ಖಾಸಗಿ ಆಸ್ಪತ್ರೆಗಳ ನಿಯಂತ್ರಣವೋ, ಮರಣಶಾಸನವೋ?

| ಡಾ. ಮಂಜುನಾಥ್​ ಬಿ.ಎಚ್​

ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆಗೆ ತಿದ್ದುಪಡಿ ಮಾಡಲು ಇದೀಗ ರಾಜ್ಯ ಸರ್ಕಾರ ಮುಂದಾಗಿದೆ. ಈ ಕಾಯ್ದೆ ಯಥಾವತ್ತಾಗಿ ಜಾರಿಗೆಬಂದರೆ ಅದರಿಂದ ರೋಗಿಗಳಿಗೇ ಹೆಚ್ಚಿನ ತೊಂದರೆಯಾಗಲಿದೆ. ಇನ್ನೊಂದೆಡೆ, ವೈದ್ಯರಿಗೂ ಸಾಕಷ್ಟು ಸಮಸ್ಯೆಗಳಾಗಲಿವೆ.

 

ಕರ್ನಾಟಕ ರಾಜ್ಯ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದೆ. ಪ್ರಪಂಚದಾದ್ಯಂತ ಹೆಸರು ಮಾಡಿರುವ ಅವೆಷ್ಟೋ ಉತ್ಕೃಷ್ಟ ಆಸ್ಪತ್ರೆಗಳು ನಮ್ಮ ರಾಜ್ಯದಲ್ಲಿವೆ. ರಾಜ್ಯದ ಶೇ.80 ಜನತೆಗೆ ಆರೋಗ್ಯ ಸೇವೆ ಒದಗಿಸುತ್ತಿರುವುದು ಖಾಸಗಿ ಆಸ್ಪತ್ರೆಗಳು. ಇದೀಗ ರಾಜ್ಯ ಸರ್ಕಾರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ (ಕೆಪಿಎಂಇ) ಕಾಯ್ದೆಗೆ ತಿದ್ದುಪಡಿ ಮಾಡಲು ಮುಂದಾಗಿದೆ. ಈ ಮೂಲಕ ಖಾಸಗಿ ಆಸ್ಪತ್ರೆಗಳ ಸೇವೆ, ದರ, ಇಷ್ಟೇ ಅಲ್ಲದೆ ವೈದ್ಯರನ್ನೂ ನಿಯಂತ್ರಿಸುವ ಪ್ರಯತ್ನಕ್ಕೆ ಮುಂದಾಗಿದೆ. ಈ ನಡೆ ರಾಜ್ಯದ ಆರೋಗ್ಯ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಅಪಾಯವೂ ಇಲ್ಲದಿಲ್ಲ. ಮೇಲ್ನೋಟಕ್ಕೆ ಖಾಸಗಿ ಆಸ್ಪತ್ರೆಗಳು ಧನಸಂಗ್ರಹ ಮಾಡುವುದನ್ನು, ರೋಗಿಗಳಿಗೆ ತೊಂದರೆಯಾಗುವುದನ್ನು ತಡೆಯುವ ಉದ್ದೇಶ ಈ ಕಾಯ್ದೆಯದ್ದು ಎಂಬಂತೆ ಬಿಂಬಿಸಿದರೂ, ವಾಸ್ತವಾಂಶಗಳು ಬೇರೆಯೇ ಇವೆಯೆಂಬುದು ಸ್ಪಷ್ಟ.

ಈ ತಿದ್ದುಪಡಿ ಕಾಯ್ದೆ ಪ್ರಕಾರ, ಖಾಸಗಿ ಆಸ್ಪತ್ರೆಗಳ ದರವನ್ನು ಸರ್ಕಾರ ನಿಗದಿಪಡಿಸಲಿದೆ. ಅದರಂತೆ ಚಿಕಿತ್ಸಾ ದರವನ್ನು ಖಾಸಗಿ ಆಸ್ಪತ್ರೆಗಳು ಪಡೆಯಬೇಕು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಇದರೊಂದಿಗೆ, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಗೆ ಪ್ರಾಣಾಪಾಯವಾದರೆ ಅದಕ್ಕೆ ಚಿಕಿತ್ಸೆ ನೀಡಿದ ವೈದ್ಯರೇ ನೇರ ಹೊಣೆ ಎಂಬ ತೂಗುಕತ್ತಿಯ ಅಂಶವನ್ನೂ ಈ ಉದ್ದೇಶಿತ ಕಾಯ್ದೆ ಹೊಂದಿದೆ.

