ಖಾಸನೀಸ್​ಗಳ ಕೋಟ್ಯಂತರ ಆಸ್ತಿ ವಶ

ಧಾರವಾಡ:ಅತ್ಯಧಿಕ ಬಡ್ಡಿ ನೀಡುವ ಭರವಸೆ ನೀಡಿ ಸಾರ್ವಜನಿಕರಿಂದ ಕೋಟ್ಯಂತರ ರೂ. ಪಡೆದು ಪಂಗನಾಮ ಹಾಕಿ ಪರಾರಿಯಾಗಿದ್ದ ಕಲಘಟಗಿಯ ಖಾಸನೀಸ್ ಸಹೋದರರ ಆಸ್ತಿಯನ್ನು ಇದೀಗ ಸರ್ಕಾರ ವಶಪಡಿಸಿಕೊಂಡಿದೆ.

8 ಕೋಟಿ ರೂ. ಮಿಕ್ಕಿದ ಠೇವಣಿ, ಹಲವು ಕಡೆ ಇರುವ ಮನೆ, ನಿವೇಶನ, ಹೊಲ ಈಗ ಸರ್ಕಾರದ ವಶದಲ್ಲಿದೆ. ಅವನ್ನು ಮೂಲ ಠೇವಣಿದಾರರಿಗೆ ಹಂಚಲು ಸರ್ಕಾರ ಅಧಿಸೂಚನೆ ಹೊರಡಿಸಿದರೆ, ದೂರುದಾರರ ಹೋರಾಟಕ್ಕೆ ಒಂದು ಹಂತದ ಯಶಸ್ಸು ಸಿಕ್ಕಂತಾಗುತ್ತದೆ.

ಕಲಘಟಗಿ ತಾಲೂಕಿನ ಸತ್ಯಬೋಧ ಅಲಿಯಾಸ್ ಹರ್ಷ ಶ್ರೀನಿವಾಸ್ ಖಾಸನೀಸ್, ಆತನ ಸಹೋದರರಾದ ಸಂಜೀವ ಖಾಸನೀಸ್, ಶ್ರೀಕಾಂತ ಖಾಸನೀಸ್ ಹರ್ಷಾ ಎಂಟರ್​ಟೈನ್​ವೆುಂಟ್ ಸಂಸ್ಥೆ ಹೆಸರಿನಲ್ಲಿ ಜನರಿಂದ ಹಣ ಪಡೆದು ವಂಚಿಸಿದ್ದರು. ಠೇವಣಿದಾರರು ಕಲಘಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಜ್ಯ ಸರ್ಕಾರ ತನಿಖೆಯನ್ನು ಸಿಐಡಿಗೆ ವಹಿಸಿತ್ತು. ಹೊರರಾಜ್ಯಗಳಲ್ಲಿ ಓಡಾಡಿಕೊಂಡಿದ್ದ ವಂಚಕರನ್ನು ಸಿಐಡಿ ಅಧಿಕಾರಿಗಳು 2017ರ ಮೇ 28ರಂದು ಮಥುರಾದಲ್ಲಿ ಬಂಧಿಸಿ ಮೇ 30ರಂದು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಸಹೋದರರ ಚರ-ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಸಿಐಡಿ ಪೊಲೀಸರು, ಸಕ್ಷಮ ಪ್ರಾಧಿಕಾರಿಯಾಗಿರುವ ಧಾರವಾಡ ಉಪವಿಭಾಗಾಧಿಕಾರಿ (ಎಸಿ)ಯವರ ಸುಪರ್ದಿಗೆ ನೀಡಿದ್ದಾರೆ. ಎಸಿಯವರು, ಮೇ 22ರಂದು ಆಸ್ತಿ ವಿವರಗಳ ಮಾಹಿತಿಯನ್ನು ಸರ್ಕಾರದ ಅಧೀನ ಕಾರ್ಯದರ್ಶಿ (ಕಂದಾಯ ಇಲಾಖೆ)ಗೆ ಪತ್ರದ ಮೂಲಕ ಸಲ್ಲಿಸಿದ್ದಾರೆ. ಅಧಿಸೂಚನೆ ಹೊರಡಿಸಲು ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ. ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ನ್ಯಾಯಾಲಯದ ಆದೇಶದಂತೆ ಕ್ರಮಕ್ಕೆ ಮುಂದಾಗಲಿದ್ದಾರೆ.

