ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್

ಗದಗ:ಪಶ್ಚಿಮ ಬಂಗಾಲದ ಕೋಲ್ಕತದಲ್ಲಿ ಜರುಗಿದ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಗದಗ-ಬೆಟಗೇರಿ ಸೇರಿ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರು ಆಸ್ಪತ್ರೆ ಬಂದ್ ಮಾಡಿ ಸೋಮವಾರ ಆರೋಗ್ಯ ಸೇವೆ ಸ್ಥಗಿತಗೊಳಿಸಿದ್ದರಿಂದ ಹೊರರೋಗಿಗಳು ಬಸವಳಿದರು.

ಭಾರತೀಯ ವೈದ್ಯಕೀಯ ಸಂಸ್ಥೆ (ಎಂಎಂಎ) ಕೇಂದ್ರ ಬಂದ್ ಕರೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಸೋಮವಾರ ತುರ್ತಸೇವೆ ಹೊರತು ಪಡಿಸಿ ಒಪಿಡಿ ಸೇರಿ ಸ್ಕ್ಯಾನಿಂಗ್, ಎಕ್ಸ್​ರೇ, ರಕ್ತ ತಪಾಸಣೆ ಕೇಂದ್ರಗಳು ಬಂದ್ ಆಗಿದ್ದವು. ಉಳಿದಂತೆ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ ಚಿಕಿತ್ಸೆ ಮುಂದುವರಿದಿದ್ದರಿಂದ ರೋಗಿಗಳ ಮುಖದಲ್ಲಿ ಕೊಂಚ ನಿರಾಳ ಭಾವನೆ ಕಾಣುತ್ತಿತ್ತು. ತುರ್ತಚಿಕಿತ್ಸೆಗೆ ಅವಕಾಶ ಕಲ್ಪಿಸಿದ್ದರಿಂದ ತುರ್ತಚಿಕಿತ್ಸೆಗೆ ಆಗಮಿಸಿದ್ದ ರೋಗಿಗಳು ಚಿಕಿತ್ಸೆ ಪಡೆದರು.

ಇನ್ನು ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಪೂರ್ವನಿಗದಿತ ಎಲ್ಲಾ ನಮೂನೆಯ ಶಸ್ತ್ರಿಚಿಕಿತ್ಸೆಗಳನ್ನು ಮುಂದೂಡಲಾಗಿತ್ತು. ಶಸ್ತ್ರಚಿಕಿತ್ಸೆಗೆ ಜಿಲ್ಲೆಯ ಕೋಟುಮಚಗಿ, ಹರ್ತಿ, ನಾರಾಯಣಪುರ, ಜಂತ್ಲಿ-ಶಿರೂರ, ರೋಣ, ಗಜೇಂದ್ರಗಡ ಸೇರಿದಂತೆ ಪಕ್ಕದ ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕನೂರ ಭಾಗದಿಂದ ಆಗಮಿಸಿದ್ದ ರೋಗಿಗಳು ಚಿಕಿತ್ಸೆ ಪಡೆಯಲಾರದೆ ವಾಪಸಾದರು.

