ಗಂಗಾಧರೇಶ್ವರಸ್ವಾಮಿ ರಥೋತ್ಸವ ಸಂಪನ್ನ

ಶಿಡ್ಲಘಟ್ಟ: ಜಂಗಮಕೋಟೆಯ ಪುರಾಣ ಪ್ರಸಿದ್ಧ ಪ್ರಸನ್ನ ಗಂಗಾಧರೇಶ್ವರಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.

ಗಂಗಾಧರೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ತೇರಿನಲ್ಲಿರಿಸಿ ವಿವಿಧ ಹೂವುಗಳಿಂದ ಅಲಂಕರಿಸಲಾಯಿತು. ವಿಶೇಷ ಪೂಜೆ ಸಲ್ಲಿಸಿದ ಬಳಿಕ ಚಾಲನೆ ದೊರೆತಿದ್ದು, ಭಕ್ತರು ರಥ ಎಳೆದರು. ನೆರೆದಿದ್ದ ನೂರಾರು ಮಂದಿ ರಥಕ್ಕೆ ಬಾಳೆ ಹಣ್ಣು, ದವನ ಎಸೆದು ಇಷ್ಟಾರ್ಥ ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು. ತೇರು ಮುಖ್ಯರಸ್ತೆಯಲ್ಲಿ ಸಂಚರಿಸಿತು. ವೀರಗಾಸೆ, ಗಾರುಡಿ ಗೊಂಬೆ, ಕೀಲು ಕುದುರೆ, ಕರಡಿ ಮಜಲು ಹಾಗೂ ನಾಸಿಕ್ ಡೋಲ್ ವಿಶೇಷ ಆಕರ್ಷಣೆಯಾಗಿತ್ತು. ತಮಟೆ ವಾದನಕ್ಕೆ ಭಕ್ತಾದಿಗಳು ಹೆಜ್ಜೆ ಹಾಕಿದರು.

ಗಂಗಾಧರೇಶ್ವರಸ್ವಾಮಿ ಟ್ರಸ್ಟ್ ಸಂಚಾಲಕ ಮಂಜು ಮಾತನಾಡಿ, ಧಾರ್ವಿುಕ ಕಾರ್ಯಕ್ರಮಗಳಿಂದ ಜನರಿಗೆ ಶಾಂತಿ ದೊರೆಯಲು ಸಾಧ್ಯ. ಈ ವರ್ಷ ಉತ್ತಮ ಮಳೆ ಬೆಳೆಯಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೇವೆ ಎಂದರು.

ದೇವಾಲಯದಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಪೂಜೆ ಬಳಿಕ ಪ್ರಸಾದ ವಿತರಿಸಲಾಯಿತು. ಲೋಕಕಲ್ಯಾಣಾರ್ಥ ಹೋಮ ನಡೆಸಲಾಯಿತು. ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಭಕ್ತರಿಗೆ ಕೋಸಂಬರಿ, ಪಾನಕ, ಮಜ್ಜಿಗೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ತಾಪಂ ಸದಸ್ಯ ಜೆ.ಟಿ.ನಾಗರಾಜ, ಗ್ರಾಪಂ ಉಪಾಧ್ಯಕ್ಷ ನಾರಾಯಣಸ್ವಾಮಿ, ಸದಸ್ಯ ಜೆ.ಎಂ.ವೆಂಕಟೇಶ್, ಅಭಿವೃದ್ಧಿ ಅಧಿಕಾರಿ ವಜ್ರೇಶ್​ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *