ಮಾಂಜರಿ: ಗಣೇಶ ಉತ್ಸವ ಎಲ್ಲರಲ್ಲೂ ಒಗ್ಗಟ್ಟು ಮೂಡಿಸಬೇಕು. ಹಾಗಾದಾಗ ಬಾಲಗಂಗಾಧರ ತಿಲಕ ಗಣೇಶೋತ್ಸವ ಆಚರಣೆ ಉದ್ದೇಶ ಸಲವಾಗುತ್ತದೆ. ತಾಯಂದಿರು ಮಕ್ಕಳಿಗೆ ಕೀರ್ತನೆ, ಹರಿಕತೆ, ಮಹಾಭಾರತ, ರಾಮಾಯಣ ಕುರಿತು ತಿಳಿಸಬೇಕು ಎಂದು ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಸರ್ಜೆರಾವ ನಗರದಲ್ಲಿ ಸಾರ್ವಜನಿಕ ಗಣೇಶ ಉತ್ಸವ ಮಂಡಳಿಯಿಂದ ಹಮ್ಮಿಕೊಂಡಿದ್ದ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ದಾರಿ ತಪ್ಪುತ್ತಿರುವ ಯುವಜನಾಂಗಕ್ಕೆ ಶರಣರ ಚಿಂತನೆ ಮತ್ತು ಸಂದೇಶ ತಿಳಿಸುವ ಮೂಲಕ ಅವರಲ್ಲಿ ಸಚ್ಚಾರಿತ್ರ್ಯ ಸದ್ಭಾವನೆ ಮೂಡಿಸಿ ಸನ್ಮಾರ್ಗದತ್ತ ಕೊಂಡೊಯ್ಯಬೇಕು.
ಮಾತೃ, ಪಿತೃ ಮತ್ತು ಗುರುವನ್ನು ದೇವರಂತೆ ಕಾಣುವ ಸಂಸ್ಕೃತಿ ನಮ್ಮದು. ಹೀಗಾಗಿ ಗುರು-ಹಿರಿಯರನ್ನು ಪೂಜ್ಯನೀಯ ಭಾವದಿಂದ ಕಾಣುವ ಮನೋಭಾವ ನಮ್ಮದಾಗಬೇಕು. ಅಂದಾಗ ಮಾತ್ರ ಮಕ್ಕಳು ನಮ್ಮನ್ನು ಗೌರವಿಸುತ್ತಾರೆ ಎಂದರು.
ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಸುರೇಶ ಪಾಟೀಲ, ವಿವೇಕ ಕಮತೆ, ಸಂಜಯ ಚೌಧರಿ ಇತರರಿದ್ದರು.