ಸರ್ಕಾರ ನಿಗದಿಪಡಿಸಿದ ವೈದ್ಯಕೀಯ ವೆಚ್ಚವನ್ನಷ್ಟೇ ಆಸ್ಪತ್ರೆಗಳು, ವೈದ್ಯರು ಪಡೆದುಕೊಳ್ಳಬೇಕು. ಅದಕ್ಕಿಂತ ಹೆಚ್ಚು ತೆಗೆದುಕೊಂಡರೆ 25,000 ರೂಗಳ ದಂಡ, ಜೈಲು ಶಿಕ್ಷೆ.

ಖಾಸಗಿಯವರ ನಿಯಂತ್ರಣಕ್ಕೆ ಹೊರಟಿರುವ ಸರ್ಕಾರ ತನ್ನದೇ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಯ ಬಗ್ಗೆ ಎಳ್ಳಷ್ಟಾದರೂ ಯೋಚಿಸಿದ್ದಿದೆಯೇ? ಸರ್ಕಾರಿ ಆಸ್ಪತ್ರೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನೂ ಒದಗಿಸಿಲ್ಲ. ಒಂದೊಮ್ಮೆ ರೋಗಿಯೊಬ್ಬನ ಪರಿಸ್ಥಿತಿ ಗಂಭೀರವಾಗಿದ್ದರೆ ಆತ ಖಾಸಗಿ ಆಸ್ಪತ್ರೆಗೇ ಹೋಗಬೇಕಷ್ಟೆ.

ಒಂದು ನೂರು ಹಾಸಿಗೆಗಳ ಸುಸಜ್ಜಿತ ಖಾಸಗಿ ಆಸ್ಪತ್ರೆಯೊಂದರ ನಿರ್ವಹಣೆಗೆ ತಿಂಗಳೊಂದಕ್ಕೆ 70-80 ಲಕ್ಷ ರೂಗಳ ಅವಶ್ಯಕತೆ ಇರುತ್ತದೆ. ಖಾಸಗಿ ಆಸ್ಪತ್ರೆಯೊಂದು ಅತ್ಯುತ್ತಮ ಗುಣಮಟ್ಟದ್ದು ಎನಿಸಬೇಕಾದರೆ ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ (ಘಅಆಏ) ನಿಂದ ಉತ್ತಮ ಶ್ರೇಣಿ ಹೊಂದಬೇಕಾಗಿರುತ್ತದೆ. ಆಸ್ಪತ್ರೆಯ ಹಾಸಿಗೆಗಳ ನಡುವಿನ ಅಂತರ, ಆಸ್ಪತ್ರೆಯ ಸುತ್ತಲೂ ಅಗ್ನಿಶಾಮಕ ವಾಹನ ಸಂಚರಿಸುವಷ್ಟು ಜಾಗ, ತಜ್ಞ ವೈದ್ಯರು ಮುಂತಾದ ಅಂಶಗಳನ್ನು ಗಮನಿಸಿ ಶ್ರೇಣಿ ನೀಡಲಾಗುತ್ತದೆ. ಇಂತಹ ವ್ಯವಸ್ಥೆಗಳನ್ನು ಹೊಂದಿರುವ ಆಸ್ಪತ್ರೆಗಳು ಸಹಜವಾಗಿಯೇ ತಮ್ಮ ಗುಣಮಟ್ಟಕ್ಕೆ ತಕ್ಕಂತೆ ಬೆಲೆ ನಿಗದಿಪಡಿಸುತ್ತವೆ. ಇದಕ್ಕೆ ಪೈಪೋಟಿ ಕೊಡಬೇಕಾದರೆ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಸಮಗ್ರವಾಗಿ ಹೆಚ್ಚಿಸಬೇಕೇ ಹೊರತು, ಖಾಸಗಿಯವರಿಗೆ ಮೂಗುದಾರ ಹಾಕಲು ಮುಂದಾಗುವುದಲ್ಲ. ದೇಶದ ಶೇ.80 ಕ್ಕೂ ಅಧಿಕ ಜನರು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಿದ್ದಾರೆಯೇ ಹೊರತು ಸರ್ಕಾರಿ ಆಸ್ಪತ್ರೆಗಳು ಅವರನ್ನು ತಲುಪುತ್ತಲೇ ಇಲ್ಲ!

