ಗಡಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ: ಪ್ರೊ. ಪೋಕಳೆ

ಧಾರವಾಡ: ಬೆಳಗಾವಿ ಗಡಿ ಸಮಸ್ಯೆ ಮಹಾರಾಷ್ಟ್ರದವರಿಗೆ ಚದುರಂಗದಾಟವಾಗಿದ್ದರೆ, ಕರ್ನಾಟಕದವರಿಗೆ ಪ್ರಾಣ ಸಂಕಟವಾಗಿದೆ. ಈ ಎಲ್ಲ ಪಿತೂರಿಗಳಿಂದ ಬೆಳಗಾವಿ ಕೈಬಿಟ್ಟು ಹೋಗುವುದೋ ಎಂಬ ದುಃಸ್ವಪ್ನ ಆಗಾಗ ನಮ್ಮನ್ನು ಎಚ್ಚರಿಸುತ್ತಿದೆ. ಕೇಂದ್ರ ಸರ್ಕಾರ ಕೈ ಕಟ್ಟಿ ಕುಳಿತಿರುವುದರಿಂದಲೇ ಇಂದಿಗೂ ಬೆಳಗಾವಿ ಗಡಿ ಸಮಸ್ಯೆ ಜೀವಂತವಾಗಿದೆ ಎಂದು ಬೆಳಗಾವಿ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಆರೋಪ ಮಾಡಿದರು.

ಕರ್ನಾಟಕ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿರುವ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಶನಿವಾರ ಅಂಬಿಕಾತನಯದತ್ತ ವೇದಿಕೆಯಲ್ಲಿ ನಡೆದ ಗಡಿನಾಡ ತಲ್ಲಣಗಳು ಗೋಷ್ಠಿಯಲ್ಲಿ “ಗಡಿ ಸಮಸ್ಯೆ; ಎದುರಿಸಬೇಕಾದ ಪ್ರಶ್ನೆಗಳು” ಕುರಿತು ಅವರು ಮಾತನಾಡಿದರು.

ಮಹಾರಾಷ್ಟ್ರದವರ ಬೇಡಿಕೆಗೆ ತಕ್ಕಂತೆ ಮಹಾಜನ ವರದಿ 1966 ರಲ್ಲಿ ಜಾರಿಗೆ ಬಂತು. ಬೆಳಗಾವಿ ಬೇಕು ಎಂದಿದ್ದ ಮರಾಠಿಗರಿಗೆ ಮಹಾಜನ್ ವರದಿಯೇ ಬಲವಾಗಿ ತಿವಿಯಿತಾದರೂ ಕರ್ನಾಟಕಕ್ಕೂ ಮರ್ಮಾಘಾತವಾಯಿತು. ಕಾಸರಗೋಡು, ಸಾಂಗ್ಲಿ, ಸೊಲ್ಲಾಪುರ, ಜತ್ತ ಮುಂತಾದ ಕನ್ನಡ ಪ್ರದೇಶಗಳು ಕರ್ನಾಟಕ ಬಿಟ್ಟು ಹೋದವು. ಹೀಗಾಗಿ ಇಂದಿಗೂ ಮಹಾಜನ ವರದಿ ನಮಗೆ ಬೇಕಾ ಎಂಬ ಚಿಂತೆ ಇನ್ನೂ ನಮ್ಮನ್ನು ಕಾಡುತ್ತಿದೆ ಎಂದರು.

1991ರ ನಂತರ ಬೆಳಗಾವಿ ಜಿಲ್ಲೆಯಲ್ಲಿನ ರಾಜಕೀಯ ಬದಲಾವಣೆಗಳಿಂದ ಕನ್ನಡ ಪತ್ರಿಕೆಗಳ ಶಕ್ತಿ ಮರಾಠಿ ಪ್ರಾಬಲ್ಯ ಕಡಿಮೆ ಮಾಡಲು ಸಬಲವಾಯಿತು. ಆದರೆ, ಕೆಲ ಮರಾಠಿಗರು ಬೆಳಗಾವಿ ಗಡಿ ವಿವಾದವನ್ನು ಸುಪ್ರೀಂಕೋರ್ಟ್​ಗೆ ತೆಗೆದುಕೊಂಡು ಹೋದರು. ಅಲ್ಲಿಂದ ಅಸಲಿ ಸಮಸ್ಯೆ ಶುರುವಾಗಿ ಪರಿಸ್ಥಿತಿ ಮತ್ತಷ್ಟು ಜಟಿಲಗೊಳಿಸಿತು. ಗಡಿ ವಿವಾದಗಳನ್ನು ಬಗೆಹರಿಸುವುದು ಸುಪ್ರೀಂಕೋರ್ಟ್ ಕೆಲಸವಲ್ಲ. ಅದು ಸಂಸತ್​ನ ಕೆಲಸ ಎಂಬ ಸಾಮಾನ್ಯ ಜ್ಞಾನ ತಿಳಿಯದ ಮರಾಠಿಗರು ಮೊಂಡುತನ ಪ್ರದರ್ಶಿಸುತ್ತಿರುವುದು ನಮ್ಮನ್ನು ಕೆರಳಿಸುತ್ತಿದೆ. ಆದರೆ, ನ್ಯಾಯಾಲಯ ಆದೇಶ ಏನು ಬೇಕಾದರೂ ಬರಬಹುದು. ಹೀಗಾಗಿ ಕನ್ನಡಿಗರು ಎಚ್ಚರವಾಗಿರಬೇಕು ಎಂದು ಎಚ್ಚರಿಸಿದರು.

