ಗದಗ-ಬೆಟಗೇರಿಯಲ್ಲಿ ರಂಗಪಂಚಮಿ ಇಂದು

ಗದಗ: ಗದಗ-ಬೆಟಗೇರಿ ಅವಳಿ ನಗರದ ವಿವಿಧೆಡೆ ಮಾ. 21ರಂದು ಕಾಮಣ್ಣ-ರತಿ ಮೂರ್ತಿಗಳ ಪ್ರತಿಷ್ಠಾಪನೆಗೊಂಡಿದ್ದು, ಮಾ. 25ರಂದು ಬೆಳಗ್ಗೆ ರಂಗಪಂಚಮಿ ಅಂಗವಾಗಿ ಬಣ್ಣದೋಕುಳಿ ಜರುಗಲಿದೆ. ಮಧ್ಯಾಹ್ನ 12ರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಕಾಮಣ್ಣ-ರತಿ ಮೂರ್ತಿಗಳ ಭವ್ಯ ಮೆರವಣಿಗೆ ಜರುಗಲಿದೆ.

ಬರದ ನಡುವೆಯೂ ಹೋಳಿ ಹುಣ್ಣಿಮೆ ರಂಗು ಪಡೆಯುತ್ತಿದೆ. ನಗರದ ವಿವಿಧೆಡೆ ಪ್ರತಿಷ್ಠಾಪಿಸಿದ ಕಾಮಣ್ಣ-ರತಿ ಮೂರ್ತಿಗಳ ಎದುರು ಯುವಕರು, ಮಕ್ಕಳು ಹಲಗೆ ಬಾರಿಸುತ್ತ ಸಂಭ್ರಮಿಸುತ್ತಿ್ತ್ದಾರೆ. ಹುಣ್ಣಿಮೆ ದಿನದಿಂದ ನಿತ್ಯ ಕಾಮ-ರತಿ ಮೂರ್ತಿಗಳಿಗೆ ವಿಶೇಷ ಪೂಜೆ ನಡೆಯುತ್ತಿದೆ.

17 ಕಡೆ ಮೂರ್ತಿ ಸ್ಥಾಪನೆ: ಹೋಳಿ ಹುಣ್ಣಿಮೆಯಂದು ಅವಳಿ ನಗರದ ವಿವಿಧೆಡೆ ಹಲವು ದಶಕಗಳಿಂದ ಮಣ್ಣು, ಕಟ್ಟಿಗೆಯಿಂದ ಕಾಮ-ರತಿ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತ ಬರಲಾಗುತ್ತದೆ. ನಗರದ ಕಿಲ್ಲಾ ಓಣಿ, ವೀರನಾರಾಯಣ ದೇವಸ್ಥಾನ ಹತ್ತಿರ, ಖಾನತೋಟ, ಮದ್ಲಿಓಣಿ, ಗಂಗಾಪುರ ಪೇಟೆ, ನರಿಬಾವಿ ಓಣಿ, ಹಾಳದಿಬ್ಬ ಓಣಿ, ಒಕ್ಕಲಗೇರಿ ಓಣಿ ಸೇರಿ 17 ಕಡೆ ಕಾಮ-ರತಿಯರ ಮೂರ್ತಿ ಸ್ಥಾಪಿಸಲಾಗಿದೆ. ನಗರದ ಕಿಲ್ಲಾ ಚಂದ್ರಸಾಲಿ ಸರ್ಕಾರಿ ಕಾಮ-ರತಿ ಮೂರ್ತಿಗೆ 154 ವರ್ಷ, ಅಯ್ಯಪ್ಪಜ್ಜ ರಸ್ತೆ ಮೇರವಾಡೆ ಕಾಮ-ರತಿ ಮೂರ್ತಿಗೆ 79 ವರ್ಷ, ನಾಲ್ವಾಡಗಲ್ಲಿಯ ಟೆಂಗಿನಕಾಯಿ ಕಾಮ-ರತಿ ಮೂರ್ತಿಗಳ ಪ್ರತಿಷ್ಠಾಪನೆಗೆ 93 ವರ್ಷ ಕಳೆದಿವೆ.

ಭರ್ಜರಿ ಸಿದ್ಧತೆ: ಬಣ್ಣದೋಕುಳಿಗೆ ಅವಳಿ ನಗರದ ಜನತೆ ಸಜ್ಜಾಗಿದ್ದಾರೆ. ಬಣ್ಣದಂಗಡಿಗಳಲ್ಲಿ ಬಣ್ಣದ ಪೊಟ್ಟಣಗಳು, ಪಿಚಕಾರಿಗಳು, ಮುಖವಾಡಗಳು ಸೇರಿ ರಂಗಿನಾಟಕ್ಕೆ ಅಗತ್ಯವಾದ ಉಪಕರಣಗಳ ಮಾರಾಟ ಭರದಿಂದ ಸಾಗಿದೆ. ಯುವಕರು, ಮಕ್ಕಳು, ಹಿರಿಯರು ಹಲಗೆ ಬಾರಿಸುತ್ತ, ಬಾಯಿ ಬಡಿದುಕೊಳ್ಳುತ್ತ ಮನೆ, ಅಂಗಡಿಗಳಿಗೆ ತೆರಳಿ ಬಣ್ಣದಾಟಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಶಾಂತಿ, ಸುವ್ಯವಸ್ಥೆಗಾಗಿ ಜಿಲ್ಲಾ ಪೊಲೀಸ್ ಇಲಾಖೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ.