ಸರ್ಕಾರಿ ಆಸ್ಪತ್ರೆಗಳು

ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ, 4 ತಾಲೂಕಾಸ್ಪತ್ರೆಗಳು, 3 ನಗರ ಆರೋಗ್ಯ ಕೇಂದ್ರಗಳು, 2 ಸಮುದಾಯ ಆರೋಗ್ಯ ಕೇಂದ್ರಗಳು, 39 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಆಯುಷ್ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ದಿನನಿತ್ಯಕ್ಕಿಂತ ಕೊಂಚ ಅಧಿಕವಾಗಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ತಡವಾದರೂ ಚಿಕಿತ್ಸೆ ನೀಡಲಾಗುತ್ತಿತ್ತು. ಹೆರಿಗೆ ಮತ್ತು ಗರ್ಭಿಣಿಯರ ತಪಾಸಣೆ ಸುಸೂತ್ರವಾಗಿ ಜರುಗಿತು. ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ, ಜಿಮ್ಸ್​ನಲ್ಲಿ ಹೊರೋಗಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ವೈದ್ಯರು ಹಾಗೂ ಸಿಬ್ಬಂದಿಗೆ ರಜೆ ನೀಡಿರಲಿಲ್ಲ. ಸೋಮವಾರ ಬೆಳಗ್ಗೆ 6ರಿಂದ ಮಂಗಳವಾರ ಬೆಳಗ್ಗೆ 6ರ ವರೆಗೂ ನಿರಂತರ ಸೇವೆ ನೀಡಬೇಕು ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಾಕೀತು ಮಾಡಿದ್ದರಿಂದ ವೈದ್ಯರು, ಸಿಬ್ಬಂದಿ ಸೇವೆ ಸಲ್ಲಿಸಿದರು.

ಬೈಕ್ ರ್ಯಾಲಿ, ಜಿಲ್ಲಾದಿಕಾರಿಗೆ ಮನವಿ

ಭಾರತೀಯ ವೈದ್ಯಕೀಯ ಸಂಸ್ಥೆಯ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ವೈದ್ಯರು ಬೈಕ್ ರ‍್ಯಾಲಿ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ಎನ್.ಆರ್.ಎಸ್ ಮೆಡಿಕಲ್ ಆಸ್ಪತ್ರೆಯ ಕಿರಿಯ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದವರ ಮೇಲೆ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಐಎಂಎ ಜಿಲ್ಲಾಧ್ಯಕ್ಷ ಡಾ. ಧನೇಶ ದೇಸಾಯಿ, ಕಾರ್ಯದರ್ಶಿ ಡಾ. ಶರಣು ಆಲೂರ ಸೇರಿ ಹಲವು ವೈದ್ಯರಿದ್ದರು.

ನನ್ನ ಸಹೋದರನಿಗೆ ಕಾಲು ಉಳುಕಿದ್ದರಿಂದ ಎಕ್ಸರೇ ಮಾಡಿಸಲು ಆಸ್ಪತ್ರೆಗೆ ಆಗಮಿಸಿದ್ದೆ. ಖಾಸಗಿ ಆಸ್ಪತ್ರೆಯ ಎಕ್ಸರೇ ಕೇಂದ್ರ ಬಂದ್ ಆಗಿದ್ದರಿಂದ ಅನಿವಾರ್ಯವಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಬೇಕಾಯಿತು. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಆಗಮಿಸಿದ್ದರಿಂದ ತಡವಾಗುತ್ತಿದೆ.

ಶಂಕರಪ್ಪ ಕುರ್ತಕೋಟಿ, ಗದಗ ತಾಲೂಕಿನ ಹೊಂಬಳ ಗ್ರಾಮದ ನಿವಾಸಿ.

ಕೊಲ್ಕತ್ತಾದಲ್ಲಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು.

ಡಾ. ಧನೇಶ ದೇಸಾಯಿ, ಐಎಂಎ ಜಿಲ್ಲಾಧ್ಯಕ್ಷ

ಮುಂಡರಗಿ:ಪಟ್ಟಣದ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಆಸ್ಪತ್ರೆ ಬಂದ್ ಮಾಡಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು. ಚಿಕಿತ್ಸೆಗಾಗಿ ಬಂದಿದ್ದ ಗ್ರಾಮೀಣ ಭಾಗದ ಜನರು ತೊಂದರೆ ಅನುಭವಿಸಿದರು. ವೈದ್ಯರ ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ಸರ್ಕಾರಿ ಆಸ್ಪತ್ರೆಯ ನೂರಾರು ಹೊರ ರೋಗಿಗಳು ವೈದ್ಯರ ಕೊಠಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ವೈದ್ಯರನ್ನು ಸಂರ್ಪಸಿ ಚಿಕಿತ್ಸೆ ಪಡೆದುಕೊಂಡರು.