ಮೊದಲೆಲ್ಲಾ ವೈದ್ಯರು ದೇವರ ಸಮಾನ ಎಂಬ ಭಾವನೆ ಜನರಲ್ಲಿತ್ತು. ವೈದ್ಯವೃತ್ತಿಗೆ ಅಪಾರ ಗೌರವವಿತ್ತು. ರೋಗಿ ಹಾಗೂ ವೈದ್ಯರ ನಡುವಿನ ನಂಬಿಕೆ ಅದೆಷ್ಟೋ ಕಾಯಿಲೆಗಳನ್ನು ಗುಣಪಡಿಸುತ್ತಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ವೈದ್ಯ ಹಾಗೂ ರೋಗಿಗಳ ಸಂಬಂಧ ಹೇಗಿದೆ? ವೈದ್ಯರು ಇಂದಿಗೂ ಅದೇ ದಿಟ್ಟ ಮನಸ್ಥಿತಿಯಲ್ಲಿ ಚಿಕಿತ್ಸೆ ನಡೆಸುತ್ತಿದ್ದಾರೆಯೇ? ಮುಂತಾದ ಜಿಜ್ಞಾಸೆಗಳೂ ಇಲ್ಲದಿಲ್ಲ. ಅದೇ ರೀತಿ, ಈಗ ವೈದ್ಯಕೀಯ ಕ್ಷೇತ್ರವೂ ಒಂದು ಉದ್ದಿಮೆಯಂತಾಗಿದೆ ಎಂಬ ಆಪಾದನೆಯೂ ಇದೆ. ಇದೇನೇ ಇದ್ದರೂ, ರೋಗಿಗಳ ಶುಶ್ರೂಷೆಗೇ ಹೆಚ್ಚಿನ ವೈದ್ಯರು ಪ್ರಥಮ ಆದ್ಯತೆ ನೀಡುತ್ತಾರೆ ಎಂಬುದನ್ನೂ ಮರೆಯಬಾರದು.

ಇತ್ತೀಚೆಗೆ ಆಗೀಗ ವೈದ್ಯರ ಮೇಲೆ ಹಲ್ಲೆ ಘಟನೆಗಳು ವರದಿಯಾಗುತ್ತಿರುತ್ತವೆ. ವೈದ್ಯಕೀಯ ಕ್ಷೇತ್ರ ಗ್ರಾಹಕ ಹಕ್ಕುಗಳ ವ್ಯಾಪ್ತಿಗೆ ಬಂದಿರುವುದರಿಂದ, ವೈದ್ಯ-ರೋಗಿಯ ಸಂಬಂಧ ವ್ಯಾಪಾರಿ ಹಾಗೂ ಗ್ರಾಹಕನಂತಾಯಿತೇ ಎಂಬ ದುಃಖವೂ ಕಾಡುತ್ತದೆ. ಒಂದು ಉದಾಹರಣೆ ನೀಡುತ್ತೇನೆ. ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯೊಂದಕ್ಕೆ ರೋಗಿಯೊಬ್ಬರು ಚರ್ಮರೋಗದ ಚಿಕಿತ್ಸೆಗಾಗಿ ತೆರಳಿದ್ದರು. ರೋಗಿಯನ್ನು ನೋಡುತ್ತಿದ್ದಂತೆಯೇ ಇದು ಇಂತಹದ್ದೇ ಸಮಸ್ಯೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕಾಗಿ ಸಮಸ್ಯೆಯನ್ನು ಗಮನಿಸಿ, ಅದು ಯಾವ ಕಾಯಿಲೆಯನ್ನು ಹೋಲುತ್ತದೆ ಎಂದು ತಿಳಿದು ಚಿಕಿತ್ಸೆ ಆರಂಭಿಸುವುದು ವೈದ್ಯಕೀಯದ ರೀತಿ. ಅದರಂತೆಯೇ ಆ ರೋಗಿಗೂ ವೈದ್ಯರು ಚಿಕಿತ್ಸೆ ಆರಂಭಿಸಿದರು. ಸ್ಟಿರಾಯ್ಡ್ ಔಷಧ ಕೊಟ್ಟು, ಸಮಸ್ಯೆ ಕಡಿಮೆಯಾಗುತ್ತದೆಯೇ ಎಂದು ನೋಡೋಣವೆಂದುಕೊಂಡರು. ದುರದೃಷ್ಟ, ರೋಗಿಗೆ ಆ ಔಷಧ ಹೊಂದಾಣಿಕೆಯಾಗದೆ ಒಂದು ಬಗೆಯ ಅಲರ್ಜಿ ಆರಂಭವಾಯಿತು. ವೈದ್ಯರು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ರೋಗಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ಗ್ರಾಹಕ ಹಕ್ಕುಗಳ ನ್ಯಾಯಾಲಯ ರೋಗಿಯ ಕುಟುಂಬಕ್ಕೆ ಪರಿಹಾರವಾಗಿ 12 ಕೋಟಿ ರೂ ನೀಡುವಂತೆ ವೈದ್ಯರಿಗೆ ಆದೇಶಿಸಿತು. ಓರ್ವ ಸಾಧಾರಣ ವೈದ್ಯ 12 ಕೋಟಿ ರೂಗಳನ್ನು ಎಲ್ಲಿಂದ ತಾನೇ ತರಬಲ್ಲ?