ಗಡಿನಾಡಿನ ಕೊಡುಕೊಳ್ಳುವಿಕೆ ಕುರಿತು ಮಾತನಾಡಿದ ಪ್ರೊ. ಚಂದ್ರಕಾಂತ ಪೋಕಳೆ, ಕರ್ನಾಟಕ, ಮಹಾರಾಷ್ಟ್ರದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ವಿುಕ ಕೊಡುಕೊಳ್ಳುವಿಕೆ ತೆರೆದಿಡುವ ಮೂಲಕ ಎರಡೂ ರಾಜ್ಯಗಳು ಅವಳಿ ಸಹೋದರರು ಎಂಬ ಶಂ.ಭಾ. ಜೋಶಿ ಅವರ ಮಾತನ್ನು ಸ್ಮರಿಸಿದರು. ಧಾರ್ವಿುಕತೆಯಲ್ಲಿ ವಿಠ್ಠಲ ರುಕುಮಾಯಿ, ಖಂಡೋಬ, ಯಲ್ಲಮ್ಮ, ತಿಲಕರ ಸಾರ್ವಜನಿಕ ಗಣಪ ಪ್ರತಿಷ್ಠಾಪನೆ ಎಷ್ಟೊಂದು ಕೊಡುಕೊಳ್ಳುವಿಕೆ ನಡೆಸಿವೆ ಎಂಬುದಕ್ಕೆ ಲೆಕ್ಕ ಇಡಲು ಸಾಧ್ಯವಿಲ್ಲ. ಮರಾಠಿಯ ಸಾಕಷ್ಟು ಲೇಖಕರು ಕರ್ನಾಟಕದಲ್ಲಿ ಜನಪ್ರಿಯ, ಭೈರಪ್ಪ ಅವರಿಂದ ಅನೇಕರು ಮಹಾರಾಷ್ಟ್ರದಲ್ಲಿ ಜನಪ್ರಿಯ. ಸ್ವಾತಂತ್ರ ಪೂರ್ವ ಮಹಾರಾಷ್ಟ್ರ ಕರ್ನಾಟಕ ಬೇರೆಯೇ ಇರಲಿಲ್ಲ ಎಂದರು.

ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರ ಹಾಗೂ ಕಸಾಪ ಅಧ್ಯಕ್ಷ ಮನು ಬಳಿಗಾರ ಇಲ್ಲ. ಅವರಿದ್ದರೆ ಜಗಳ ಮಾಡಲೇಬೇಕು ಎಂದು ನಿಶ್ಚಯ ಮಾಡಿಕೊಂಡು ಬಂದಿದ್ದೆ. ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಂಬಂಧಿಸಿದ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡುತ್ತಿಲ್ಲ. ಇದು ಒಂದು ರೀತಿಯಲ್ಲಿ ‘ಗಂಡನ ಅಂಜಿಕೆಯಿಲ್ಲದ ಹೆಂಡತಿ ಮನೆ ಬಿಟ್ಟು ಹೊರಟಂತಾಗಿದೆ’ ಎಂದು ಹಾಸ್ಯ ಚಟಾಕಿ ಮೂಲಕ ಯಾರ ಹೆಸರನ್ನೂ ಪ್ರಸ್ತಾಪಿಸದೆ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

ನಮ್ಮ (ಬೆಳಗಾವಿ) ಸ್ಥಿತಿ ಹೇಗಾಗಿದೆ ಎಂದರೆ, ಜಿಲ್ಲೆ ರಾಜಕಾರಣಿಗಳೂ ನಮ್ಮ ಕೈಬಿಟ್ಟಿದ್ದಾರೆ. ರಾಜ್ಯ ಸರ್ಕಾರವೂ ನಮ್ಮೊಂದಿಗಿಲ್ಲ. ಹೀಗಾದರೆ ಗಡಿ ವಿವಾದ ಬಗೆಹರಿಯುವುದು ಹೇಗೆ ಎಂದು ಪ್ರಶ್ನಿಸಿದ ಅವರು, ಗಡಿ ಭಾಗದ ಜನರಿಗೆ ಸಂಕಟದ ವಿಷಯವಾಗಿದ್ದರೆ, ಕೆಲವರಿಗೆ ಇದೆ ಜೀವಾಳವಾಗಿದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ವಿಷಯ ಬಳಕೆಯಾಗುತ್ತಿದೆ ಎಂದೂ ವಿಷಾದಿಸಿದರು.

ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವುದಾದರೆ ಮಾತ್ರ ನಿರ್ಣಯ ಕೈಗೊಳ್ಳಬೇಕು ಎಂದ ಅವರು ಈ ಕುರಿತು ಕಸಾಪ ಅಧ್ಯಕ್ಷರು, ಕಂಬಾರ ಸೇರಿ ಎಲ್ಲ ಸಾಹಿತಿಗಳು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ ಗಡಿ ಸಮಸ್ಯೆ ಬಗೆಹರಿಸಬೇಕು. ಪ್ರತಿ ಬಾರಿಯೂ ಗಿಳಿಪಾಠ ಹೇಳಲಾಗುತ್ತಿದೆ. ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ನಿರ್ಣಯ ತೆಗೆದುಕೊಳ್ಳುವುದು, ಕಸದ ಬುಟ್ಟಿಗೆ ಹಾಕುವುದು ಮುಂದುವರಿದಿದೆ. ಇದೇ ಕಾರಣದಿಂದಲೇ ಆಂಗ್ಲ ಮಾಧ್ಯಮ ಶಾಲೆಗಳು ಇನ್ನೂ ಹೆಚ್ಚಲಿವೆ ಎಂದು ಟೀಕಿಸಿದರು.
ನಾಡೋಜ ರಾಘವೇಂದ್ರ ಜೋಶಿ ಅಧ್ಯಕ್ಷತೆ ವಹಿಸಿದ್ದರು.

ಕಂಬಾರರನ್ನು ಕುಟುಕಿದ ಚಂದರಗಿ

ಗಡಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜಕಾರಣಿಗಳು ನಿಷ್ಕಾಳಜಿ ತೋರುತ್ತಿದ್ದಾರೆ ಎಂದು ಆರೋಪ ಮಾಡಿದ ಅಶೋಕ ಚಂದರಗಿ, ಸಮ್ಮೇಳನದ ಅಧ್ಯಕ್ಷ ಚಂದ್ರಶೇಖರ ಕಂಬಾರ ಅವರನ್ನು ಸಹ ಟೀಕಿಸಿದರು. ಸಾಹಿತಿಗಳು, ಕಸಾಪ ಪದಾಧಿಕಾರಿಗಳು ಸರ್ಕಾರದ ಮುಂದೆ ಭಿಕ್ಷೆ (ಹುದ್ದೆ) ಬೇಡಿದರೆ, ಕನ್ನಡದ ಕೆಲಸ ಹೇಗೆ ಮಾಡಲು ಸಾಧ್ಯ. ನಿಮ್ಮ ಪಾಡಿಗೆ ನೀವು ಕನ್ನಡ ಕೆಲಸ ಮಾಡಿ. ಮುಂದಿನ ವಿಚಾರಗಳನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಅವರು, ಕಂಬಾರ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲೂ ಗಡಿ ನಾಡು ಸಮಸ್ಯೆ ಬಗೆಹರಿಸಲು ಧ್ವನಿ ಎತ್ತಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿಕೊಂಡರೂ ಕ್ರಮ ಕೈಗೊಳ್ಳಲಿಲ್ಲ. ಈ ಭಾಗದದಿಂದ ಬೆಂಗಳೂರಿಗೆ ಹೋದವರು ಬೆಂಗಳೂರು ಸಮುದ್ರದಲ್ಲಿ ಮುಳುಗುತ್ತಾರೆ. ಇತ್ತ ತಿರುಗಿ ನೋಡುವುದಿಲ್ಲ. ಸಾಹಿತಿಗಳು ಮುಖ್ಯಮಂತ್ರಿಗಳೊಂದಿಗೆ ಚೆಲ್ಲಾಟ ಆಡುವುದನ್ನು ಬಿಟ್ಟು ಕನ್ನಡಕ್ಕಾಗಿ ಕೆಲಸ ಮಾಡಬೇಕು ಎಂದರು.

One Reply to “ಗಡಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ: ಪ್ರೊ. ಪೋಕಳೆ”

  1. You think about Bangalore. It is already invaded by Tamil Telugu Malayalees . The important portfolios in in Karnataka with Malayalees or with Tamilians or with telugu hahaha

Comments are closed.