ಗಣ್ಯರಿಂದ ಮತ ಚಲಾವಣೆ

ಧಾರವಾಡ: ನಗರದ ಅನೇಕರು ಬಿರು ಬಿಸಿಲಿನಲ್ಲೇ ಅತ್ಯಂತ ಹುರುಪಿನಿಂದ ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳತ್ತ ಆಗಮಿಸುತ್ತಿದ್ದರೆ, ಕೆಲವರು ಸಂಜೆಯಾದರೂ ಅತ್ತ ಮುಖ ಮಾಡಿರಲಿಲ್ಲ. ಇನ್ನು ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷಕ್ಕೆ ಮತ ನೀಡಿ ಎಂದು ಸನ್ನೆ ಮಾಡುವ ದೃಶ್ಯಗಳು ಸಾಮಾನ್ಯವಾಗಿತ್ತು.

ಲೋಕಸಭೆ ಸಾರ್ವತ್ರಿಕ ಚುನಾವಣೆಯ ಮತದಾನ ದಿನವಾದ ಮಂಗಳವಾರ ನಗರದ ವಿವಿಧ ಮತಗಟ್ಟೆಗಳಲ್ಲಿ ಕಂಡು ಬಂದ ದೃಶ್ಯವಿದು.

ಎರಡು ದಿನಗಳಿಂದ ನಗರದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಬಹುತೇಕ ಜನರು ಮತದಾನ ಪ್ರಾರಂಭ ಹೊತ್ತಿನಲ್ಲೇ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು. ಹೀಗಾಗಿ ಬೆಳಗ್ಗೆ 7 ಗಂಟೆಯಿಂದಲೇ ಬಹುತೇಕ ಮತಗಟ್ಟೆಗಳಲ್ಲಿ ಕಾಣುತ್ತಿದ್ದ ಕಿ.ಮೀ. ಉದ್ದದ ಸಾಲು ಮಧ್ಯಾಹ್ನದ ಹೊತ್ತಿಗೆ ಕಡಿಮೆಯಾಗಿತ್ತು. ಮಧ್ಯಾಹ್ನ 4 ಗಂಟೆ ನಂತರ ಮತ್ತೆ ಚುರುಕಿನ ಮತದಾನ ನಡೆದಿದೆ.

ಧಾರವಾಡದ ಜಲದರ್ಶಿನಿ ನಗರದ ಓಂ ಸ್ಕೂಲ್​ನ ಮತಗಟ್ಟೆಯ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಕೆಲ ಹೊತ್ತು ವಿಳಂಬವಾಗಿ ಮತದಾನ ಪ್ರಾರಂಭವಾಗಿದೆ. ಇವಿಎಂನಲ್ಲಿ ಸಮಸ್ಯೆ ಎದುರಾಗಿದ್ದರಿಂದ ಜನರು ಸರದಿ ಸಾಲಿನಲ್ಲೇ ಕಾಯುವಂತಾಗಿತ್ತು.

ಬಾಣಂತಿ ಮತದಾನ: ನಗರದ ನಂ. 8ರ ಶಾಲೆಯ ಮತಗಟ್ಟೆಯಲ್ಲಿ ಬಾಣಂತಿ ಮತದಾನ ಮಾಡಿದ ಘಟನೆ ನಡೆದಿದೆ. ಸೋಮವಾರವಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ಪರ್ವತೀಕರ ಎಂಬುವವರು, ಒಂದು ದಿನದ ಮಗುವಿನೊಂದಿಗೆ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಮಾದರಿಯಾದ ವೃದ್ಧೆ: ಮತದಾನ ಮಾಡಲು ಅನೇಕ ಜನರು ಹಿಂದೇಟು ಹಾಕುತ್ತಾರೆ. ಆದರೆ ಕರ್ನಾಟಕ ವ್ಯಾಯಾಮ ಶಾಲೆ ಬಳಿಯ ನಿವಾಸಿ, ಹಾಸಿಗೆ ಹಿಡಿದಿದ್ದ 85 ವರ್ಷದ ವೃದ್ಧೆಯೊಬ್ಬರೂ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಕೃಷ್ಣಮ್ಮ ಶೆಟ್ಟಿ ಅವರು ಕೆಲ ದಿನಗಳಿಂದ ಹಾಸಿಗೆ ಹಿಡಿದಿದ್ದರೂ ಸಂಬಂಧಿಕರೊಂದಿಗೆ ಸ್ಟ್ರೆಚರ್​ನಲ್ಲೇ ಆಗಮಿಸಿ ಮತ ಚಲಾಯಿಸಿದರು.

ಉತ್ತಮ ಪ್ರತಿಕ್ರಿಯೆ: ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡಿದ್ದು ಖುಷಿಯಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಜನರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದು ಮತ್ತಷ್ಟು ಸ್ಪೂರ್ತಿ ಬಂದಂತಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಬೇಕು. ಜಿಲ್ಲೆಯಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ನಿರ್ವಣವಾಗಿದೆ. ನಮ್ಮ ವರದಿ ಪ್ರಕಾರ ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಭಾಗದ ಸಂಸದ ಪ್ರಲ್ಹಾದ ಜೋಶಿ ಅವರು ಹೆಚ್ಚಿನ ಮತಗಳ ಅಂತರರಿಂದ ಜಯಗಳಿಸಿದರೆ, ನರೇಂದ್ರ ಮೋದಿ ಅವರು ಅತೀ ಹೆಚ್ಚಿನ ಸೀಟ್ ಪಡೆದು ಮತ್ತೊಮ್ಮೆ ಪ್ರಧಾನಮಂತ್ರಿ ಆಗಲಿದ್ದಾರೆ ಎಂಬ ಭರವಸೆ ಇದೆ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

ಗೆಲ್ಲುವ ಭರವಸೆ ಇದೆ: ಈ ಬಾರಿ ಜನರಿಗೆ ಬಿಜೆಪಿಯ ಸುಳ್ಳಿನ ಕಂತೆಗಳ ಬಗ್ಗೆ ಅರಿವಾಗಿದೆ. ಸಂಸದ ಪ್ರಲ್ಹಾದ ಜೋಶಿ ಬಗ್ಗೆ ಸಮಗ್ರ ಮಾಹಿತಿ ತಿಳಿಸಿದ್ದಾರೆ. ಹೀಗಾಗಿ ಜನರು ಸಹಜವಾಗಿ ತಮ್ಮ ಪರವಾಗಿ ನಿಂತಿದ್ದಾರೆ. ನಾನು ಜಿಲ್ಲೆಗೆ ಹೊಸಬನಲ್ಲ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಹೀಗಾಗಿ ಕೊನೆ ಕ್ಷಣದಲ್ಲಿ ಟಿಕೆಟ್ ಘೊಷಣೆ ಮಾಡಿದರೂ ತೊಂದರೆಯಾಗಿಲ್ಲ. ಪಕ್ಷದಲ್ಲಿ ಹಿಂದೆಂದೂ ಕಾಣದ ಒಗ್ಗಟ್ಟಿನಿಂದ ಈ ಬಾರಿಯ ಚುನಾವಣೆ ನಡೆಸಲಾಗಿದೆ. 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಜಯಗಳಿಸುವ ಭರವಸೆ ಇದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದರು.