ಗದ್ದಲದಲ್ಲೇ ಬಸ್ ಟರ್ವಿುನಲ್ ಲೋಕಾರ್ಪಣೆ

ಬೆಂಗಳೂರು/ಹೊಸಕೋಟೆ: ಹೊಸಕೋಟೆ ಬಸ್ ಟರ್ವಿುನಲ್ ಉದ್ಘಾಟನೆ ಕಾರ್ಯಕ್ರಮ ಕಾಂಗ್ರೆಸ್ ಹಾಗೂ ಬಿಜೆಪಿಯ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಯಿತು.

ಸುಸಜ್ಜಿತ ಬಸ್ ಟರ್ವಿುನಲ್ ಉದ್ಘಾಟನೆಗೆ ಶನಿವಾರ ಅದ್ದೂರಿ ಸಿದ್ಧತೆ ಮಾಡಿಕೊಂಡಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಬಿಜೆಪಿ ಪ್ರತಿಭಟನೆ ಬಿಸಿ ಎದುರಾಯಿತು. ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರ್ಯಕ್ರಮದಲ್ಲಿನ ಹೂಕುಂಡ ಛಿದ್ರವಾದರೆ, ಆಸನ ಚೆಲ್ಲಾಪಿಲ್ಲಿಯಾದವು. ಕಟ್ಟಿದ್ದ ರಿಬ್ಬನ್ ಉದ್ಘಾಟನೆಗೂ ಮುನ್ನವೇ ಲೋಕಾರ್ಪಣೆಯಾಯಿತು!

ವಿಕೋಪಕ್ಕೆ ತಿರುಗಿದ ಪರಿಸ್ಥಿತಿ ತಿಳಿಗೊಳಿಸುವಷ್ಟರಲ್ಲಿ ಜಿಲ್ಲಾ ಎಸ್​ಪಿ ರಾಮನ್​ನಿವಾಸ್ ಸೆಪಟ್ ಬೆವರು ಸುರಿಸಬೇಕಾಯಿತು. ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶರತ್ ಬಚ್ಚೇಗೌಡರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕವಷ್ಟೇ ಪರಿಸ್ಥಿತಿ ತಹಬದಿಗೆ ಬಂತು. ಉದ್ಘಾಟನೆ 11 ಗಂಟೆಗೆ ನಿಗದಿಯಾಗಿದ್ದರೂ, ಗದ್ದಲದಿಂದಾಗಿ 2 ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಶಿಷ್ಟಾಚಾರ ಉಲ್ಲಂಘನೆ ಆರೋಪ: ಶಿಷ್ಟಾಚಾರದಂತೆ ಸಂಸದ ಬಿ.ಎನ್.ಬಚ್ಚೇಗೌಡರನ್ನು ಆಹ್ವಾನಿಸಿಲ್ಲ ಎಂಬುದು ಬಿಜೆಪಿ ಆರೋಪ. ಸಚಿವ ಎಂಟಿಬಿ ನಾಗರಾಜ್ ಉದ್ದೇಶಪೂರ್ವಕವಾಗಿಯೇ ಸಂಸದರನ್ನು ಕಡೆಗಣಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಇದು ಶಾಂತಿಯುತ ಹೋರಾಟ, ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಉದ್ದೇಶವಿಲ್ಲ. ಯಾರೂ ಗದ್ದಲವೆಬ್ಬಿಸಬಾರದು ಎಂಬ ಶರತ್ ಬಚ್ಚೇಗೌಡ ಮನವಿ ನಡುವೆಯೂ ಕಾರ್ಯಕರ್ತರ ಆಕ್ರೋಶ ಕಡಿಮೆಯಾಗಲಿಲ್ಲ. ಒಂದೆಡೆ ಮೋದಿ ಮೋದಿ ಎಂಬ ಘೋಷಣೆ ಮೊಳಗುತ್ತಿದ್ದರೆ, ಮತ್ತೊಂದೆಡೆ ರಾಹುಲ್ ರಾಹುಲ್… ಸಿದ್ದರಾಮಯ್ಯಗೆ ಜೈ ಎಂಬ ಘೋಷಣೆ ತಾರಕಕ್ಕೇರಿತ್ತು. ಒಂದೂವರೆ ತಾಸು ನಡೆದ ಗದ್ದಲದಲ್ಲಿ ಮೂಕ ಪ್ರೇಕ್ಷಕರಾಗಿದ್ದ ಸಾರ್ವಜನಿಕರು ಮಾತ್ರ ಕಕ್ಕಾಬಿಕ್ಕಿಯಾಗಿದ್ದರು.

