ಕಾರವಾರ: ಹಕ್ಕಿ ಜ್ವರ ಹರಡುವ ಸಾಧ್ಯತೆಯಿರುವುದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗೋವಾ ರಾಜ್ಯದ ಗಡಿಯಲ್ಲಿರುವ ಮಾಜಾಳಿ ಹಾಗೂ ಅನಮೋಡ ತನಿಖಾ ಠಾಣೆಗಳಲ್ಲಿ ಕೋಳಿ ಮಾಂಸದ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಸೂಚಿಸಿದರು.
ಹಕ್ಕಿ ಜ್ವರ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಕಂಡು ಬಂದಿರುವ ಹಕ್ಕಿ ಜ್ವರ ಕರ್ನಾಟಕ ರಾಜ್ಯದಲ್ಲಿ ಇವರೆಗೂ ಪತ್ತೆಯಾಗಿಲ್ಲ. ಜಿಲ್ಲೆಗೆ ಹಕ್ಕಿ ಜ್ವರ ಪ್ರವೇಶಿಸದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಶುಪಾಲನಾ ಇಲಾಖಾ ಉಪ ನಿರ್ದೇಶಕ ಡಾ.ನಂದಕುಮಾರ ಪೈ ಮಾತನಾಡಿ, ಜಿಲ್ಲೆಯಲ್ಲಿ 141 ಕೋಳಿ ಸಾಕಾಣಿಕೆ ಕೇಂದ್ರಗಳಿವೆ. ಪ್ರತಿಯೊಂದರಲ್ಲಿ 300 ರಿಂದ 500 ಮಾಂಸದ ಕೋಳಿಗಳನ್ನು ಸಾಕಲಾಗುತ್ತಿದೆ. ಪಕ್ಕದ ರಾಜ್ಯ ಹಾಗೂ ಜಿಲ್ಲೆಗಳಿಂದ ಮಾಂಸದ ಕೋಳಿಗಳನ್ನು ಮಾರಾಟಕ್ಕಾಗಿ ತರಿಸಲಾಗುತ್ತದೆ. ಆದ್ದರಿಂದ ಮಾಜಾಳಿ ಹಾಗೂ ಅನಮೋಡ ಚೆಕ್ ಪೋಸ್ಟ್ಗಳಿಗೆ ಇಲಾಖೆಯ ಸಿಬ್ಬಂದಿಯನ್ನು ಈಗಾಗಲೇ ನಿಯೋಜಿಸಲಾಗಿದೆ. ಕೋಳಿ ಅಥವಾ ಬೇರಾವುದೇ ಪಕ್ಷಿ ಸಾಗಾಟ ಮಾಡುವ ಎಲ್ಲ ವಾಹನಗಳ ತಪಾಸಣೆ ಮತ್ತು ಪ್ರಯಾಣದ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಪಕ್ಷಿ ಸತ್ತರೆ ಮಾಹಿತಿ ನೀಡಿ: ಪಶುವೈದ್ಯಾಧಿಕಾರಿ ಡಾ.ದೀಪಕ್ ಮಾತನಾಡಿ, ಮಾಂಸವನ್ನು 70 ಡಿಗ್ರಿ ಉಷ್ಣಾಂಶದಲ್ಲಿ ಬೇಯಿಸಿದಾಗ 3 ಸೆಕೆಂಡ್ಗಳಲ್ಲಿ ಹಕ್ಕಿ ಜ್ವರದ ವೈರಾಣು ನಿಷ್ಕ್ರಿಯವಾಗುತ್ತದೆ. ಸರಿಯಾಗಿ ಬೇಯಿಸಿದ ಕೋಳಿ ಮಾಂಸ ಹಾಗೂ ಮೊಟ್ಟೆ ತಿಂದರೆ ಹಕ್ಕಿ ಜ್ವರ ಬಾಧಿಸದು ಎಂದು ತಿಳಿಸಿದರು.
1 ಕಿಮೀ ವ್ಯಾಪ್ತಿಯಲ್ಲಿ ಅಸ್ವಾಭಾವಿಕವಾಗಿ ಕನಿಷ್ಠ 6 ಕ್ಕಿಂತ ಹೆಚ್ಚು ಪಕ್ಷಿಗಳು ಸತ್ತು ಬಿದ್ದಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೆ ಪಶುಪಾಲನಾ ಅಧಿಕಾರಿಗಳಿಗೆ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಕಂದಾಯ ಅಥವಾ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಕೋರಿದರು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಡಿಎಚ್ಒ ಡಾ. ಶರದ್ ನಾಯಕ, ಡಾ. ವಿನೋದ ಭೂತೆ ಸಭೆಯಲ್ಲಿದ್ದರು.