Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಖಾರ ಮಾತಿನ ಖೇರ್

Sunday, 05.11.2017, 3:01 AM       No Comments

| ರವೀಂದ್ರ ಎಸ್. ದೇಶಮುಖ್

‘ರೆಸ್ಟೋರೆಂಟ್​ಗಳಲ್ಲಿ ತಾಸುಗಟ್ಟಲೆ ಕಾಯುವ, ಟಾಕೀಸುಗಳಲ್ಲಿ ಟಿಕೆಟ್​ಗಾಗಿ ಕ್ಯೂ ನಿಲ್ಲುವ ಜನರಿಗೆ ರಾಷ್ಟ್ರಗೀತೆ ಹಾಡುವಾಗ 52 ಸೆಕೆಂಡ್ ಎದ್ದುನಿಲ್ಲಲು ಆಗುವುದಿಲ್ಲವೇ? ಹಿರಿಯರು ಬಂದರೆ ಎದ್ದುನಿಂತು ಗೌರವ ಸೂಚಿಸಿದಂತೆ ರಾಷ್ಟ್ರಗೀತೆಗಾಗಿ ಎದ್ದು ನಿಲ್ಲುವುದು ದೇಶಕ್ಕೆ ತೋರುವ ಗೌರವ’.

‘ದೇಶ ಕಳೆದ ಮೂರು ವರ್ಷಗಳಿಂದ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಇದನ್ನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳಬೇಕು. ಆದರೆ, ನಮ್ಮಲ್ಲಿ ಅಸಹಿಷ್ಣುತೆ ಬಗ್ಗೆ ಮಾತಾಡುವವರು ಅಭಿವೃದ್ಧಿ ಬಗ್ಗೆ, ಒಳ್ಳೆಯ ಕೆಲಸಗಳ ಬಗ್ಗೆಯೇ ಅಸಹಿಷ್ಣುತೆ ತೋರುತ್ತಿದ್ದಾರೆ’.

ರಾಷ್ಟ್ರವಾದ, ಅಭಿವೃದ್ಧಿಯ ವಿಷಯ ಬಂದಾಗ ಯಾವುದೇ ಮುಲಾಜಿಗೂ ಒಳಗಾಗದೆ ಖಡಕ್ ಮಾತಿನ ಮೂಲಕ ಗಮನ ಸೆಳೆಯುವ ಈ ವ್ಯಕ್ತಿ ರಾಜಕಾರಣಿ ಅಲ್ಲ, ಸ್ವಯಂಘೋಷಿತ ಬುದ್ಧಿಜೀವಿಯೂ ಅಲ್ಲ. ನಾಟಕಗಳಲ್ಲಿ ನಟಿಸುತ್ತ ಹಾಲಿವುಡ್ ಅಂಗಳದವರೆಗೂ ತಲುಪಿದ ಕಲಾವಿದ, ನಟ. ಹೌದು, ಅನುಪಮ್ ಖೇರ್ ಎಂಬ ದೈತ್ಯಪ್ರತಿಭೆ ಇತ್ತೀಚೆಗೆ ತಮ್ಮ ಹೇಳಿಕೆಗಳಿಂದ ಸುದ್ದಿಯಲ್ಲಿದ್ದಾರೆ. ಇವರ ಟ್ವೀಟ್​ಗಳು ಸಾಮಾಜಿಕ ಮಾಧ್ಯಮ ವಲಯದಲ್ಲಿ ಸಂಚಲನವನ್ನೇ ಮೂಡಿಸಿ, ಚರ್ಚೆಗೆ ಗ್ರಾಸವಾಗುತ್ತಿವೆ. ಹಾಗೆಂದು ಅನುಪಮ್ ಸುಮ್ಮನೇ ಹೇಳಿಕೆ ನೀಡುವುದಿಲ್ಲ. ಅವರ ಮಾತುಗಳ ಹಿಂದೆ ನಿಜವಾದ ಕಳಕಳಿ, ಸಮಾಜ, ರಾಷ್ಟ್ರದ ಪರ ಸಂವೇದನೆ ಇರುವುದನ್ನು ಯಾರಾದರೂ ಗುರುತಿಸಬಹುದು.

ಕಳೆದ ತಿಂಗಳು ಖೇರ್ ಫಿಲ್ಮ್ ಆಂಡ್ ಟೆಲಿವಿಜನ್ ಇನ್​ಸ್ಟಿಟ್ಯೂಟ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಅಧಿಕಾರ ಸ್ವೀಕರಿಸುತ್ತಲೇ ವಿದ್ಯಾರ್ಥಿಗಳಿಗೆ ಬಹಿರಂಗ ಪತ್ರ ಬರೆದ ಅವರು- ‘ನಾನು 39 ವರ್ಷಗಳ ಹಿಂದೆ ಇದೇ ಸಂಸ್ಥೆಯ ವಿದ್ಯಾರ್ಥಿಯಾಗಿದ್ದೆ. ಈಗ ಅಧ್ಯಕ್ಷನಾಗಿದ್ದರೂ ನಿಮ್ಮೆಲ್ಲರ ಸೀನಿಯರ್​ನಂತೆ ಕಾರ್ಯನಿರ್ವಹಿಸುತ್ತೇನೆ’ ಎಂದು ವಿನಯದಿಂದ ಹೇಳಿದ್ದಾರೆ. ‘ಕುಛ್ ಭೀ ಹೋ ಸಕ್ತಾ ಹೈ’ (ಡಿಡಿಡಿ.ಚ್ಚಠಿಟ್ಟಟ್ಟಛಿಟಚ್ಟಛಿಠ.ಛಿಠಿ) ಎಂಬ ತಮ್ಮ ಆಕ್ಟಿಂಗ್ ಸ್ಕೂಲ್ ಮೂಲಕ ನೂರಾರು ಉದಯೋನ್ಮುಖ ನಟರನ್ನು ತಯಾರು ಮಾಡುತ್ತಿರುವ, ಅನುಪಮ್ ಖೇರ್ ಫೌಂಡೇಷನ್ (ಡಿಡಿಡಿ.ಚ್ಞ್ಠಚಞkಜಛ್ಟಿ್ಛuಛಚಠಿಜಿಟ್ಞ.ಟ್ಟಜ) ಮೂಲಕ ಬಡಮಕ್ಕಳಿಗೆ ಶಿಕ್ಷಣ ಮತ್ತು ಜೀವನಾವಶ್ಯಕ ಮೌಲ್ಯಗಳನ್ನು ನೀಡುತ್ತಿರುವ ಖೇರ್ ಬದುಕು ಕುತೂಹಲಕರ.

ಹಿಮದ ಮಡಿಲಿನಲ್ಲಿರುವ ನಿಸರ್ಗರಮ್ಯ ತಾಣ ಶಿಮ್ಲಾದಲ್ಲಿ (1955 ಮಾರ್ಚ್ 7) ಜನಿಸಿದ ಅನುಪಮ್ ಬಾಲ್ಯದಲ್ಲೇ ಮಿಮಿಕ್ರಿ ಮಾಡುತ್ತಿದ್ದ, ಶಾಲೆಯ ನಾಟಕಗಳಲ್ಲಿ ಪಾತ್ರ ಮಾಡುತ್ತಿದ್ದ. ತಂದೆ ಪುಷ್ಕರ್ ನಾಥ್ ಅರಣ್ಯ ಇಲಾಖೆಯಲ್ಲಿ ಕ್ಲರ್ಕ್. ತಾಯಿ ದುಲಾರಿ ಗೃಹಿಣಿ. ಅಜ್ಜ-ಅಜ್ಜಿ, ಚಿಕ್ಕಪ್ಪ-ಚಿಕ್ಕಮ್ಮ, ಸೋದರ ಸಂಬಂಧಿ ಸೇರಿ 11 ಜನರು ಒಟ್ಟಾಗಿ ವಾಸಿಸುತ್ತಿದ್ದ ಅವಿಭಕ್ತ ಕುಟುಂಬ ಇವರದ್ದು. ತಂದೆಗೆ ಬರುತ್ತಿದ್ದ 90 ರೂಪಾಯಿ ಸಂಬಳದಲ್ಲೇ ಸಂಸಾರದ ನೌಕೆ ಸಾಗಬೇಕಿತ್ತು. ಖರ್ಚು ನಿರ್ವಹಿಸುವುದು ಕಷ್ಟವಾದಾಗ ತಾಯಿ ದುಲಾರಿ ತನ್ನ ಬಂಗಾರದ ಒಡವೆಗಳನ್ನು ಮಾರಲು ಗಂಡನಿಗೆ ಕೊಟ್ಟು ಬಿಡುತ್ತಿದ್ದರಂತೆ. ಆದರೂ, ‘ಮಕ್ಕಳ ಮೇಲೆ ಪ್ರೀತಿ ಇತ್ತು. ನನಗೆ ಸಿಗುತ್ತಿದ್ದ 10 ಪೈಸೆ ಪಾಕೆಟ್ ಮನಿ ಎಂದೂ ತಪು್ಪತ್ತಿರಲಿಲ್ಲ’ ಎಂದು ಅನುಪಮ್ ಹೇಳಿಕೊಂಡಿದ್ದಾರೆ.