ಲಘು ಲಾಠಿ ಪ್ರಹಾರ: ಹೊಸಕೋಟೆ ಭಾಗದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ವೈರತ್ವ ಹೊಸದೇನಲ್ಲ. ಬೂದಿ ಮುಚ್ಚಿದ ಕೆಂಡದಂತಿರುವ ಹಗೆ ಉದ್ಘಾಟನೆ ವೇಳೆ ಮತ್ತೊಮ್ಮೆ ಭುಗಿಲೆದ್ದಿತು. ಬೆಳಗ್ಗೆ 10 ಗಂಟೆಗೆ ವೇದಿಕೆ ಕಾರ್ಯಕ್ರಮದ ಹೊರಭಾಗದಲ್ಲಿ ಕಪು್ಪಪಟ್ಟಿ ಧರಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು.

ಪ್ರತಿಭಟನೆ ಹೊರಭಾಗಕ್ಕೆ ಸೀಮಿತ ಎಂದೇ ಪೊಲೀಸರು ಭಾವಿಸಿದ್ದರು. ಆದರೆ ಕ್ಷಣಾರ್ಧದಲ್ಲಿ ಪೊಲೀಸ್ ಪಹರೆಯನ್ನು ದಾಟಿ ಒಳನುಗ್ಗಿದ ಕಾರ್ಯಕರ್ತರನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾದರು. ಖುದ್ದು ಸಂಸದರ ಪುತ್ರನೇ ಪ್ರತಿಭಟನೆ ಮುಖಂಡತ್ವ ವಹಿಸಿದ್ದರಿಂದ ಪೊಲೀಸರಿಗೆ ಅತ್ತ ದರಿ ಇತ್ತ ಪುಲಿ ಎಂಬ ಸ್ಥಿತಿ ಉಂಟಾಗಿತ್ತು. ಈ ವೇಳೆ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ ಶರತ್ ಬಚ್ಚೇಗೌಡ ಹಾಗೂ ಕೆಲವು ಬಿಜೆಪಿ ಮುಖಂಡರನ್ನು ಹೊರದಬ್ಬಿಕೊಂಡೇ ಹೋದ ಪೊಲೀಸರು ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದರು.

ಸಂಸದರಿಗೆ ಶೋಭೆಯಲ್ಲ: ಪ್ರಕರಣದಿಂದ ತೀವ್ರ ಬೇಸರಗೊಂಡಿದ್ದ ವಸತಿ ಸಚಿವ ಎಂಟಿಬಿ ನಾಗರಾಜ್, ವೇದಿಕೆ ಕಾರ್ಯಕ್ರಮದಲ್ಲಿ ಸಂಸದರ ಮೇಲೆ ವಾಗ್ದಾಳಿ ನಡೆಸಿದರು. ಪುಂಡರನ್ನು ಕಟ್ಟಿಕೊಂಡು ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ನಿಮ್ಮ ವರ್ತನೆ ಶೋಭೆ ತರುವಂತಹದ್ದಲ್ಲ ಎಂದು ಆಕ್ರೋಶ ಹೊರಹಾಕಿದರು. ನಿಮ್ಮ ದೌರ್ಜನ್ಯ, ದರ್ಪಕ್ಕೆ ಈಗಾಗಲೇ ಜನತೆ 3 ಬಾರಿ ಸೋಲಿಸಿ ಉತ್ತರ ನೀಡಿದ್ದಾರೆ. ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮತದಾರರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ನಾವೆಲ್ಲೂ ಶಿಷ್ಟಾಚಾರ ಉಲ್ಲಂಘಿಸಿಲ್ಲ. ಆ ಉದ್ದೇಶವೂ ನಮಗಿಲ್ಲ. ನೀವೇ ಕಾರ್ಯಕ್ರಮಕ್ಕೆ ಬಂದಿದ್ದರೆ ಗೌರವ ಸಿಗುತ್ತಿತ್ತು. ಆದರೆ ಈ ರೀತಿ ಕಾರ್ಯಕರ್ತರನ್ನು ಬಿಟ್ಟು ದಾಂಧಲೆ ನಡೆಸುವ ಅಗತ್ಯವಿರಲಿಲ್ಲ ಎಂದು ಕಿಡಿಕಾರಿದರು.

