ಖಾಸಗಿ ಕಂಪನಿಗೆ ಭೂಮಿ ಹಸ್ತಾಂತರ ವಿಳಂಬ: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಜರಿಗೆ ಹೈಕೋರ್ಟ್ ತಾಕೀತು

ಬೆಂಗಳೂರು: ಖಾಸಗಿ ಕಂಪನಿಯೊಂದಕ್ಕೆ ಮಂಜೂರಾಗಿದ್ದ ಜಮೀನಿನಲ್ಲಿರುವ ಮರಗಳನ್ನು ತೆರವುಗೊಳಿಸಿ ಹಸ್ತಾಂತರಿಸಲು 6 ವರ್ಷ ವಿಳಂಬ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಬೆಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಹೈಕೋರ್ಟ್ ತಾಕೀತು ಮಾಡಿದೆ.

ಕೃಷಿ ಪ್ರಾಜೆಕ್ಟ್ಸ್ ಪ್ರೖೆವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಪೀಠ, ಪ್ರಕರಣದ ಸಂಬಂಧ ವಿವರಣೆ ನೀಡಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೂ.26ರಂದು ಖುದ್ದು ಹಾಜರಿರುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಕಾಲಾವಕಾಶ ನೀಡಿದರೆ ಅರ್ಜಿದಾರರ ಜಮೀನಿನಲ್ಲಿರುವ ಮರಗಳನ್ನು ತೆರವುಗೊಳಿಸಲಾಗುವುದು ಎಂದು ವಿಚಾರಣೆ ವೇಳೆ ಸರ್ಕಾರಿ ವಕೀಲ ವಿಜಯಕುಮಾರ್ ಪಾಟೀಲ್ ತಿಳಿಸಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೀಠ, 2013ರಲ್ಲಿ ಅರ್ಜಿದಾರರಿಗೆ ಜಮೀನು ಮಂಜೂರು ಮಾಡಲಾಗಿದೆ. ಅದರಲ್ಲಿರುವ ಮರಗಳನ್ನು ತೆರವುಗೊಳಿಸಲು ಅರ್ಜಿದಾರರು ಮಾಡಿದ್ದ ಮನವಿ ಪರಿಗಣಿಸುವಂತೆ 2015ರಲ್ಲಿಯೇ ಹೈಕೋರ್ಟ್ ನಿರ್ದೇಶಿಸಿದೆ. ಮತ್ತೆ ಕಾಲಾವಕಾಶ ಕೋರಿದರೆ ಹೇಗೆ ಎಂದು ಪ್ರಶ್ನಿಸಿತು. 90 ದಿನಗಳಲ್ಲಿ ಜಮೀನಿನಲ್ಲಿರುವ ಮರಗಳು ಕತ್ತರಿಸಿ ತೆರವುಗೊಳಿಸುವುದಾಗಿ ಮುಖ್ಯ ಸಂರಕ್ಷಣಾಧಿಕಾರಿ ಮುಚ್ಚಳಿಕೆ ನೀಡಿದ್ದರು. ಕಾಲಾವಕಾಶ ಮುಗಿದಿದ್ದರೂ ತೆರವು ಮಾಡಿಲ್ಲ. ಅವರ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಬಾರದು ಎಂದು ನ್ಯಾಯಪೀಠ ಮೌಖಿಕವಾಗಿ ಪ್ರಶ್ನಿಸಿತು.

ಪ್ರಕರಣವೇನು?

ಕೃಷಿ ಪ್ರಾಜೆಕ್ಟ್ ಪ್ರೖೆವೇಟ್ ಲಿಮಿಟೆಡ್ ಹೆಸರುಘಟ್ಟದ ಸಾದೇನಹಳ್ಳಿ ಸರ್ವೆ ನಂ.30ರಲ್ಲಿನ 8 ಎಕರೆ ಜಮೀನನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿತ್ತು. ಜಮೀನಿನಲ್ಲಿದ್ದ ಮರಗಳನ್ನು ಕತ್ತರಿಸಿ ತೆರವುಗೊಳಿಸಲು 2013ರ ಜ.18ರಂದು ಕಂಪನಿ ಅನುಮತಿ ಕೋರಿತ್ತು. ಈ ಮಧ್ಯೆ 2015ರ ಡಿ.16ರಂದು ಉಪ ಅರಣ್ಯಾಧಿಕಾರಿ ಜಮೀನಿನಲ್ಲಿರುವ ಮರಗಳನ್ನ ಕತ್ತರಿಸಿ ತೆರವುಗೊಳಿಸಲು ಅಧೀನ ಸಿಬ್ಬಂದಿಗೆ ಸೂಚಿಸಿದ್ದರು. ಆದರೆ, ಈವರೆಗೂ ತೆರವುಗೊಳಿಸದ ಕಾರಣಕ್ಕೆ ಕಂಪನಿ ಹೈಕೋರ್ಟ್ ಮೆಟ್ಟಿಲೇರಿದೆ.

Leave a Reply

Your email address will not be published. Required fields are marked *