ನರಗುಂದ: ಪಟ್ಟಣದಲ್ಲಿರುವ 15ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆಯನ್ನು ಬಂದ್ ಮಾಡಿದ್ದರಿಂದ ಬಾಬಾಸಾಹೇಬ ಭಾವೆ 100 ಹಾಸಿಗೆಯ ತಾಲೂಕಾಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿಕಿತ್ಸೆಗೆ ಆಗಮಿಸಿದ್ದು ಕಂಡು ಬಂತು. ತಾಲೂಕು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣ ಮೇಟಿ ಮಾತನಾಡಿ, ನಿತ್ಯ ನರಗುಂದದ ಸರ್ಕಾರಿ ಆಸ್ಪತ್ರೆಗೆ 400 ರಿಂದ 450 ಹೊರ ರೋಗಿಗಳು ತಪಾಸಣೆಗೆ ಬರುತ್ತಿದ್ದರು. ಜೂ. 17ರಂದು ದೇಶದ ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆ ಹಮ್ಮಿಕೊಂಡ ಹಿನ್ನೆಲೆಯ ಪರಿಣಾಮ ಸುಮಾರು 672 ಸಂಖ್ಯೆಯ ಹೊರ ರೋಗಿಗಳು ತಾಲೂಕಾಸ್ಪತ್ರೆಯಲ್ಲಿ ತಪಾಸಣೆಗೊಳಪಟ್ಟು ಚಿಕಿತ್ಸೆ ಪಡೆದಿದ್ದಾರೆ. ತಾಲೂಕಾಸ್ಪತ್ರೆಯ ಎಲ್ಲ ವೈದ್ಯರು ಮತ್ತು ಸಿಬ್ಬಂದಿ ಉತ್ತಮ ಸೇವೆ ನೀಡಿದ್ದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿಸಿದರು.

ಗಜೇಂದ್ರಗಡ:ಭಾರತೀಯ ವೈದ್ಯಕೀಯ ಸಂಘ ಕರೆ ಕೊಟ್ಟಿದ್ದ ಮುಷ್ಕರದ ಗಜೇಂದ್ರಗಡದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಖಾಸಗಿ ಆಸ್ಪತ್ರೆಯನ್ನು ಬಂದ್​ಗೊಳಿಸಿ ಮುಷ್ಕರಕ್ಕೆ ಬೆಂಬಲ ಸೂಚಿಸಲಾಯಿತು.

ಪಟ್ಟಣದಲ್ಲಿರುವ 25ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದವು. ಜತೆಗೆ 30ಕ್ಕೂ ಹೆಚ್ಚು ಔಷಧಿ ಅಂಗಡಿ ಹಾಗೂ 10 ಲ್ಯಾಬರೋಟರಿಗಳಿಗೆ ಬೀಗ ಹಾಕಲಾಗಿತ್ತು. ಸೋಮವಾರ ಖಾಸಗಿ ಆಸ್ಪತ್ರೆ ಬಂದಿದ್ದ ರೋಗಿಗಳು ತೊಂದರೆ ಅನುಭವಿಸುವಂತಾಯಿತು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೇಲೆ ನಡೆಯುವ ಹಲ್ಲೆಗಳನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಠಿಣ ಕಾನೂನು ಜಾರಿಗೊಳಿಸಬೇಕು. ವೈದ್ಯರು ಮುಕ್ತವಾಗಿ ಕಾರ್ಯ ನಿರ್ವಹಿಸಲು ಸೂಕ್ತ ಭದ್ರತೆ ಒದಗಿಸಬೇಕು ಎಂದು ಪಟ್ಟಣದ ಹಿರಿಯ ವೈದ್ಯ ಡಾ. ಆರ್.ಎಸ್.ಜೀರೆ ಒತ್ತಾಯಿಸಿದರು.

Leave a Reply

Your email address will not be published. Required fields are marked *