ನಿಯಮದನ್ವಯ ಅವರು ಚಿಕಿತ್ಸೆ ನೀಡುವ ಮುನ್ನ ರೋಗಿಯ ವಿವರಗಳು, ಆಸ್ಪತ್ರೆಗೆ ದಾಖಲಾಗುವಾಗ ರೋಗಿಯ ಆರೋಗ್ಯ ಸ್ಥಿತಿ, ಶಸ್ತ್ರಚಿಕಿತ್ಸೆಗೆ ಸ್ಪಂದಿಸಬಹುದಾದ ಸಾಧ್ಯತೆಗಳನ್ನೆಲ್ಲಾ ದಾಖಲಿಸಿ ಚಿಕಿತ್ಸೆ ಮುಂದುವರಿಸಬೇಕು. ಆದರೆ ಇವೆಲ್ಲಾ ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ಮೊದಲು ಚಿಕಿತ್ಸೆ ಆರಂಭಿಸಿ ಜೀವ ಉಳಿಸೋಣ, ಆಮೇಲೆ ದಾಖಲೆ ಮಾಡಿಕೊಂಡರಾಯಿತು ಎಂದೇ ವೈದ್ಯರು ಮಾನವೀಯ ನೆಲೆಯಲ್ಲಿ ಆಲೋಚಿಸುತ್ತಾರೆ. ಹೀಗಿರುವಾಗ, ಕಾಯ್ದೆ ಹೆಸರಲ್ಲಿ ರೋಗಿಗಾಗುವ ಎಲ್ಲಾ ತೊಂದರೆಗಳಿಗೂ ವೈದ್ಯರನ್ನೇ ಹೊಣೆಯಾಗಿಸಹೊರಟರೆ ತೀರ ತುರ್ತು ಪರಿಸ್ಥಿತಿ ಎಂದು ಆಸ್ಪತ್ರೆಗೆ ದಾಖಲಿಸಿದಾಗ, ಶಸ್ತ್ರಚಿಕಿತ್ಸೆ ನಡೆಸಿ, ರೋಗಿಯ ಜೀವಕ್ಕೆ ಅಪಾಯವಾದರೆ ತನ್ನ ಪರಿಸ್ಥಿತಿಯೂ ಕೆಡುತ್ತದೆ ಎಂಬ ಚಿಂತೆ ವೈದ್ಯರನ್ನು ಸಹಜವಾಗಿಯೇ ಕಾಡುತ್ತದೆಯಲ್ಲವೆ?

