎಂದು ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.

ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಮಾರ್ಕಂಡೇಯ ಅವಧಾನಿ ಸ್ಮರಣಾರ್ಥ ಹೊಸಹಳ್ಳಿ ಗಮಕ ಭವನದಲ್ಲಿ ಗಮಕ ಕಲಾ ಪರಿಷತ್ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ಸಹಯೋಗದಲ್ಲಿ ಆಯೋಜಿಸಿದ್ದ ಐದನೇ ಅಹೋರಾತ್ರಿ ಗಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಮಕ ಸಂಸ್ಥೆಗಳ ಉಳಿವು, ಗಮಕಿಗಳ ಉಳಿವು ಶೈಕ್ಷಣಿಕ ಕ್ಷೇತ್ರದಿಂದ ಸಾಧ್ಯ. ಇದು ನಮ್ಮೆಲ್ಲರ ಹಕ್ಕು. ಒತ್ತಾಯಪೂರ್ವಕವಾಗಿ ಹಕ್ಕೊತ್ತಾಯ ಮಾಡುವ ಮಹತ್ವದ ಕಾರ್ಯ ಆಗಬೇಕು ಎಂದು ತಿಳಿಸಿದರು.

ವಿವಿಧ ಕಾರಣಗಳಿಂದ ಸರ್ಕಾರ ಗಮಕವನ್ನು ನಿರ್ಲಕ್ಷ್ಯ ಮಾಡುತ್ತ ಬಂದಿದೆ. ಗಮಕ ಕಲೆಗೆ ನೀಡಬೇಕಾದ ಪ್ರಾಧಾನ್ಯತೆ ಇಲ್ಲ. ಸಂಗೀತ ನೃತ್ಯ ಅಕಾಡೆಮಿಯಲ್ಲಿ ಗಮಕ ಒಂದು ಭಾಗ ಮಾತ್ರ. ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ವಿಶೇಷ ಕಲೆಯಾಗಿರುವ ಗಮಕವನ್ನು ಎಲ್ಲರೂ ಒಟ್ಟುಗೂಡಿ ಬೆಳೆಸಬೇಕಿದೆ. ಹೊಸ ಪೀಳಿಗೆಯನ್ನು ಗಮಕದತ್ತ ಆಕರ್ಷಿಸಬೇಕಾದ ಅಗತ್ಯವಿದೆ ಎಂದರು.

ಬ್ರಿಟಿಷರ ಆಳ್ವಿಕೆಗೂ ಮುನ್ನ ಎಲ್ಲ ರಾಜರ ಆಡಳಿತದಲ್ಲಿ ಗಮಕಿ, ವಿದ್ವಾಂಸ, ವಾಗ್ಮಿ, ಸಂಸ್ಕೃತಕಾರರು ಇದ್ದರು. ಇವರೆಲ್ಲರಿಂದಲೂ ಸಂಸ್ಕೃತಿ ಪ್ರಸಾರವಾಗುವ ಮೂಲಕ ಬೆಳೆಯುತ್ತಿತ್ತು. ಕವಿಗಳ ರಚನೆಯನ್ನು ಸಮಾಜಕ್ಕೆ ತಲುಪಿಸಲು ಗಮಕ ವಾಹಕವಾಗಿ ಕೆಲಸ ಮಾಡುತ್ತಿತ್ತು ಎಂದು ಹೇಳಿದರು.

ಸಂಗೀತದಿಂದ ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯ:ಹಿಂದೆ ಎಲ್ಲ ಶಾಲೆಗಳಲ್ಲಿ ಸಂಗೀತ ಶಿಕ್ಷಕರು, ಕ್ರೀಡಾ ಶಿಕ್ಷಕರು ಇರುತ್ತಿದ್ದರು. ಆದರೆ ಹೊಸ ಶಿಕ್ಷಣ ನೀತಿಗಳಿಂದ ಇದೀಗ ಸಂಗೀತ ಶಿಕ್ಷಕರಿಲ್ಲ. ಮೊದಲೆಲ್ಲ ಸಂಗೀತ ಶಿಕ್ಷಣದ ಕಲಿಕೆಯಿಂದ ವಿದ್ಯಾರ್ಥಿಗಳ ನೈತಿಕ ಮನೋಸ್ಥೈರ್ಯ ಸಿಗುತ್ತಿತ್ತು. ಬೌದ್ಧಿಕ ವಿಕಾಸ ಆಗುತ್ತಿತ್ತು. ಗಮಕದಲ್ಲಿ ಸಂಗೀತ, ಸಾಹಿತ್ಯ ಇದೆ. ಸಾಮಾಜಿಕ ನೈತಿಕತೆ ಹಾಗೂ ಸಾಂಸ್ಕೃತಿಕ ಔನತ್ಯಕ್ಕೆ ಗಮಕದ ಅವಶ್ಯಕತೆಯಿದೆ ಎಂದು ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು. ಯುವಸಮೂಹಕ್ಕೆ ಆಮಿಷಗಳು ಹೆಚ್ಚಿವೆ. ಟಿವಿ, ಮೊಬೈಲ್, ವಾಟ್ಸ್​ಆಪ್, ಫೇಸ್​ಬುಕ್ ಸೇರಿ ನೂರೆಂಟು ಅಂಶಗಳು ಸೆಳೆಯುತ್ತಿವೆ. ಅವುಗಳ ಔಚಿತ್ಯ ಹಾಗೂ ಬಳಕೆಯ ವಿವೇಕವಿಲ್ಲ. ಇದರಿಂದ ಓದುವ, ಕೇಳುವ ಅಭಿರುಚಿ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿ ತಾಳ್ಮೆ ಇಲ್ಲದಂತೆ ಮಾಡಿವೆ. ಆದರೆ ಸಂಗೀತ, ಗಮಕ ತಾಳ್ಮೆ ಬೆಳೆಸುವ ಜತೆ ವಿವೇಕ ಮೂಡಿಸುತ್ತದೆ ಎಂದು ತಿಳಿಸಿದರು.