ಪರೀಕ್ಷಾರ್ಥಿಗಳಿಗೆ ಬಣ್ಣ ಎರಚಿದರೆ ಕ್ರಮ: ಮಾ. 25ರಂದು ಬೆಳಗ್ಗೆ 9.30ರಿಂದ ಎಸ್ಸೆಸ್ಸೆಲ್ಸಿ ಗಣಿತ ವಿಷಯದ ಪರೀಕ್ಷೆ ನಡೆಯಲಿದೆ. ರಂಗಪಂಚಮಿ ಇರುವುದರಿಂದ ಗದಗ-ಬೆಟಗೇರಿಯ 14 ಪರೀಕ್ಷಾ ಕೇಂದ್ರಗಳ ಸುತ್ತ, ನಗರದ ಪ್ರಮುಖ ರಸ್ತೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪರೀಕ್ಷೆಗೆ ಹಾಜರಾಗಲು ತೆರಳುವ ಪರೀಕ್ಷಾರ್ಥಿಗಳಿಗೆ ಅನವಶ್ಯಕವಾಗಿ ತೊಂದರೆ ನೀಡಿದರೆ ಹಾಗೂ ಬಣ್ಣ ಎರಚಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.

ಗದಗ ನಗರದ ವಿವಿಧೆಡೆ ಪ್ರತಿಷ್ಠಾಪನೆಗೊಂಡ ಕಾಮ-ರತಿ ಮೂರ್ತಿಗಳ ಮೆರವಣಿಗೆ ಈ ಮುಂಚೆ ಪ್ರತ್ಯೇಕವಾಗಿ ನಡೆಯುತ್ತಿದ್ದವು. ಅವೆಲ್ಲವುಗಳ ಮೆರವಣಿಗೆಯ ವೀಕ್ಷಣೆ ಕಷ್ಟವಾಗುತ್ತಿತ್ತು. ಈ ಬಾರಿ ನಗರದ 14 ಕಾಮ-ರತಿಯರ ಮೂರ್ತಿ ಮೆರವಣಿಗೆಯನ್ನು ಒಂದೇ ಮಾರ್ಗದಲ್ಲಿ ನಡೆಯುವಂತೆ ವ್ಯವಸ್ಥೆ ಮಾಡಲಾಗಿದೆ.

| ರಾಜು ಖಾನಪ್ಪನವರ, ಗದಗ-ಬೆಟಗೇರಿ ಕಾಮ ರತಿ ಉತ್ಸವ ಮಹಾಮಂಡಳಿ ಸಂಚಾಲಕ

ಹೋಳಿ ಹಬ್ಬವನ್ನು ಜನರು ಭಾವೈಕ್ಯದಿಂದ ಆಚರಿಸಬೇಕು. ರಂಗಪಂಚಮಿಯಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯಿದೆ. ಸಾರ್ವಜನಿಕರು, ಯುವಕರು ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ನೋಡಿಕೊಳ್ಳಬೇಕು. ತಪ್ಪೆಸಗಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

| ಶ್ರೀನಾಥ ಜೋಶಿ, ಎಸ್ಪಿ

ಲಕ್ಷ್ಮೇಶ್ವರ, ಶಿಗ್ಲಿಯಲ್ಲೂ ಇಂದು: ಪಟ್ಟಣ ಮತ್ತು ಶಿಗ್ಲಿ ಗ್ರಾಮದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಮಾ. 25ರಂದು ರಂಗಪಂಚಮಿ ಆಚರಿಸಲಾಗುವುದು. ಸಂಪ್ರದಾಯದಂತೆ ಪಟ್ಟಣದಲ್ಲಿ 22 ಕಡೆ ಮತ್ತು ಶಿಗ್ಲಿಯಲ್ಲಿ 6 ಕಡೆ ರತಿ-ಕಾಮಣ್ಣನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಮಾ. 25ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯಿದ್ದು, ಪರೀಕ್ಷೆಗೂ ಮುನ್ನ ಹಾಗೂ ನಂತರ ಪರೀಕ್ಷಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತ ರೀತಿಯಲ್ಲಿ ಹಬ್ಬ ಆಚರಿಸಬೇಕು. ಮುಂಜಾಗ್ರತೆ ಕ್ರಮವಾಗಿ ಪಟ್ಟಣದ ಆಯಕಟ್ಟಿನ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ ಎಂದು ಸಿಪಿಐ ಬಾಲಚಂದ್ರ ಲಕ್ಕಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.