ಪಾಪ ಶರತ್!: ನಿಮ್ಮ ಮಗ ಶರತ್ ಬಿಸಿರಕ್ತದ ಹುಡುಗ. ಆತನಿಗೆ ಶಿಷ್ಟಾಚಾರ, ಸಭೆಯ ಗೌರವದ ಬಗ್ಗೆ ತಿಳಿದಿಲ್ಲ ಎನಿಸುತ್ತದೆ ಪಾಪ. ನೀವಾದರೂ ಬುದ್ದಿಹೇಳಬೇಕಿತ್ತು ಎಂದು ಎಂಟಿಬಿ ನಾಗರಾಜ್ ಸಂಸದ ಬಚ್ಚೇಗೌಡರಿಗೆ ಮಾತಿನ ಚಾಟಿ ಬೀಸಿದರು. ನಾವೂ ಬಿಸಿ ರಕ್ತದಲ್ಲೇ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದು, ಆದರೆ ನಾವೆಂದಿಗೂ ಇಂಥ ವರ್ತನೆ ಪ್ರದರ್ಶಿಸಿಲ್ಲ. ನಮ್ಮ ಸಮ್ಮಿಶ್ರ ಸರ್ಕಾರದ ಆಡಳಿತವಿದೆ. ರಾಜ್ಯ ಸರ್ಕಾರದ ಅನುದಾನದಲ್ಲಿ ಬಸ್ ಟರ್ವಿುನಲ್ ನಿರ್ವಣವಾಗಿದೆ. ಇದರಲ್ಲಿ ನಿಮ್ಮ ಪಾತ್ರವೇನಿದೆ. ನಿಮ್ಮ ಸಂಸದರ ಅನುದಾನ 10 ಬೋರ್​ವೆಲ್ ಕೊರೆಸಲು ಸಾಕಾಗುವುದಿಲ್ಲ ಎಂಬುದು ನನಗೂ ಗೊತ್ತು. ತಾಲೂಕಿನಲ್ಲಿ ನೀವೇನು ಅಭಿವೃದ್ಧಿ ಮಾಡುತ್ತೀರಿ ಎಂಬುದನ್ನು ನಾನೂ ಕಾದು ನೋಡುತ್ತೀನಿ ಎಂದು ಸವಾಲೆಸೆದರು.

ನನಗೆ ತುಂಬಾ ನೋವಾಗಿದೆ: ಸಂಸದ ಬಚ್ಚೇಗೌಡರು ನನಗೆ ಆತ್ಮೀಯರು, ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ. ನಾನೇ ಖುದ್ದು ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆ. ಆದರೂ ಇಂಥ ಘಟನೆ ನಡೆದಿರುವುದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಬೇಸರ ವ್ಯಕ್ತಪಡಿಸಿದರು. ಹೊಸಕೋಟೆಯಲ್ಲಿ ಸುಸಜ್ಜಿತ ಬಸ್ ಟರ್ವಿುನಲ್ ಲೋಕಾರ್ಪಣೆಯಾಗುತ್ತಿರುವುದು ಸಂತಸದ ವಿಷಯ. ಸಾರ್ವಜನಿಕರಿಗೆ ಒಳಿತಾಗುವ ಕೆಲಸಕ್ಕೆ ಪಕ್ಷಭೇದ ಮರೆತು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

10 ದಿನದ ಹಿಂದೆ ಕಾರ್ಯಕ್ರಮದ ರೂಪುರೇಷೆ ಬಗ್ಗೆ ರ್ಚಚಿಸಲಾಗಿತ್ತು. ಪಕ್ಷಾತೀತವಾಗಿ ಸ್ಥಳೀಯ ಜನಪ್ರತಿನಿಧಿಗಳನ್ನು ಶಿಷ್ಟಾಚಾರದಂತೆ ಆಹ್ವಾನಿಸುವಂತೆ ತಿಳಿಸಲಾಗಿತ್ತು. ಸರ್ಕಾರದ ಅಧಿಕೃತ ಆಹ್ವಾನ ಪತ್ರಿಕೆ ಹಾಗೂ ಶಿಲಾನ್ಯಾಸದಲ್ಲೂ ಸಂಸದರ ಹೆಸರು ನಮೂದಿಸಲಾಗಿದೆ. ಆದರೂ ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದು ಶೋಭೆ ತರುವ ಕೆಲಸವಲ್ಲ.

| ಎಂಟಿಬಿ ನಾಗರಾಜ್, ವಸತಿ ಸಚಿವ

Leave a Reply

Your email address will not be published. Required fields are marked *