ಖಾಸಗಿ ಬಸ್ ಬೆಂಕಿಗಾಹುತಿ

ಹಾವೇರಿ: ಶಾರ್ಟ್ ಸರ್ಕ್ಯೂಟ್​ನಿಂದಾಗಿ ಖಾಸಗಿ ಬಸ್​ವೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ನಗರದ ಮುರುಘರಾಜೇಂದ್ರ ಮಠದ ಬಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

ಬಸ್​ನಲ್ಲಿದ್ದ ಕ್ಲೀನರ್ ರಾಜು ಬಸ್​ಗೆ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿ ಹೊರ ಬಂದಿದ್ದಾನೆ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ ಪ್ರತಿದಿನ ರಾತ್ರಿ ಹಾವೇರಿಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿತ್ತು. ಎಂದಿನಂತೆ ಶುಕ್ರವಾರ ಬೆಳಗ್ಗೆ ಮಂಗಳೂರಿನಿಂದ ಹಾವೇರಿಗೆ ಬಂದಿದ್ದ ಬಸ್ ಅನ್ನು ಚಾಲಕ ಹಾಗೂ ಕ್ಲೀನರ್ ಮುರುಘರಾಜೇಂದ್ರ ಮಠದ ಬಳಿ ನಿಲ್ಲಿಸಿದ್ದರು.

ಮಧ್ಯಾಹ್ನದ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್​ನಿಂದ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಅದು ಇಡೀ ಬಸ್​ನ್ನೇ ವ್ಯಾಪಿಸಿದೆ ಎನ್ನಲಾಗುತ್ತಿದೆ. ಬಸ್​ಗೆ ಬೆಂಕಿ ತಗುಲಿದ ವಿಷಯ ತಿಳಿದು ಅಗ್ನಿಶಾಮಕ ದಳದವರು ಕೂಡಲೆ ಸ್ಥಳಕ್ಕೆ ಆಗಮಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಬೆಂಕಿ ತಗುಲಿದ ಬಸ್​ನ ಬಳಿಯಲ್ಲಿಯೇ ಪೆಟ್ರೋಲ್ ಬಂಕ್ ಇದ್ದರಿಂದ ಕೆಲಕಾಲ ಆತಂಕದ ವಾತಾವರಣವೂ ನಿರ್ವಣವಾಗಿತ್ತು. ಈ ಕುರಿತು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.