ಬೆಳಗಾವಿ: ವಿವಾದಿತ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಬಂದ್ ಮಾಡುವ ಕುರಿತು ನಡೆಸುತ್ತಿರುವ ಅಹೋರಾತ್ರಿ ಧರಣಿಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು, ಪ್ರಕರಣದ ತನಿಖೆಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಉಪನಿರ್ದೇಶಕರು ಹಾಗೂ ಬೆಳಗಾವಿ ಉಪವಿಭಾಗೀಯ ಅಧಿಕಾರಿಗಳನ್ನು ನೇಮಿಸಿದ್ದು, 15 ದಿನದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಯ ಈ ಆದೇಶದಿಂದ ಅಸಮಾಧಾನಗೊಂಡಿರುವ ಭಾರತೀಯ ಕೃಷಿ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ, ವಿವಾದಿತ ಖಾಸಗಿ ತರಕಾರಿ ಮಾರುಕಟ್ಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪಾದಿತ ಅಧಿಕಾರಿಗಳನ್ನು ಹೊರತು ಪಡಿಸಿ ಜಂಟಿ ಸಮಿತಿಯಿಂದ ತನಿಖೆ ನಡೆಸಿ. ಖಾಸಗಿ ಮಾರುಕಟ್ಟೆ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಧರಣಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ. ಜಿಲ್ಲಾಡಳಿತ ರಚಿಸಿರುವ ಸಮಿತಿಯಿಂದ ಪಾರದರ್ಶಕವಾಗಿ ತನಿಖೆ ನಡೆಯುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣವಾಗಿರುವ ಖಾಸಗಿ ಮಾರುಕಟ್ಟೆ ಲೈಸನ್ಸ್ ರದ್ದತಿಗಾಗಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಶುಕ್ರವಾರವೂ ಮುಂದುವರಿದಿದೆ.
ಈಗಾಗಲೇ ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಗಳನ್ನು ದೂರವಿಡಬೇಕು. ಮಹಾನಗರ ಪಾಲಿಕೆ, ಹೆಸ್ಕಾಂ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿರುವ ವರ್ತಕರ ಸಂಘ, ಭಾರತೀಯ ಕೃಷಿಕ ಸಮಾಜದ ನೇತೃತ್ವದಲ್ಲಿ ತಂಡ ರಚನೆ ಮಾಡಿ ಖಾಸಗಿ ಮಾರುಕಟ್ಟೆ ವಿರುದ್ಧ ತನಿಖೆ ನಡೆಸಬೇಕು. ತನಿಖಾ ಹಂತದಲ್ಲಿರುವಾಗ ಖಾಸಗಿ ಮಾರುಕಟ್ಟೆಯನ್ನು ಬಂದ್ ಮಾಡಿಯೇ ತನಿಖೆ ನಡೆಸಬೇಕು. ಅಲ್ಲಿಯವರೆಗೆ ಅಹೋರಾತ್ರಿ ಧರಣಿ ಮುಂದುವರಿಸುವುದಾಗಿ ತಿಳಿಸಿದರು. ಮಾಜಿ ಮೇಯರ್ ಶಿವಾಜಿ ಸುಂಟ್ಕರ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ವರ್ತಕರಾದ, ಸತೀಶ ಪಾಟೀಲ, ಬಸನಗೌಡಾ ಪಾಟೀಲ, ಜಿ.ಎಂ.ಶಹಾಪುರಕರ, ಆಸೀಫ್ ಕಲಮನಿ, ರಾಜು ತಹಸೀಲ್ದಾರ್, ಎಸ್.ಬಿ.ಲಂಗೋಟಿ, ಎಸ್.ಸಿ.ಪಾಟೀಲ ಇತರರು ಇದ್ದರು.