ಅರಮನೆ ಅಂಗಳಕ್ಕೆ ಗಜಪಡೆ

ಮೈಸೂರು: ದಸರಾ ಗಜಪಡೆಯ ಮೊದಲ ತಂಡದ 6 ಆನೆಗಳನ್ನು ಸೆ.5ರಂದು ಸಂಜೆ 4.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅರಮನೆಗೆ ಸ್ವಾಗತಿಸಲಿದ್ದಾರೆ.

ಭಾನುವಾರ ವೀರನಹೊಸಹಳ್ಳಿಯಿಂದ ಮೈಸೂರಿಗೆ ಆಗಮಿಸಿದ 5 ಆನೆಗಳು ಮತ್ತು ಬಂಡೀಪುರದಿಂದ ನೇರವಾಗಿ ಬಂದು ಸೇರಿದ ಚೈತ್ರಾ ಆನೆ ಇಲವಾಲದ ಅಲೋಕದಿಂದ ಈಗಾಗಲೇ ಅಶೋಕಪುರಂ ಅರಣ್ಯ ಭವನಕ್ಕೆ ಬಂದಿವೆ. ಬುಧವಾರ 3.30ಕ್ಕೆ ಮೆರವಣಿಗೆ ಮೂಲಕ ಸಾಗಿ ಅರಮನೆ ಸೇರಲಿವೆ.

ಬಲ್ಲಾಳ್ ವೃತ್ತ, ರಾಮಸ್ವಾಮಿ ವೃತ್ತ ತಲುಪಿ ಚಾಮರಾಜ ಜೋಡಿ ರಸ್ತೆ ಮೂಲಕ ಅರಮನೆಯತ್ತ ಸಾಗಲಿವೆ. ಸಂಜೆ 4.  

30ಕ್ಕೆ ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಅರ್ಜುನ, ವರಲಕ್ಷ್ಮಿ, ಗೋಪಿ, ವಿಕ್ರಮ, ಧನಂಜಯ, ಚೈತ್ರಾ ಆನೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಶಾಸ್ತ್ರೋಕ್ತವಾಗಿ ಅರಮನೆಗೆ ಬರಮಾಡಿಕೊಳ್ಳಲಿದ್ದಾರೆ.

ಸ್ವಾಗತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಾಮದಾಸ್ ವಹಿಸಲಿದ್ದು, ಸಚಿವ ಸಾ.ರಾ.ಮಹೇಶ್, ಸಂಸದರಾದ ಪ್ರತಾಪಸಿಂಹ, ಆರ್.ಧ್ರುವನಾರಾಯಣ, ಶಾಸಕರಾದ ಎಚ್.ವಿಶ್ವನಾಥ್, ತನ್ವೀರ್​ಸೇಠ್, ಕೆ.ಮಹದೇವ್, ನಾಗೇಂದ್ರ, ಬಿ.ಹರ್ಷವರ್ಧನ್, ಯತೀಂದ್ರ, ಅಶ್ವಿನ್​ಕುಮಾರ್, ಅನಿಲ್ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಧರ್ಮಸೇನಾ, ಸಂದೇಶ್ ನಾಗರಾಜ್, ಕೆ.ವಿ.ನಾರಾಯಣಸ್ವಾಮಿ, ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನ್ ಭಾಗವಹಿಸಲಿದ್ದಾರೆ.

ಆರಮನೆಯ ಆವರಣದಲ್ಲಿ ಮೊದಲ ತಂಡದ ಆನೆಗಳ ಮಾವುತರು ಮತ್ತು ಕಾವಾಡಿಗರ ಕುಟುಂಬಕ್ಕಾಗಿ ಈಗಾಗಲೇ ಶೆಡ್​ಗಳು ನಿರ್ವಣವಾಗಿವೆ.