ತಮ್ಮ ಹಣ ಮುಳುಗಿಹೋಯಿತು ಎಂಬ ಚಿಂತೆಯಲ್ಲಿದ್ದವರು ಈ ಎಲ್ಲ ಬೆಳವಣಿಗೆಗಳಿಂದ ಕೊಂಚ ನಿರಾಳರಾಗುವಂತಾಗಿದೆ. ಸರ್ಕಾರದ ಅಧಿಸೂಚನೆ ಬಳಿಕ ನ್ಯಾಯಾಲಯ ತಮ್ಮ ಪರ ನಿಲ್ಲುವ ಮೂಲಕ ಹಣ ಮರಳಿ ಬರಬಹುದು ಎಂಬ ಆಶಾಭಾವ ಮೋಸ ಹೋದವರಲ್ಲಿ ಮೂಡಿದೆ.

ಮುಟ್ಟುಗೋಲು ಹಾಕಿಕೊಂಡ ಚರಾಸ್ತಿ ವಿವರ

ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ಅವಧಿ ಮುಗಿದ ಬಳಿಕ ನಗದೀಕರಿಸಿ ತಮ್ಮ ಖಾತೆಗೆ ಜಮೆ ಮಾಡಿಕೊಂಡ 7,17,17,739 ರೂ., 1,03,55,589 ರೂ. (ಈ ಹಣವನ್ನು ಪ್ರತಿ 6 ತಿಂಗಳಿಗೊಮ್ಮೆ ನವೀಕರಣಗೊಳ್ಳುವಂತೆ ಎಸ್​ಬಿಐನಲ್ಲಿ ನಿಶ್ಚಿತ ಠೇವಣಿ ಇಡಲಾಗಿದೆ.), ತನಿಖೆ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ 93,900 ಹಾಗೂ ಹಳೇ ನೋಟುಗಳ ಮೊತ್ತ 3,01,000 ರೂ., 85 ಗ್ರಾಂ 17 ಮಿಲಿ ಚಿನ್ನಾಭರಣ, 7 ಕೆಜಿ 151 ಮಿಲಿ ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಜಿಲ್ಲಾ ಖಜಾನೆಯಲ್ಲಿ ಇಡಲಾಗಿದೆ. ತಲಾ ಒಂದು ಮಾರುತಿ, ಇನ್ನೋವಾ ಕಾರು ಹಾಗೂ ರಾಯಲ್ ಎನ್​ಫೀಲ್ಡ್ ಬೈಕ್ ವಶಪಡಿಸಿಕೊಂಡು ಧಾರವಾಡ ಉಪನಗರ ಠಾಣೆಯಲ್ಲಿ ಇಡಲಾಗಿದೆ.

ಸ್ಥಿರಾಸ್ತಿ ಮಾಹಿತಿ

ಗೀತಾ ಶ್ರೀನಿವಾಸ್ ಖಾಸನೀಸ್ ಹೆಸರಿನಲ್ಲಿ ಕಲಘಟಗಿ ಗ್ರಾಮದಲ್ಲಿ 20 ಗುಂಟೆ ಜಾಗ (ರಿಸನಂ 137/ಬ/1), ಮಡಕಿಹೊನ್ನಳ್ಳಿ ಗ್ರಾಮದಲ್ಲಿ 3 ಗುಂಟೆ 5 ಚ.ಮೀ. ವಿಸ್ತೀರ್ಣದ ಮನೆ, ಸಂಜೀವ ಖಾಸನೀಸ್ ಹೆಸರಿನಲ್ಲಿ 2 ಗುಂಟೆ 5 ಚ.ಮೀ. ವಿಸ್ತೀರ್ಣದ ಮನೆ, ಕಲಘಟಗಿಯಲ್ಲಿ ಶ್ರೀಕಾಂತ ಖಾಸನೀಸ್ ಹೆಸರಿನಲ್ಲಿ 3 ಎಕರೆ ಜಾಗ (137/ಬ/3), ಮಾಜಾಪುರದಲ್ಲಿ ಸಂಜೀವ ಖಾಸನೀಸ್ ಹೆಸರಿನಲ್ಲಿ 2 ಎಕರೆ 39 ಗುಂಟೆ ಜಾಗ (65/2), ಹಿರೇಹೊನ್ನಳ್ಳಿಯಲ್ಲಿ ಶ್ರೀಕಾಂತ ಖಾಸನೀಸ್ ಹೆಸರಿನಲ್ಲಿ 4ಎಕರೆ 37 ಗುಂಟೆ, ರಾಮನಾಳದಲ್ಲಿ ಮಾಧುರಿ ಶ್ರೀಕಾಂತ ಖಾಸನೀಸ್ ಹೆಸರಿನಲ್ಲಿ 1 ಎಕರೆ 20 ಗುಂಟೆ, ಹಿರೇಹೊನ್ನಳ್ಳಿಯಲ್ಲಿ ಸಂಜೀವ ಖಾಸನೀಸ್ ಪತ್ನಿ ಹೆಸರಿನಲ್ಲಿ 2 ಎಕರೆ 9 ಗುಂಟೆ ಹಾಗೂ ಸವಿತಾ ಶ್ರೀನಿವಾಸ್ ಖಾಸನೀಸ್ ಹೆಸರಿನಲ್ಲಿ 3 ಎಕರೆ 22 ಗುಂಟೆ ಜಾಗ ಇದೆ. ಇದಲ್ಲದೇ ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಭೈರಿದೇವರಕೊಪ್ಪದಲ್ಲಿ ಪೂರ್ಣಿಮಾ ಎಂಬುವವರ ಹೆಸರಿನಲ್ಲಿ 1 ಗುಂಟೆ 8 ಆಣೆ ನಿವೇಶನ ಹಾಗೂ ಬಳ್ಳಾರಿ ಶಹರದ ಕೆಎಚ್​ಬಿ ಕಾಲನಿಯಲ್ಲಿ ಸಂಜೀವ ಖಾಸನೀಸ್ ಹೆಸರಿನಲ್ಲಿ 640 ಚದರ ಅಡಿಯ ಮನೆ ಇದೆ.

ತನಿಖೆ ಪೂರ್ಣಗೊಂಡ ಕೆಲ ತಿಂಗಳಲ್ಲೇ ಸಿಐಡಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ಜತೆಗೆ ಆಸ್ತಿಯನ್ನು ಉಪವಿಭಾಗಾಧಿಕಾರಿ ಸುಪರ್ದಿಗೆ ನೀಡಿದ್ದಾರೆ. ಹಣ ಕಳೆದುಕೊಂಡವರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಬೇಕಿದೆ. ಅಧಿಸೂಚನೆ ಹೊರಡಿಸಿದ ಬಳಿಕ ಹಣ ಕಳೆದುಕೊಂಡ ದಾಖಲೆ ಇದ್ದವರಿಗೆ ಹಣ ಮರಳಿಸಬೇಕು.

| ಸಿ.ಎಂ. ನಿಂಬಣ್ಣವರ

ಕಲಘಟಗಿ ಶಾಸಕ

ಸಿಐಡಿ ಅಧಿಕಾರಿಗಳು ಖಾಸನೀಸ್ ಸಹೋದರರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನಮ್ಮ ಸುಪರ್ದಿಗೆ ನೀಡಿದ್ದಾರೆ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ. ಜತೆಗೆ ಅಧಿಸೂಚನೆ ಹೊರಡಿಸಲು ಸಹ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ವಶಪಡಿಸಿಕೊಂಡ ಹಣವನ್ನು ಬ್ಯಾಂಕ್​ನಲ್ಲಿ ಇಡಲಾಗಿದೆ. ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ನ್ಯಾಯಾಲಯದ ಗಮನಕ್ಕೆ ತರಲಾಗುವುದು. ಮುಂದೆ ನ್ಯಾಯಾಲಯದ ಆದೇಶದಂತೆ ಕ್ರಮಕೈಗೊಳ್ಳಲಾಗುವುದು.

| ಮಹ್ಮದ್ ಜುಬೇರ ಉಪವಿಭಾಗಾಧಿಕಾರಿ

ಒಳಗೇ ಇದ್ದಾರೆ

ಬಂಧಿತ ಖಾಸನೀಸ್ ಸಹೋದರರು ಇನ್ನೂ ನ್ಯಾಯಾಂಗ ಬಂಧನದಲ್ಲೇ ಇದ್ದಾರೆ. ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳು ವಜಾ ಆಗಿವೆ.

Leave a Reply

Your email address will not be published. Required fields are marked *