ಇನ್ನು, ಸರ್ಕಾರ ನಿಗದಿಪಡಿಸಿದ ಬೆಲೆಗೇ ಚಿಕಿತ್ಸೆ ನೀಡಿದರೆ, ಆಸ್ಪತ್ರೆಗಳ ಖರ್ಚುವೆಚ್ಚಗಳನ್ನು ಸರ್ಕಾರ ನೋಡಿಕೊಳ್ಳುತ್ತದೆಯೇ? ಆಸ್ಪತ್ರೆಯೆಂದರೆ ಅಲ್ಲಿ ಬರಿಯ ವೈದ್ಯರಲ್ಲ. ಶುಶ್ರೂಷಕರು, ತಂತ್ರಜ್ಞರೂ ಸೇರಿದಂತೆ ಸಾಕಷ್ಟು ಮಂದಿ ಉದ್ಯೋಗಿಗಳಿರುತ್ತಾರೆ. ಒಂದು ವೇಳೆ ನಿಯಂತ್ರಣಕ್ಕೆ ಬೇಸತ್ತು ಖಾಸಗಿ ಆಸ್ಪತ್ರೆಗಳು ಬೀಗ ಜಡಿದರೆ ಬರಿಯ ವೈದ್ಯರಷ್ಟೇ ಬೀದಿಗೆ ಬರುವುದಿಲ್ಲ. ಭಾರತದಲ್ಲಿ ಮೊದಲೇ ವೈದ್ಯರ ತೀವ್ರ ಅಭಾವವಿದೆ. ಸರಾಸರಿ ಒಂದು ಸಾವಿರ ರೋಗಿಗಳಿಗೆ ಒಬ್ಬ ವೈದ್ಯರಿದ್ದಾರೆ. ಹೀಗಿರುವಾಗ, ಸರ್ಕಾರ ಬರೆ ಎಳೆಯಹೊರಟರೆ ವೈದ್ಯರೂ ಅವಕಾಶಗಳನ್ನರಸಿ ಹೊರದೇಶಗಳಿಗೆ ಹೊರಟರೆ?

ಹಲವು ವಿಷಯಗಳಲ್ಲಿ ರಾಜ್ಯ ಸರ್ಕಾರದ ಧೋರಣೆಗಳಂತೂ ಅಪಸವ್ಯದ ಪರಮಾವಧಿ ಎನಿಸಿಬಿಟ್ಟಿವೆ. ಮದುವೆಯ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕುತ್ತೇವೆಂದರು; ಮಠಮಾನ್ಯಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುತ್ತೇವೆಂದರು; ನಂಬಿಕೆಗಳನ್ನೇ ಬುಡಮೇಲು ಮಾಡಲು ಆಚರಣೆಗಳನ್ನು ನಿಷೇಧಿಸಹೊರಟರು. ರಾಜ್ಯದಲ್ಲಿ ಅನೇಕ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಹಲ್ಲೆ, ದಾಳಿಗಳಾದವು. ಮುಖ್ಯಮಂತ್ರಿಗಳ ಆಪ್ತನೇ ಮುಖ್ಯಮಂತ್ರಿಗಳ ತವರು ಮೈಸೂರಿನಲ್ಲಿ ಅಂದಿನ ಜಿಲ್ಲಾಧಿಕಾರಿಗಳಿಗೆ ಧಮಕಿ ಹಾಕಿದ. ಡಿವೈಎಸ್​ಪಿ ಎಂ.ಕೆ.ಗಣಪತಿಯವರಿಗಂತೂ ಆತ್ಮಹತ್ಯೆ (?) ಭಾಗ್ಯ ಪ್ರಾಪ್ತಿಯಾಯಿತು. ಈಗ ಸರ್ಕಾರದ ಕಣ್ಣು ವೈದ್ಯರ ಮೇಲೆ ಬಿದ್ದಿದೆ.

ವೈದ್ಯರೆಂದ ಮಾತ್ರಕ್ಕೆ ಕೋಟಿಗಟ್ಟಲೆ ಹಣ ಮಾಡಿರುತ್ತಾರೆಂದಾಗಲೀ, ನೆಮ್ಮದಿಯಿಂದಿರುತ್ತಾರೆಂದಾಗಲೀ ಅಲ್ಲ. ವೈದ್ಯ ವೃತ್ತಿಯಲ್ಲಿ ಒತ್ತಡಗಳು, ಅವಿಶ್ರಾಂತ ಶಸ್ತ್ರಚಿಕಿತ್ಸೆಗಳು ಸಾಮಾನ್ಯ. ರೋಗಿಗಳ ಜೀವ ಉಳಿಸುವುದೇ ಗುರಿಯಾಗಿ, ಮನೆ, ಸಂಸಾರವನ್ನೂ ಬದಿಗೊತ್ತಿ ಕೆಲಸ ನಿರ್ವಹಿಸುತ್ತಾರೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ, ರೋಗಿ ಸುಧಾರಿಸಿದಾಗ ಆತನ ಹಾಗೂ ಕುಟುಂಬದವರ ಸಂತಸ, ಹಾರೈಕೆ ಇದೆಯಲ್ಲಾ? ಅವೇ ವೈದ್ಯರ ಪಾಲಿನ ಸರ್ಟಿಫಿಕೇಟ್, ಸಾರ್ಥಕತೆ.

