ಗಡಿಯಲ್ಲಿ ಕದನ ಕಾರ್ಮೋಡ

ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ತೀವ್ರ ಮುಖಭಂಗಕ್ಕೀಡಾಗಿರುವ ಪಾಕಿಸ್ತಾನ ಈ ಅವಮಾನಕ್ಕೆ ಕಾರಣವಾದ ಭಾರತದ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿದೆ. ಹಿಟ್ ಆಂಡ್ ರನ್ ಮಾದರಿಯಲ್ಲಿ ಭಾರತೀಯ ಯೋಧರ ಮೇಲೆ ಆಕ್ರಮಣ ನಡೆಸುವ ಹೊಸ ಯೋಜನೆ ರೂಪಿಸಿ ಗಡಿಪ್ರದೇಶಕ್ಕೆ ವಿಶೇಷ ಕಮಾಂಡೋ ಪಡೆ ನಿಯೋಜಿಸಿದೆ. ಈ ಕುತಂತ್ರವನ್ನು ಮೊದಲೇ ನಿರೀಕ್ಷಿಸಿದ್ದ ಭಾರತ ಕೂಡ ಪಾಕ್ ಸೊಕ್ಕಡಗಿಸಲು ಅಣಿಯಾಗಿದೆ. ಗಡಿಯಲ್ಲಿ ಎದುರಾಗುವ ಸಂಭಾವ್ಯ ಸವಾಲು ಎದುರಿಸಲು ಸನ್ನದ್ಧರಾಗಿರುವಂತೆ ಸೂಚಿಸಿ ಭಾರತೀಯ ವಾಯುಪಡೆ ಮುಖ್ಯಸ್ಥರು 12 ಸಾವಿರ ಅಧಿಕಾರಿಗಳಿಗೆ ಪತ್ರ ಮುಖೇನ ಸೂಚನೆ ನೀಡಿದ್ದಾರೆ. ಈ ದಿಢೀರ್ ಬೆಳವಣಿಗೆಗಳಿಂದಾಗಿ ಗಡಿಯಲ್ಲಿ ಕದನ ಆತಂಕ ಕವಿದಿದೆ.

ಪಾಕಿಸ್ತಾನ ಸೇನೆ ಜಮಾವಣೆ

ನವದೆಹಲಿ: ಕುಲಭೂಷಣ್ ಪ್ರಕರಣದಲ್ಲಾದ ಅವಮಾನದಿಂದಾಗಿ ಕೆಂಡಾಮಂಡಲವಾಗಿರುವ ಪಾಕಿಸ್ತಾನವು ಭಾರತದ ವಿರುದ್ಧ ಪ್ರತೀಕಾರ ಕೈಗೊಳ್ಳುವ ನಿಟ್ಟಿನಲ್ಲಿ ಗಡಿಯಲ್ಲಿ ಹಿಂಸಾಚಾರದ ಕಿಡಿ ಹೊತ್ತಿಸುವ ಅಜೆಂಡಾ ರೂಪಿಸಿದೆ. ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ಹೆಚ್ಚಿಸುವ ಉದ್ದೇಶದೊಂದಿಗೆ ಕಾಶ್ಮೀರದ ಗಡಿಭಾಗದಲ್ಲಿ ಹೆಚ್ಚಿನ ಮಟ್ಟದಲ್ಲಿ ಸೇನೆಯನ್ನು ಜಮಾವಣೆ ಮಾಡಿದೆ. ವಿಶೇಷ ಸೇವಾ ತಂಡ(ಎಸ್​ಎಸ್​ಜಿ) ಜತೆಗೆ ಗಡಿ ಕ್ರಿಯಾ ತಂಡವನ್ನು (ಬಿಎಟಿ) ಹೆಚ್ಚಿನ ಸಂಖ್ಯೆಯಲ್ಲಿ ಗಡಿ ಭಾಗಕ್ಕೆ ನಿಯೋಜಿಸಿರುವ ಪಾಕ್, ಎಲ್​ಒಸಿ ಮೂಲಕವೇ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ಹಾನಿ ಉಂಟುಮಾಡುವ ಕಾರ್ಯತಂತ್ರ ಹೆಣೆದಿದೆ. ಇದರ ಜತೆಯಲ್ಲೇ ಉಗ್ರರನ್ನು ಭಾರತದ ಒಳನುಗ್ಗಿಸಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆಗಳೂ ಇವೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ಉಗ್ರರ ಹತ್ಯೆ

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ನೌಗಾವ್​ಸೆಕ್ಟರ್​ನ ಗಡಿ ನಿಯಂತ್ರಣ ರೇಖೆ ಬಳಿ ಒಳನುಸುಳುತ್ತಿದ್ದ ಇಬ್ಬರು ಉಗ್ರರನ್ನು ಸೇನಾ ಪಡೆ ಶನಿವಾರ ರಾತ್ರಿ ಹತ್ಯೆಗೈದಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ಯೋಧರು ಕೂಡ ಹುತಾತ್ಮರಾಗಿದ್ದಾರೆ.

ಹಿಟ್ ಆಂಡ್ ರನ್

ಭಾರತೀಯ ಯೋಧರ ಕಣ್ಗಾವಲು ಕಡಿಮೆ ಇರುವ ಸ್ಥಳಗಳನ್ನು ಗುರಿಯಾಗಿಸಿಕೊಂಡು ಗಡಿ ಪ್ರವೇಶಿಸಿ ಯೋಧರನ್ನು ಹತ್ಯೆಗೈದು ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿ ಮಾಡಿ ಪರಾರಿಯಾಗುವುದು ಪಾಕ್ ಸೇನೆಯ ಮಾಸ್ಟರ್ ಪ್ಲ್ಯಾನ್. ಇತ್ತೀಚೆಗೆ ಕೃಷ್ಣಘಾಟಿಯ ಎಲ್​ಒಸಿ ಬಳಿ 200 ಮೀಟರ್ ಭಾರತದ ಗಡಿಯೊಳಕ್ಕೆ ನುಗ್ಗಿದ್ದ ಪಾಕ್ ಸೇನಾ ಸಿಬ್ಬಂದಿ ಭಾರತದ ಇಬ್ಬರು ಯೋಧರ ತಲೆ ಕಡಿದು ಪರಾರಿಯಾಗಿದ್ದರು. ಹಾಗೆಯೇ ಎಲ್​ಒಸಿ ಬಳಿ ಜನವಸತಿ ಪ್ರದೇಶದ ಮೇಲೆ ನಿರಂತರವಾಗಿ ಶೆಲ್ ದಾಳಿ ಕೂಡ ನಡೆಸಿದ್ದರು. ಇದೇ ಮಾದರಿ ತಂತ್ರ ಅನುಸರಿಸಲು ಪಾಕ್ ಅಣಿಯಾಗಿದೆ ಎಂದು ಗುಪ್ತಚರದಳಗಳು ಎಚ್ಚರಿಸಿವೆ.

