ಖಾದಿ ಬಟ್ಟೆ ಧರಿಸಿ ನೇಕಾರಿಕೆ ಪ್ರೋತ್ಸಾಹಿಸಿ

ಹುಬ್ಬಳ್ಳಿ: ಎಲ್ಲರೂ ವಾರಕ್ಕೊಮ್ಮೆಯಾದರೂ ಖಾದಿ ಬಟ್ಟೆ ಧರಿಸಿ ಖಾದಿ ಮತ್ತು ಗ್ರಾಮೋದ್ಯೋಗಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಸಂಸದ ಪ್ರಲ್ಹಾದ ಜೋಶಿ ಹೇಳಿದರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಬೆಂಗೇರಿ ಸಂಯುಕ್ತಾಶ್ರಯದಲ್ಲಿ ನಗರದ ಇಂದಿರಾಗಾಜಿನ ಮನೆಯಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ವಾರಕ್ಕೊಮ್ಮೆ ಖಾದಿ ಧರಿಸುವಂತೆ ತಿಳಿಸಿದ್ದರಿಂದ ನಾವು ಖಾದಿ ಬಟ್ಟೆ ತೊಡುತ್ತಿದ್ದೇವೆ. ಸಾರ್ವಜನಿಕರೂ ಸಹ ವಾರದಲ್ಲಿ ಒಮ್ಮೆ ಈ ಬಟ್ಟೆ ತೊಟ್ಟು ಬಡವರು, ಶ್ರಮಿಕರಿಗೆ ಅನ್ನ ನೀಡುತ್ತಿರುವ ಖಾದಿ ಗ್ರಾಮೋದ್ಯೋಗವನ್ನು ಬೆಳೆಸಬೇಕು ಎಂದರು.

ಕೇಂದ್ರ ಸರ್ಕಾರ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಕಾರ್ವಿುಕರಿಗೆ ಆನ್​ಲೈನ್ ಮೂಲಕ ನೇರವಾಗಿ ಖಾತೆಗೆ ವೇತನ ಪಾವತಿಯಾಗುವಂತೆ ಕ್ರಮ ಕೈಗೊಂಡಿದೆ. ಈ ಉದ್ಯಮದ ಹಲವು ಸಮಸ್ಯೆಗಳನ್ನು ನಿವಾರಿಸಿದೆ. ಬಾಕಿ ಉಳಿದ ಬೇಡಿಕೆ ಹಾಗೂ ಸಮಸ್ಯೆಗಳನ್ನು ಹಂತ ಹಂತವಾಗಿ ನಿವಾರಿಸುತ್ತೇವೆ ಎಂದು ಭರವಸೆ ನೀಡಿದರು.

ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಮಾತನಾಡಿ, ಕೈಮಗ್ಗ ಉದ್ಯಮ ದೇಶಿ ಸಂಸ್ಕೃತಿ ಬಿಂಬಿಸುತ್ತದೆ. ಗಾಂಧೀಜಿ ಅವರಿಂದ ಈ ಉದ್ಯಮ ಉಳಿದಿದೆ. ಭಾರತೀಯರು ಖಾದಿ ಬಟ್ಟೆಗಳನ್ನು ಹೆಚ್ಚು ಧರಿಸಬೇಕು ಎನ್ನುವುದು ಗಾಂಧೀಜಿ ಅವರ ಕನಸಾಗಿತ್ತು. ಆರೋಗ್ಯ ದೃಷ್ಟಿಯಿಂದಲೂ ಉತ್ತಮವಾಗಿರುವ ಖಾದಿ ಬಟ್ಟೆಯನ್ನು ಖರೀದಿಸಿ ಉದ್ಯಮ ಉಳಿಸಬೇಕು. ವಿಶೇಷವಾಗಿ ಯುವಕರು ಖಾದಿ ಬಟ್ಟೆ ಕೊಂಡಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ನಾಡೋಜ ಡಾ. ಪಾಟೀಲ ಪುಟ್ಟಪ್ಪ ಪ್ರದರ್ಶನದ ಮಳಿಗೆ ಉದ್ಘಾಟಿಸಿದರು. ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವಿಭಾಗೀಯ ಕಚೇರಿ ಉಪನಿರ್ದೇಶಕ ಎಸ್.ಆರ್. ಮಾಸೂರ, ಕೆಕೆಜಿಎಸ್ ಕಾರ್ಯದರ್ಶಿ ಶಿವಾನಂದ ಮಠಪತಿ, ರಮೇಶ ಸಿದ್ಧಾಂತಿ ವೇದಿಕೆಯಲ್ಲಿದ್ದರು. ಆಯೋಗದ ಪದಾಧಿಕಾರಿಗಳು, ಕಾರ್ವಿುಕರು ಉಪಸ್ಥಿತರಿದ್ದರು.

ಶೇ. 35ರಷ್ಟು ರಿಯಾಯತಿ

50 ಖಾದಿ ಮಳಿಗೆ ಹಾಗೂ ಗ್ರಾಮೋದ್ಯೋಗ ಉತ್ಪನ್ನಗಳಿಗೆ 25 ಮಳಿಗೆಗಳನ್ನು ತೆರೆಯಲಾಗಿದೆ. ಸೀರೆ, ಪಂಚೆ, ಟವೆಲ್, ಖಾದಿ ಸೀಲ್ಕ್ ಸೀರೆಗಳು, ಖಾದಿ ಶರ್ಟ್ ಹಾಗೂ ಬಟ್ಟೆ, ಚಾದರ-ಬೆಡ್​ಶೀಟ್ ಇತ್ಯಾದಿ ಖಾದಿ-ಗ್ರಾಮೋದ್ಯಗದ ಉತ್ಪನ್ನಗಳು ಮಾರಾಟಕ್ಕಿವೆ. ಖಾದಿ ಬಟ್ಟೆ, ಉಣ್ಣೆ ಬಟ್ಟೆ ಖರೀದಿ ಮೇಲೆ ಶೇ. 35 ಹಾಗೂ ಸಿಲ್ಕ್ ಉತ್ಪನ್ನಗಳ ಖರೀದಿ ಮೇಲೆ ಶೇ. 25 ರಿಯಾಯತಿ ಇದೆ.

ಮಾ. 8ರವರೆಗೆ ಮೇಳ

ಶುಕ್ರವಾರ ಆರಂಭವಾದ ಮೇಳ ಮಾರ್ಚ್ 8ರವರೆಗೆ ನಡೆಯಲಿದೆ. ಸಂಸದ ಪಲ್ಹಾದ ಜೋಶಿ ಅವರು ಮೇಳದಲ್ಲಿ ಒಂದು ಸುತ್ತು ಹಾಕಿ ಒಟ್ಟು 3,200 ರೂ.ಗಳ ಖಾದಿ ಹಾಗೂ ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸಿದರು.