ಗಂಗಾಸ್ಮರಣೆಯ ಪುಣ್ಯಪರ್ವ

ಪ್ರತಿವರ್ಷ ಆಶ್ವಯುಜ ಮಾಸದ ಕೊನೆಗೆ ಹಾಗೂ ಕಾರ್ತಿಕಮಾಸದ ಆರಂಭದಲ್ಲಿ ದೀಪಾವಳಿ ಹಬ್ಬ ಬರುತ್ತದೆ. ಈ ಸಮಯದಲ್ಲಿ ಬೆಳೆ-ಪೈರುಗಳೆಲ್ಲ ಬೆಳೆದು ಎಲ್ಲೆಡೆ ಹಸಿರು ಕಂಗೊಳಿಸುತ್ತಿರುತ್ತದೆ. ದೀಪಾವಳಿಯು ನಾಲ್ಕು ದಿನಗಳ ಸಂಭ್ರಮ. ಮೊದಲ ದಿನ ಸಂಜೆ ನೀರು ತುಂಬುವ ಹಬ್ಬ, ಎರಡನೆಯ ದಿನ ನರಕ ಚತುರ್ದಶಿ, ಮೂರನೆಯ ದಿನ ಧನಲಕ್ಷ್ಮೀ ಪೂಜೆ ಮತ್ತು ನಾಲ್ಕನೆಯ ದಿನ ಬಲಿಪಾಡ್ಯಮಿ.

ಆಶ್ವಯುಜ ಮಾಸ ಕೃಷ್ಣಪಕ್ಷದ ತ್ರಯೋದಶಿಯ ಸಾಯಂಕಾಲ ಮನೆಯ ದಕ್ಷಿಣಭಾಗದಲ್ಲಿ ಜೋಡಿ ಎಳ್ಳಿನೆಣ್ಣೆ ದೀಪ ಹಚ್ಚಿ, ಆ ದಿಕ್ಕಿಗೆ ಅಭಿಮಾನಿಯಾದ ಯಮದೇವನಿಗೆ ಇಟ್ಟು ಈ ಕೆಳಗಿನ ಶ್ಲೋಕ ಹೇಳುತ್ತಾರೆ:

ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾ ಸಹ |

ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರಿಯತಾಂ ಮಮ ||

(ಸ್ಕಾಂದಪುರಾಣ)

(ಮೃತ್ಯುವಿನಿಂದಲೂ, ಪಾಶದಂಡಗಳಿಂದಲೂ ಕಾಲಪುರುಷನಿಂದಲೂ ಮತ್ತು ಶ್ಯಾಮಾದೇವಿಯಿಂದಲೂ ಕೂಡಿದ ಸೂರ್ಯಪುತ್ರ ಯಮಧರ್ಮರಾಜನು ತ್ರಯೋದಶಿಯ ಈ ದೀಪದಾನದಿಂದ ಸಂತುಷ್ಟನಾಗಲಿ.)

ಈ ಆಚರಣೆಯಿಂದ ಜಾತಕನ ಚತುರ್ಥ ಮತ್ತು ಪಂಚಮಾರಿಷ್ಟ (ಚಂದ್ರ ಮತ್ತು ಶನಿ ದೋಷ) ನಿವಾರಣೆಯಾಗಿ ಆಯುಷ್ಯ ವೃದ್ಧಿಸುತ್ತದೆ. ಬಳಿಕ ಮನೆಯಲ್ಲಿರುವ ಹಂಡೆ ಹಾಗೂ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ನೀರನ್ನು ತಂಬಿ ಇಡಲಾಗುತ್ತದೆ.

ಈ ಕಾರ್ಯಕ್ಕೆ ನೀರು ತುಂಬುವ ಹಬ್ಬ ಎಂದೂ ಕರೆಯುತ್ತಾರೆ. ಈ ದಿನವನ್ನು ‘ಧನ ಶ್ರಯೋದಶಿ’ ಎಂದು ಕೂಡ ಕರೆಯುವರು. ಅಂದು ನೀರಿನ ಹಂಡೆಗಳನ್ನು ತೊಳೆದು ಸ್ವಚ್ಛ ಮಾಡಿ ನೀರನ್ನು ತುಂಬಲಾಗುತ್ತದೆ. ಹಂಡೆಗೆ ಸುಣ್ಣದ ಪಟ್ಟೆಗಳನ್ನು ಬಳಿದು, ಹಿಂಡಲಕಾಯಿ (ಸೌತೆಯಂತೆಯೇ ಇರುವ ಕಹಿರುಚಿಯ ಕಾಯಿ) ಇರುವ ಬಳ್ಳಿಯನ್ನು ಕಟ್ಟಲಾಗುತ್ತದೆ. ಕಳಶಪೂಜೆ ಮಾಡಿದ ರೀತಿಯಲ್ಲಿಯೇ ಹಂಡೆಯನ್ನು ಕೂಡ ಪೂಜಿಸಲಾಗುತ್ತದೆ.