ದೇಶದಲ್ಲಿ ವೈದ್ಯ ಹಾಗೂ ರೋಗಿಯ ಸಂಬಂಧ ಉತ್ತಮವಾಗುವ, ಪರಸ್ಪರ ನಂಬಿಕೆ ಹೆಚ್ಚುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. ಹಾಗಾದಾಗಲಷ್ಟೇ ವೈದ್ಯರೂ ನಿರಾತಂಕದಿಂದ ರೋಗಿಗಳ ಆರೈಕೆ ನಡೆಸಲು ಸಾಧ್ಯ. ಆದರೆ ಈ ಕಾಯ್ದೆ ಜಾರಿಯಾದರೆ ಇದರ ದುಷ್ಪರಿಣಾಮವಾಗುವುದು ರೋಗಿಗಳ ಮೇಲೇ ಅಲ್ಲವೇ? ಯಾವ ವೈದ್ಯ ತಾನೇ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಯ ಆರೈಕೆಗೆ ಮುಂದಾಗಿ ತನ್ನ ಪರಿಸ್ಥಿತಿ ಗಂಭೀರಗೊಳಿಸಿಕೊಂಡಾನು? ಭಾರತದಲ್ಲಿ ಜನಸಾಮಾನ್ಯರ ಸರಾಸರಿ ಆಯಸ್ಸು 68-70 ವರ್ಷಗಳಿದ್ದರೆ, ವೃತ್ತಿ ಒತ್ತಡವೋ, ಇನ್ನಾವುದೋ ಕಾರಣಗಳಿಂದ ವೈದ್ಯರ ಸರಾಸರಿ ಆಯಸ್ಸು 58ಕ್ಕೆ ಇಳಿದಿದೆ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಪ್ರಸ್ತಾವಿತ ಈ ವಿಧೇಯಕ ಖಾಸಗಿ ಆಸ್ಪತ್ರೆಗಳ ಪಾಲಿನ ಮರಣಶಾಸನವೇ ಹೊರತು ಮತ್ತಿನ್ನೇನಲ್ಲ. ಮುಖ್ಯಮಂತ್ರಿಗಳು ಅಧಿಕಾರಾವಧಿಯುದ್ದಕ್ಕೂ ಜನಪ್ರಿಯ ಯೋಜನೆಗಳನ್ನು ಘೊಷಿಸುತ್ತಾ ಬಂದರೇ ಹೊರತು ಅವು ಜನಪರವಾಗಿವೆಯೇ, ಜನಹಿತ ಕಾಯುತ್ತವೆಯೇ ಎಂಬ ಯೋಚನೆ ಮಾಡಲಿಲ್ಲ. ಸ್ವಾಮಿ, ಮುಖ್ಯಮಂತ್ರಿಗಳೇ, ಇನ್ನುಳಿದ ಆರು ತಿಂಗಳ ಅಧಿಕಾರಾವಧಿಯಲ್ಲಿ ಒಳಿತು ಮಾಡದಿದ್ದರೂ ಚಿಂತಿಲ್ಲ, ಖಾಸಗಿ ಆಸ್ಪತ್ರೆಗಳು, ವೈದ್ಯರು, ಸಿಬ್ಬಂದಿಗೆ ಮರಣಶಾಸನ ಬರೆಯದಿರಿ! ಯಾವುದೇ ಸಮಸ್ಯೆಯಾದರೂ ಅದನ್ನು ರ್ಚಚಿಸಿ ಪರಿಹರಿಸಿಕೊಳ್ಳುವ ಸಾಧ್ಯತೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇ ಇದೆ. ಆ ಕುರಿತು ಯೋಚಿಸದೆ ತನ್ನ ಆಲೋಚನೆಗಳನ್ನು ಹೇರುವ ಸರ್ಕಾರದ ಪ್ರಯತ್ನ ಸಾಧುವಲ್ಲ.

(ಲೇಖಕರು ಸಾಮಾಜಿಕ ಕಾರ್ಯಕರ್ತರು, ತಜ್ಞವೈದ್ಯರು)

Leave a Reply

Your email address will not be published. Required fields are marked *