ಗಡಿಯಾರದಲ್ಲಿ ನೈಜ ಕಥೆ ಹೇಳ್ತಾರೆ ಶೀತಲ್

ಬೆಂಗಳೂರು: ಕೆಲ ವರ್ಷಗಳ ಹಿಂದೆ ನಿರ್ದೇಶಕ ನಾಗಶೇಖರ್ ಬಹುಭಾಷೆಯಲ್ಲಿ ‘ಗಡಿಯಾರ’ ಎಂಬ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಅದೇನಾಯಿತೋ, ‘ಗಡಿಯಾರ’ ಸೆಟ್ಟೇರಲು ಒಳ್ಳೆಯ ಟೈಮ್ ಬರಲೇ ಇಲ್ಲ. ಆದರೆ, ಇಲ್ಲೊಂದು ಹೊಸಬರ ತಂಡ ಅದೇ ಶೀರ್ಷಿಕೆ ಅಡಿಯಲ್ಲಿ ಶೇ. 50 ಶೂಟಿಂಗ್ ಮುಗಿಸಿದೆ. ಅಂದಹಾಗೆ, ಇದು ಸುಮಾರು ವರ್ಷಗಳ ಹಿಂದೆ ಕನಕಪುರದಲ್ಲಿ ನಡೆದ ನೈಜ ಘಟನೆ ಆಧರಿತ ಸಿನಿಮಾವಂತೆ. ಮುಖ್ಯ ಪಾತ್ರದಲ್ಲಿ ಶೀತಲ್ ಶೆಟ್ಟಿ ಬಣ್ಣ ಹಚ್ಚಿದ್ದರೆ, ಮಲಯಾಳಂನ ಖ್ಯಾತ ನಟ ಎಂ.ಟಿ. ರಿಯಾಜ್ ಮತ್ತು ಮರಾಠಿ ನಟ ಗೌರಿ ಶಂಕರ್ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿರುವುದು ವಿಶೇಷ. ಈ ಹಿಂದೆ ‘ನಾಗವಲ್ಲಿ ವರ್ಸಸ್ ಆಪ್ತಮಿತ್ರರು’ ಚಿತ್ರಕ್ಕೆ ಸಹ ನಿರ್ವಪಕರಾಗಿದ್ದ ಪ್ರಬೀಕ್ ಮೊಗವೀರ್, ‘ಗಡಿಯಾರ’ಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ವಣವನ್ನೂ ಮಾಡುತ್ತಿದ್ದಾರೆ. ‘ಇದೊಂದು ಭಿನ್ನವಾದ ಸಿನಿಮಾ. ಮೊದಲರ್ಧ ‘ತ್ರಿ ಈಡಿಯಟ್ಸ್ ಮಾದರಿಯಲ್ಲಿ ಸಾಗಿದರೆ, ದ್ವಿತೀಯಾರ್ಧ ‘ಲೂಸಿಯಾ’, ‘ಗುಳ್ಟು’ ಮಾದರಿಯಲ್ಲಿ ಇರಲಿದೆ. ಥ್ರಿಲ್ಲರ್, ಸಸ್ಪೆನ್ಸ್, ಸೈಕಲಾಜಿಕಲ್, ಆಕ್ಷನ್, ಕಾಮಿಡಿ ಹೀಗೆ ಎಲ್ಲ ಅಂಶಗಳನ್ನು ಬೆರೆಸಿ ಈ ಸಿನಿಮಾ ಮಾಡುತ್ತಿದ್ದೇವೆ. ಜತೆಗೆ ರಾಜಮನೆತನದ ಕುರಿತು ಇಲ್ಲಿ ಹೇಳಲಾಗಿದೆ. ಈಗಾಗಲೇ ಶೇ.50 ಶೂಟಿಂಗ್ ಕಂಪ್ಲೀಟ್ ಆಗಿದ್ದು, ಎಂ.ಟಿ. ರಿಯಾಜ್, ಗೌರಿ ಶಂಕರ್ ಅವರ ಪಾಲಿನ ಚಿತ್ರೀಕರಣ ಮುಕ್ತಾಯಗೊಂಡಿದೆ. ಮುಂದಿನ ಹಂತದ ಚಿತ್ರೀಕರಣದಲ್ಲಿ ಶೀತಲ್ ಶೆಟ್ಟಿ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಪ್ರಬೀಕ್. ಚಿತ್ರದಲ್ಲಿ ನಟಿಸಲು ಶೀತಲ್ ಶೆಟ್ಟಿ ಆರಂಭದಲ್ಲಿ ಒಪ್ಪಿರಲಿಲ್ಲವಂತೆ. ಕಾರಣ, ಚಿತ್ರದಲ್ಲಿ ಅವರಿಗೆ ಇದ್ದಿದ್ದು ತನಿಖಾ ಪತ್ರಕರ್ತೆಯ ಪಾತ್ರ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಅವರು ಜರ್ನಲಿಸ್ಟ್ ಪಾತ್ರ ಮಾಡಿರುವುದರಿಂದ ಮತ್ತೆ ಅಂಥದ್ದೇ ಪಾತ್ರಕ್ಕೆ ಬಣ್ಣ ಹಚ್ಚುವುದು ಬೇಡ ಎಂದೇ ಅವರು ನಿರ್ಧರಿಸಿದ್ದರಂತೆ. ಆದರೆ, ಚಿತ್ರದ ಕಥೆ ಕೇಳಿದ ಬಳಿಕ ನಟಿಸಲು ಒಪ್ಪಿಕೊಂಡರು ಎಂಬುದು ನಿರ್ದೇಶಕರ ಹೇಳಿಕೆ. ವಿಶೇಷವೆಂದರೆ, ಮಾಜಿ ಪೊಲೀಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಉಳಿದಂತೆ, ಪ್ರಕಾಶ್ ಬೆಳವಾಡಿ, ಅವಿನಾಶ್, ರಾಜ್ ದೀಪಕ್ ಶೆಟ್ಟಿ, ಮನದೀಪ್ ರಾಯ್ ಮುಂತಾದವರು ಪೋಷಕ ಪಾತ್ರಗಳಲ್ಲಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿ ಏಳು ಭಾಷೆಗಳಲ್ಲಿ ಈ ಸಿನಿಮಾ ತೆರೆಕಾಣಲಿದೆಯಂತೆ!