ಪ್ರಾಥಮಿಕ, ಪ್ರೌಢ ಶಿಕ್ಷಣದ ಬಳಿಕ ಚಂಡೀಗಢದ ಇಂಡಿಯನ್ ಥೇಟರ್​ನಲ್ಲಿ ಪ್ರವೇಶ ಪಡೆಯಲು 100 ರೂಪಾಯಿ ಅಗತ್ಯವಿತ್ತು. ಮನೆಯಲ್ಲಿ ಕೇಳಿದರೆ ಒಂದು ರೂಪಾಯಿಯೂ ಹುಟ್ಟಲಿಲ್ಲ. ಆಗ ದೇವಿ ಮಂದಿರವೊಂದರಿಂದ 100 ರೂ. ಕದ್ದು ನಟನೆಯ ತರಬೇತಿಗಾಗಿ ಸೇರಿಕೊಂಡರು. ಮುಂದೆ, ಪಂಜಾಬ್ ವಿವಿಯ ನಟನಾ ತರಬೇತಿ ವಿಭಾಗದ ಕೋರ್ಸ್​ಗೆ ಸೇರಿ ಅಗ್ರ ಶ್ರೇಯಾಂಕಿತರಾಗಿ ಹೊಮ್ಮಿ, ಚಿನ್ನದ ಪದಕ ಪಡೆದುಕೊಂಡರು. ಆಗ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ(ಎನ್​ಎಸ್​ಡಿ) ಸೇರುವ ಹಾದಿ ಸುಲಭವಾಯಿತು. ಎನ್​ಎಸ್​ಡಿಯಲ್ಲಿ ನಟನೆಯ ರಹಸ್ಯಗಳನ್ನು, ಕೌಶಲಗಳನ್ನು ಶೋಧಿಸಿದ ಅವರು ರಂಗಭೂಮಿಯ ಮೇಲೆ ಎಲ್ಲ ಬಗೆಯ ಪಾತ್ರಗಳನ್ನು ನಿಭಾಯಿಸಿದರು. ಆ ಬಳಿಕ ಹೋಗಿದ್ದು ಬೆಡಗಿನ ನಗರಿ ಮುಂಬೈಗೆ. ‘ನಾನು ಕ್ವಾಲಿಫೈಡ್ ಆಕ್ಟರ್​ನಾದ್ದರಿಂದ ಅವಕಾಶಗಳು ಸುಲಭವಾಗಿ ಸಿಗುತ್ತವೆ ಎಂದುಕೊಂಡಿದ್ದೆ. ಮುಂಬೈಗೆ ಬಂದ ಮೇಲೆ ಗೊತ್ತಾಯ್ತು ಇಲ್ಲಿ ನಟನೆಯ ಅತಿರಥ-ಮಹಾರಥರೇ ಇದ್ದಾರೆ ಎಂದು’- ಹೀಗೆ ಆ ದಿನಗಳನ್ನು ನೆನಪಿಸಿಕೊಳ್ಳುವ ಖೇರ್ ಅವಕಾಶಕ್ಕಾಗಿ ಚಾತಕಪಕ್ಷಿಯಂತೆ ಕಾದರು. ಮುಂಬೈಯ ಚಾಳ್​ನ ಒಂದು ಸಣ್ಣ ಮೂಲೆಯಲ್ಲಿ ಐದು ಜನರು ವಾಸ ಮಾಡುತ್ತಿದ್ದರು. ಪ್ರತಿನಿತ್ಯ ಊಟ ಸಿಗೋದು ಪಕ್ಕಾ ಇರಲಿಲ್ಲ. ಆಗ ಸಹೋದರ ರಾಜುವನ್ನು ಮುಂಬೈಗೆ ಕರೆಸಿಕೊಂಡರು. ಆತ ಫ್ಯಾಕ್ಟರಿಯೊಂದರಲ್ಲಿ ಕೆಲಸ ಆರಂಭಿಸಿದ. ರಾಜುಗೆ ಬರುತ್ತಿದ್ದ 700 ರೂ. ಸಂಬಳದಲ್ಲೇ ಈ ಸಹೋದರರು ದಿನದೂಡತೊಡಗಿದರು.