ಈ ಹಬ್ಬದ ಆಚರಣೆ ಇರುವುದು ರೈತವರ್ಗವು ತಮ್ಮ ಕೃಷಿ ಕೆಲಸದ ಕೊಯ್ಲು ಮುಗಿಸಿದ್ದು ನಂತರ. ಭತ್ತದ ಕೃಷಿ ಮಾಡುವ ಕೆಲಸಗಾರರಿಗೆ ಪೈರಿನ ಮೇಲಿನ ಸೂಕ್ಷ್ಮ ಅಂಶ ಮೈಗಂಟಿಕೊಂಡು ಚರ್ಮಕ್ಕೆ ನಾನಾ ರೀತಿಯ ತುರಿಕೆ, ನವೆ, ಕಜ್ಜಿ ಆಗಿರುತ್ತದೆ. ಅವುಗಳನ್ನು ಪ್ರತಿನಿತ್ಯ ನಿವಾರಿಸಿಕೊಳ್ಳಲು ಸಾಧ್ಯವಿಲ್ಲ. ಕೊಯ್ಲಿನ ನಂತರ ಅದನ್ನು ನಿವಾರಿಸಿಕೊಳ್ಳುವ ಒಂದು ಚಿಕಿತ್ಸಾ ಪದ್ಧತಿಯಾಗಿಯೂ ಈ ನೀರು ತುಂಬುವ ಹಬ್ಬವನ್ನು ಅರ್ಥೈಸಬಹುದು. ಹಂಡೆಯಲ್ಲಿ ತುಂಬಿ ಕಾಯಿಸುವ ನೀರಿನಲ್ಲಿ ಸೊರಕೆ, ಯಗಚಿ, ಅಳಲೆ, ಲೋಳೆರಸ ಇತ್ಯಾದಿಗಳನ್ನು ಬೆರೆಸಿ ಚೆನ್ನಾಗಿ ಕಾಯಿಸಿಡಲಾಗುತ್ತದೆ. ಮರುದಿನ ಮೈತುಂಬ ತೈಲ ಹಚ್ಚಿ ಇದರ ಸ್ನಾನದಿಂದ ಆ ಭತ್ತದ ಪೈರಿನ ಚುಚ್ಚುವಂತಹ ಅಂಶಗಳು ಇಲ್ಲವಾಗಿ ಮೈತುರಿಕೆ ಕಡಿಮೆಯಾಗುತ್ತದೆ.

ಮನೆಯಲ್ಲಿ ಪ್ರತಿಯೊಂದು ಪಾತ್ರೆಗಳಲ್ಲಿ ನೀರನ್ನು ತುಂಬಿ ಇಡುವುದು ಗಂಗಾದೇವಿಯನ್ನು ಮನೆಗೆ ಆಹ್ವಾನಿಸಿದಂತೆ. ಶುದ್ಧತೆಯ ಪ್ರತೀಕವಾದ ಗಂಗಾದೇವಿಯನ್ನು ಸಾಂಪ್ರದಾಯಿಕವಾಗಿ ಆಹ್ವಾನಿಸಲಾಗುತ್ತದೆ. ಮಹಾವಿಷ್ಣುವಿನ ಪಾದವನ್ನು ತೊಳೆಯುವುದರ ಮೂಲಕ ಗಂಗಾದೇವಿಯು ಶುದ್ಧತೆಯನ್ನು ಪಡೆದುಕೊಂಡಿದ್ದಾಳೆ ಎನ್ನುವ ಕಥೆಯಿದೆ. ಅದು ವಿಷ್ಣುವಿನ ಪಾದದಿಂದ ಗಂಗೆಯು ಜನಿಸಿದ ದಿನವೂ ಹೌದು. ಆ ಕಾರಣಕ್ಕೆ ಗಂಗಾಸ್ಮರಣೆ. ಮರುದಿನ ಬೆಳಗ್ಗೆ ಅಭ್ಯಂಗಸ್ನಾನಕ್ಕೆ ಮುಂಚಿನ ದಿನ ಹಂಡೆಯಲ್ಲಿ ತುಂಬಿದ ನೀರನ್ನೇ ಬಳಸಲಾಗುತ್ತದೆ.

| ವಸಂತ