ಯುದ್ಧಕ್ಕೆ ಭಾರತವೂ ಸನ್ನದ್ಧ

ನವದೆಹಲಿ: ಭಾರತೀಯ ಸೇನೆ ಮೇಲೆ ಆಕ್ರಮಣ ಹೆಚ್ಚಿಸಲು ಪಾಕ್ ರೂಪಿಸಿರುವ ಸಂಚು ಬಯಲಾದ ಬೆನ್ನಲ್ಲೇ ಸನ್ನದ್ಧ ಸ್ಥಿತಿಯಲ್ಲಿರುವಂತೆ ವಾಯುಪಡೆಯ 12 ಸಾವಿರ ಅಧಿಕಾರಿಗಳಿಗೆ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್​ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರು ವೈಯಕ್ತಿಕವಾಗಿ ಪತ್ರ ಬರೆದು ಎಚ್ಚರಿಸಿದ್ದಾರೆ. ವಾಯುಪಡೆ ಮುಖ್ಯಸ್ಥರೊಬ್ಬರು ಹೀಗೆ ವೈಯಕ್ತಿಕ ಪತ್ರ ಬರೆಯುವುದು ಇದೇ ಮೊದಲು ಎಂಬುದು ವಿಶೇಷ. ಕುಲಭೂಷಣ್ ಪ್ರಕರಣದ ಬಳಿಕ ಭಾರತ-ಪಾಕಿಸ್ತಾನ ಸಂಬಂಧ ಇನ್ನಷ್ಟು ಹದಗೆಟ್ಟಿದೆ. ಗಡಿಯಲ್ಲಿ ಪಾಕಿಸ್ತಾನ ಸೈನಿಕರು ಹಾಗೂ ಉಗ್ರರಿಂದ ದಾಳಿಗಳು ಹೆಚ್ಚಾಗುತ್ತಿವೆ.ಇತ್ತ ಚೀನಾ ಗಡಿಯಲ್ಲೂ ಪ್ರಕ್ಷುಬ್ಧ ವಾತಾವರಣ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಭಾವ್ಯ ದಾಳಿ ಎದುರಿಸಲು ಕಾರ್ಯಾಚರಣೆಗೆ ಸಿದ್ಧರಾಗುವಂತೆ ಧನೋವಾ ಸೂಚನೆ ನೀಡಿದ್ದಾರೆ. ‘ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಕಾರ್ಯಾಚರಣೆಗೆ ಸಿದ್ಧವಾಗಬೇಕು. ಶತ್ರುಗಳ ಸಾಮರ್ಥ್ಯ, ಶಕ್ತಿಗಳನ್ನು ಅರಿತು, ಅದಕ್ಕೆ ತಕ್ಕಂತೆ ನಮ್ಮ ಬಳಿಯಿರುವ ಶಸ್ತ್ರಾಸ್ತ್ರಗಳ ಮೂಲಕವೇ ತಂತ್ರಗಾರಿಗೆ ಹೆಣೆಯಬೇಕು’ ಎಂದು ಪತ್ರದಲ್ಲಿ ಹೇಳಿದ್ದಾರೆ.

ಪಾಕ್ ಬೆದರಿಕೆ ಕಾರಣವೇ?; ಧನೋವಾ ವೈಯಕ್ತಿಕ ಪತ್ರ ಸುಮಾರು 12,000 ಅಧಿಕಾರಿಗಳಿಗೆ ತಲುಪಿದೆ. ಐಎಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಮೂರು ತಿಂಗಳಲ್ಲೇ ಅವರು ಈ ಪತ್ರ ಬರೆದಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನಿರಂತರ ಸಾಂಪ್ರದಾಯಿಕ ಬೆದರಿಕೆ ಕಂಡುಬರುತ್ತಿದೆ. ನಮ್ಮ ಬಳಿ ಇರುವ ಸಲಕರಣೆಗಳೊಂದಿಗೆ, ಅಲ್ಪಾವಧಿಯ ಸೂಚನೆಯಲ್ಲಿ ಕಾರ್ಯಾಚರಣೆಗಳಿಗೆ ನಾವು ಸನ್ನದ್ಧರಾಗಿರುವ ಅಗತ್ಯವಿದೆ. ತರಬೇತಿಗಳ ಬಗ್ಗೆ ಗಮನ ಹರಿಸಬೇಕು ಎಂದು ಧನೋವಾ ಸೂಚಿಸಿದ್ದಾರೆ. ಪತ್ರದಲ್ಲಿ ಅವರು ಮುಖ್ಯವಾಗಿ ‘ಸಾಂಪ್ರದಾಯಿಕ ಬೆದರಿಕೆ’ ಎಂಬುದಾಗಿ ಉಲ್ಲೇಖಿಸಿದ್ದು, ಪಾಕಿಸ್ತಾನ ಒಡ್ಡುತ್ತಿರುವ ಬೆದರಿಕೆ/ಪ್ರಕ್ಷುಬ್ದತೆಗಳ ಕುರಿತ ಉಲ್ಲೇಖ ಎಂದು ಹೇಳಲಾಗಿದೆ.