ಅದೊಮ್ಮೆ ನಿರ್ದೇಶಕ ಮಹೇಶ್ ಭಟ್​ರನ್ನು ಭೇಟಿಯಾಗಿ, ಅವಕಾಶಕ್ಕಾಗಿ ಕೋರಿದರು. ಇವರ ನಟನಾಕೌಶಲದ ಬಗ್ಗೆ ಕೇಳಿ ತಿಳಿದಿದ್ದ ಭಟ್ ‘ಸಾರಾಂಶ’ ಚಿತ್ರದಲ್ಲಿ ಪಾತ್ರ ಕೊಟ್ಟರು. ಈ ಚಿತ್ರದಲ್ಲಿ ಖೇರ್ ನಟನೆ ಯಾವ ಪರಿ ಜನಮನ ಗೆದ್ದಿತೆಂದರೆ ಈ ಸಿನಿಮಾ ಬಿಡುಗಡೆಯಾದ ಹತ್ತೇ ದಿನಗಳಲ್ಲಿ ಖೇರ್​ಗೆ 100 ಸಿನಿಮಾಗಳಲ್ಲಿ ನಟಿಸಲು ಆಫರ್​ಗಳು ಬಂದವು. ಆ ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ನಟ, ಹಾಸ್ಯನಟ, ಖಳನಟ, ಪೋಷಕನಟನಾಗಿ ವಿವಿಧ ಪ್ರಾದೇಶಿಕ ಭಾಷೆ, ಬಾಲಿವುಡ್, ಹಾಲಿವುಡ್ ಸೇರಿ 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರತಿಭಾವಂತ ನಟರನ್ನು ರೂಪಿಸಲು ತಮ್ಮದೇ ನಟನಾ ಶಾಲೆ ಆರಂಭಿಸಿದರು. ಎಂಟು ಬಾರಿ ಫಿಲ್ಮ್ ಫೇರ್ ಅವಾರ್ಡ್, 2004ರಲ್ಲಿ ಪದ್ಮಶ್ರೀ, 2016ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನವಾಗಿರುವ ಖೇರ್ ಜೀವನದ ಯಾವ ಹಂತದಲ್ಲೂ ಸೋಲೊಪ್ಪಿಕೊಳ್ಳದೆ ಮುನ್ನುಗ್ಗಿದ್ದಾರೆ. ಅಂದ ಹಾಗೆ, ‘ಹಮ್ ಆಪ್ ಕೇ ಹೈ ಕೌನ್’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಪಾರ್ಶ್ವವಾಯುವಿಗೆ ಗುರಿಯಾಗಿದ್ದ ಖೇರ್​ಗೆ ವೈದ್ಯರು ಎರಡು ತಿಂಗಳ ವಿಶ್ರಾಂತಿ ಸೂಚಿಸಿದ್ದರು. ಆದರೆ, ಮರುದಿನವೇ ಚಿತ್ರೀಕರಣಕ್ಕೆ ಹಾಜರಾಗಿದ್ದು ಅವರ ವೃತ್ತಿಪರತೆಗೆ ಸಾಕ್ಷಿ.