ಗಮಕ ಕಲಾ ಪರಿಷತ್ ಗೌರವಾಧ್ಯಕ್ಷ ಎಚ್.ಆರ್.ಕೇಶವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ ಅಧ್ಯಕ್ಷ ಎಚ್.ಎಸ್.ಗೋಪಾಲ್ ಇದ್ದರು. ಅಚ್ಯುತ ವೇದಘೊಷ ನಡೆಸಿಕೊಟ್ಟರು. ಪ್ರಸಾದ್ ಭಾರಧ್ವಾಜ್ ಪ್ರಾರ್ಥಿಸಿದರು. ಅನಂತನಾರಾಯಣ ವಂದಿಸಿದರು. ರಾಜಾರಾಮಮೂರ್ತಿ ನಿರೂಪಿಸಿದರು.

ಕಾವ್ಯವಾಚನ-ವ್ಯಾಖ್ಯಾನ ಕಾರ್ಯಕ್ರಮ:ಅಹೋರಾತ್ರಿ ಗಮಕ ವಾಚನದ ಮೊದಲ ದಿನದಂದು ಕರ್ಣಸೇನಾಪಟ್ಟ, ಕ್ಷೇಮಧೂರ್ತಿ-ಸಾತ್ಯಕಿ, ಧರ್ಮಜನಯುದ್ಧ, ಶಲ್ಯಸಾರಥ್ಯ, ತ್ರಿಪುರದಹನ, ಕರ್ಣಸಂಗ್ರಾಮಗಮನ, ಶಲ್ಯ-ಕರ್ಣರ ತಿಕ್ಕಾಟ, ಕರ್ಣ-ಭೀಮ, ಕರ್ಣ-ಪಾರ್ಥ ಕುರಿತು ವಿದ್ವಾಂಸರಿಂದ ಕಾವ್ಯವಾಚನ ಹಾಗೂ ವ್ಯಾಖ್ಯಾನ ನಡೆಯಿತು.

ಹೊಸಹಳ್ಳಿ, ಮತ್ತೂರು ಎರಡು ಕಣ್ಣುಗಳು:ಗಮಕ ಗ್ರಾಮ ಹೊಸಹಳ್ಳಿ, ಸಂಸ್ಕೃತ ಗ್ರಾಮ ಮತ್ತೂರು ಶಿವಮೊಗ್ಗ ಜಿಲ್ಲೆಯ ಎರಡು ಕಣ್ಣುಗಳು ಎಂದು ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಬಣ್ಣಿಸಿದರು. ಎರಡು ಕಣ್ಣುಗಳನ್ನು ಏಕತ್ರಗೊಳಿಸುವ ಕಾರ್ಯ ನಡೆಯುತ್ತಿದೆ. ಅಹೋರಾತ್ರಿ ಗಮಕ ಕಾರ್ಯಕ್ರಮ ಆಯೋಜಿಸಿರುವ ಗಮಕ ಕಲಾ ಪರಿಷತ್ ಪದಾಧಿಕಾರಿಗಳ ಕಾರ್ಯ ಅಭಿನಂದನೀಯ. ಇಲ್ಲಿ ಕರ್ಣಪರ್ವ ಆಯ್ಕೆ ಮಾಡಿ ಕೊಂಡಿರುವುದು ಸ್ತುತ್ಯಾರ್ಹ. ಕರ್ಣ ಪರ್ವ ತುಂಬಾ ವಿಶೇಷವಾದ ಪರ್ವ. ಇದರಲ್ಲಿ ಕರ್ಣನ ಪಟ್ಟಾಭಿಷೇಕದಿಂದ ಮುಕ್ತಿವರೆಗೆ ತಿಳಿಸುವಂತೆ ಕಾರ್ಯಕ್ರಮ ರೂಪಿಸುವುದು ಶ್ಲಾಘನೀಯ. ಅಂತ್ಯದಲ್ಲಿ ಕರ್ಣನ ಮುಕ್ತಿ ವಿಷಾದ ಭಾವ ಮೂಡಿಸುತ್ತದೆ. ವ್ಯಾಸ ಕರ್ಣ, ಪಂಪ ಕರ್ಣ, ಕುಮಾರವ್ಯಾಸ ಕರ್ಣ ಕುರಿತ ತೌಲನಿಕ ಅಧ್ಯಯನ ಕುರಿತು ಅನೇಕ ವಿದ್ವಾಂಸರು ಕೃತಿಗಳನ್ನು ರಚಿಸಿದ್ದಾರೆ. ಆಸಕ್ತರು ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.