ಯುದ್ಧ ವಿಮಾನ ಕೊರತೆ

ಭಾರತೀಯ ವಾಯುಪಡೆ ಬಳಿ ಪ್ರಸ್ತುತ ಸಾಕಷ್ಟು ಸಂಖ್ಯೆಯ ಯುದ್ಧವಿಮಾನಗಳಿಲ್ಲ. ರಫೇಲ್ ಯುದ್ಧ ವಿಮಾನಕ್ಕಾಗಿ ಒಪ್ಪಂದ ಏರ್ಪಟ್ಟಿದ್ದರೂ ವಿಮಾನ ಲಭ್ಯವಾಗಲು ಇನ್ನೂ ಹಲವು ವರ್ಷ ಕಾಯಬೇಕು. ವಾಯುಪಡೆ ಈಗಿರುವ ಯುದ್ಧ ವಿಮಾನಗಳು, ಶಸ್ತ್ರಾಸ್ತ್ರಗಳನ್ನೇ ಬಳಸಿಕೊಂಡು ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಧನೋವಾ ಸೂಚಿಸಿದ್ದಾರೆ. ವರದಿಗಳ ಪ್ರಕಾರ ಭಾರತೀಯ ವಾಯುಪಡೆಗೆ 42 ಯುದ್ಧ ವಿಮಾನಗಳ ಸ್ಕಾ್ವಡ್ರನ್ ಅಗತ್ಯವಿದೆ. ಆದರೆ ಪ್ರಸ್ತುತ 33 ಸ್ಕಾ್ವಡ್ರನ್​ಗಳು ಮಾತ್ರ ಇವೆ. ಫ್ರಾನ್ಸ್ ಜತೆ 36 ರಫೇಲ್ ಜೆಟ್​ಗಳಿಗಾಗಿ ಭಾರತ ಒಪ್ಪಂದ ಮಾಡಿಕೊಂಡಿದೆ. ಸ್ವದೇಶಿ ತೇಜಸ್ ಸಮರ ವಿಮಾನಗಳನ್ನು ಸೇರ್ಪಡೆ ಮಾಡಲು ನಿರ್ಧರಿಸಿದೆ. ಆದರೆ ಇವುಗಳ ಸಂಖ್ಯೆಯೂ ಕಡಿಮೆ ಇದೆ.

ಇದೇ ಮೊದಲು..

ವಾಯುಪಡೆಯ ಮುಖ್ಯಸ್ಥರು ಇಷ್ಟು ಅಧಿಕಾರಿಗಳಿಗೆ ವೈಯಕ್ತಿಕ ಪತ್ರ ಬರೆದಿರುವುದು ಇತಿಹಾಸದಲ್ಲಿ ಇದೇ ಪ್ರಥಮ. 1950ರಲ್ಲಿ ಆಗಿನ ಭೂಸೇನಾ ದಂಡನಾಯಕ, ಕನ್ನಡಿಗ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಮತ್ತು 1986ರಲ್ಲಿ ಆಗಿನ ಭೂಸೇನಾ ದಂಡನಾಯಕ ಜನರಲ್ ಕೆ. ಸುಂದರ್​ಜಿ ಸಿಬ್ಬಂದಿಗೆ ಇದೇ ರೀತಿ ವೈಯಕ್ತಿಕ ಪತ್ರ ಬರೆದಿದ್ದರು. ಧನೋವಾ ಸಹಿ ಹಾಕಿರುವ ಪತ್ರಗಳನ್ನು ಮಾರ್ಚ್ 30ರಂದು ವಾಯುಪಡೆ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಜಮ್ಮು-ಕಾಶ್ಮೀರದ ಘರ್ಷಣೆಯನ್ನು ವಿಶೇಷವಾಗಿ ಉಲ್ಲೇಖಿಸಿರುವ ಅವರು ವಾಯುಪಡೆಯಲ್ಲಿನ ಸ್ವಜನ ಪಕ್ಷಪಾತ, ಲೈಂಗಿಕ ಕಿರುಕುಳ ಆಪಾದನೆ ಪ್ರಕರಣಗಳನ್ನು ಪ್ರಸ್ತಾಪಿಸಿ ಇಂತಹ ಪ್ರವೃತ್ತಿ ಖಂಡನೀಯ ಎಂದಿದ್ದಾರೆ.

-ಏಜೆನ್ಸೀಸ್

Leave a Reply

Your email address will not be published. Required fields are marked *