ಲೋಕಸಭಾ ಸದಸ್ಯೆ ಕಿರಣ್ ಖೇರ್ ಅವರನ್ನು ಮದುವೆಯಾಗುವ ಮುಂಚಿನ ಅನುಪಮ್ ಪ್ರೇಮಕಥೆಯೂ ಸ್ವಾರಸ್ಯಕರವಾಗಿದೆ. ಉಗ್ಗುವಿಕೆಯ ಸಮಸ್ಯೆಯಿದ್ದ ಖೇರ್​ಗೆ ‘ಕ’ ಅಕ್ಷರ ಉಚ್ಚಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇವರು ಪ್ರೀತಿಸುತ್ತಿದ್ದ ಹುಡುಗಿಯ ಹೆಸರು ಕವಿತಾ ಕಪೂರ್. ಆಕೆ-‘ನನ್ನ ಹೆಸರನ್ನು ಸ್ಪಷ್ಟವಾಗಿ ಉಚ್ಚರಿಸಲು ನಿನ್ನಿಂದ ಸಾಧ್ಯವಾದರೆ ಐ ಲವ್ ಯೂ ಎನ್ನುತ್ತೇನೆ’ ಎಂಬ ಷರತ್ತು ಇಟ್ಟಳು. ಇದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದರೂ ಸಾಧ್ಯವಾಗದೆ ಕೊನೆಗೆ, ‘ತವಿತಾ ತಪೂರ್ ಐ ಹೇಟ್ ಯೂ’ ಎಂದು ಜೋರಾಗಿ ಹೇಳಿ ಆಕೆಯೊಂದಿಗಿನ ಸಂಬಂಧ ಕಡಿದುಕೊಂಡರು. ಕಿರಣ್​ರೊಂದಿಗೆ ಒಟ್ಟಾಗಿ ನಾಟಕಗಳನ್ನು ಮಾಡಿದ್ದ ಅನುಪಮ್ ಅವರನ್ನೇ ಬಾಳಸಂಗಾತಿಯಾಗಿಸಿಕೊಂಡರು. ಅಧ್ಯಾತ್ಮಕ್ಕೂ ಪ್ರಾಧಾನ್ಯ ನೀಡಿರುವ ಇವರು ಜೀವನೋತ್ಸಾಹದ ಚಿಲುಮೆ. ಈಗ ಸಾಮಾಜಿಕ ಬದುಕಿನಲ್ಲೂ ಸಕ್ರಿಯವಾಗಿದ್ದು ನೇರ, ದಿಟ್ಟ ಉತ್ತರಗಳ ಮೂಲಕ ‘ಫೈರ್​ಬ್ರ್ಯಾಂಡ್’ ಇಮೇಜ್ ತಮ್ಮದಾಗಿಸಿಕೊಂಡಿದ್ದಾರೆ.

ಹೀಗೆ ಶೂನ್ಯದಿಂದ ಸಾಧನೆಯ ಎತ್ತರಕ್ಕೆ ತಲುಪಿರುವ ಅನುಪಮ್ೆ ಸಹಜವಾಗಿಯೇ ಬಡವರ ಕಷ್ಟಗಳು, ಸಮಾಜದ ನೋವು ಬೇಗನೆ ಅರ್ಥವಾಗುತ್ತದೆ. ಆ ಸಾತ್ವಿಕ ಆಕ್ರೋಶದಿಂದ ಹೊರಡುವ ಅವರ ಮಾತಲ್ಲಿ ಅಸಹಿಷ್ಣುತೆಯ ಛಾಯೆ ಇಲ್ಲ, ಬದಲಾಗಿ ಸಮಾಜಪರ ಸಂವೇದನೆ ಇದೆ, ನೋವಿಗೆ ಸ್ಪಂದಿಸುವ ಸಾಂತ್ವನದ ಗುಣವಿದೆ. ಅದಕ್ಕೆಂದೇ ಅವರು ನಟ ಎನ್ನುವುದಕ್ಕಿಂತ ಹೆಚ್ಚಾಗಿ ವ್ಯಕ್ತಿಯಾಗಿ, ಜಾಗೃತ ದನಿಯಾಗಿ ಇಷ್ಟವಾಗುತ್ತಾರೆ, ಗಮನ ಸೆಳೆಯುತ್ತಾರೆ.

Leave a Reply

Your email address will not be published. Required fields are marked *

Back To Top