ಖಾದರ್, ಸಿಡಿಪಿ ಒಪ್ಪಿಗೆಗೆ ಇನ್ನೆಷ್ಟು ಕಾಲ

ಹುಬ್ಬಳ್ಳಿ: ನಗರಾಭಿವೃದ್ಧಿ ಸಚಿವರೇ, ಹುಬ್ಬಳ್ಳಿ-ಧಾರವಾಡ ಸಿಡಿಪಿ ಅಂಗೀಕಾರಕ್ಕೆ ಇನ್ನೂ ಎಷ್ಟು ದಿನ ಕಾಯಬೇಕು, ಅವಳಿನಗರ ಇನ್ನೂ ಎಷ್ಟು ದಿನ ಅಭಿವೃದ್ಧಿ ವಂಚಿತವಾಗಿರಬೇಕು?

ಇದು ಹುಬ್ಬಳ್ಳಿ-ಧಾರವಾಡ ಜನರ ಪ್ರಶ್ನೆ. ಕಳೆದ ಒಂದು ವರ್ಷದಿಂದ ನಿಮ್ಮ ಕಚೇರಿಯಲ್ಲೇ ಸಿಡಿಪಿ ಅಂಗೀಕಾರಕ್ಕಾಗಿ ಬಿದ್ದುಕೊಂಡಿದೆ, ಏಕೆ ಒಪ್ಪಿಗೆ ನೀಡುತ್ತಿಲ್ಲ? ಅದರಲ್ಲಿ ಏನಾದರೂ ಸಮಸ್ಯೆಗಳಿವೆಯೇ? ಇದ್ದರೆ ಸರಿಪಡಿಸಿ ಅನುಮೋದನೆ ನೀಡುತ್ತಿಲ್ಲವೇಕೆ?

ಇದು ರಾಜ್ಯದ ಎರಡನೇ ಅತಿ ದೊಡ್ಡ ಮಹಾನಗರದ ಜನರ ಹಕ್ಕೊತ್ತಾಯ. ಹೊಸ ಸಿಡಿಪಿ ಇಲ್ಲದೇ ಮಹಾನಗರ ದಶಕದಷ್ಟು ಹಿಂದಕ್ಕೆ ಹೋಗಿದೆ. ಇದು ನಿಮಗೆ ಕಾಣುತ್ತಿಲ್ಲವೇ ಎಂದು ಜನ ಕೇಳುತ್ತಿದ್ದಾರೆ. ದುರಂತ ಎಂದರೆ, ಶಿಫಾರಸು ಮಾಡಿದ ಜನಪ್ರತಿನಿಧಿಗಳ್ಯಾರೂ ಮಂತ್ರಿಗಳನ್ನು ಹಿಡಿದು ಪ್ರಶ್ನಿಸುತ್ತಿಲ್ಲ.

ಬೆಂಗಳೂರಿನಂಥ ಮಹಾನಗರಗಳ ಅಭಿವೃದ್ಧಿಗೆ ಹತ್ತಾರು ಸಾವಿರಾರು ಕೋಟಿ ರೂ. ಅನುದಾನ ನೀಡಲು ಸರ್ಕಾರಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ. ಅದೇ ಉತ್ತರ ಕರ್ನಾಟಕದ ಹೆಬ್ಬಾಗಿಲು, ವಾಣಿಜ್ಯ ನಗರಿ ಹುಬ್ಬಳ್ಳಿಗೆ ಕನಿಷ್ಠ ಸಿಡಿಪಿ ಅಂಗೀಕಾರ ಸಿಗುತ್ತಿಲ್ಲ ಎಂದರೆ ಏನರ್ಥ? ಎಂದು ಜನ ಆಕ್ಷೇಪಿಸುತ್ತಿದ್ದಾರೆ.

ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಕಳೆದ 2018ರ ಮಾರ್ಚ್ 20ರಂದು ಸಿಡಿಪಿಯನ್ನು ಅಂತಿಮ ಅನುಮೋದನೆಗೆ ಸರ್ಕಾರಕ್ಕೆ ಕಳಿಸಿದೆ. ವರ್ಷವಾಗುತ್ತ ಬಂದರೂ ಸರ್ಕಾರಿ ಅಧಿಕಾರಿಗಳು ಏನು ‘ನಿರೀಕ್ಷೆ’ ಇಟ್ಟುಕೊಂಡು ಕುಳಿತಿದ್ದಾರೋ ಗೊತ್ತಿಲ್ಲ. ಆದರೆ, ಕಳೆದ ಕೆಲ ವರ್ಷಗಳಿಂದ ನೂತನ ಸಿಡಿಪಿ ಇಲ್ಲದೇ ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿ ನಿಂತ ನೀರಾಗಿದೆ.

ಮೈತ್ರಿ ಸರ್ಕಾರದ ನಗರಾಭಿವೃದ್ಧಿ ಮಂತ್ರಿ ಯು.ಟಿ. ಖಾದರ ಅವರು, ಆರು ತಿಂಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದಾಗ ತಿಂಗಳಲ್ಲಿ ಸಿಡಿಪಿಗೆ ಅನುಮೋದನೆ ಕೊಡಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಆಗಿಲ್ಲ.

ಹೊಸ ಸಿಡಿಪಿ ಹೆಸರಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಯಾವುದೇ ಹೊಸ ಲೇಔಟ್ ಆಗಲಿ, ವಸತಿ ಯೋಜನೆಯಾಗಲಿ ಜಾರಿಯಾಗುತ್ತಿಲ್ಲ. ರಿಯಲ್ ಎಸ್ಟೇಟ್ ಉದ್ಯಮ ಸಿಡಿಪಿಗೆ ಕಾದು ಕುಳಿತಿದೆ.

ಇನ್ನೊಂದೆಡೆ ನೂತನ ಸಿಡಿಪಿಯಲ್ಲಿ ಸೇರ್ಪಡೆಯಾದ ಪ್ರದೇಶ, ಹೊಸ ಹೊಸ ಯೋಜನೆಗಳಿಂದ ಹೊಸ ಅಭಿವೃದ್ಧಿ ಶಕೆ ಆರಂಭವಾಗಲಿದೆ ಎಂದು ಜನ ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ಪಿಪಿಟಿ ಕೊಟ್ಟು ಬಂದಿದ್ದೇವೆ

ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹುಡಾ ಅಧಿಕಾರಿಗಳನ್ನು ಆರೇಳು ತಿಂಗಳ ಹಿಂದೆಯೇ ಬೆಂಗಳೂರಿಗೆ ಕರೆಸಿಕೊಂಡು ಅವಳಿ ನಗರ ಸಿಡಿಪಿಯ ಪಿಪಿಟಿ ಪಡೆದುಕೊಂಡಿದ್ದಾರೆ. ನಾವು ಎಲ್ಲ ವಿವರ ನೀಡಿದ್ದೇವೆ. ಯೋಜನೆ ವಿವರಿಸಿದ್ದೇವೆ ಎಂದು ಹುಡಾ ಆಯುಕ್ತ ಎನ್.ಎಚ್. ಕುಮ್ಮನ್ನವರ ಹೇಳುತ್ತಾರೆ.

ನಿರ್ಲಕ್ಷ್ಯಕ್ಕೆ ಕೊನೇ ಇಲ್ಲವೇ

ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಹೊಸ ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ), ಮಹಾಯೋಜನೆ (ಮಾಸ್ಟರ್ ಪ್ಲಾನ್) ಸಿದ್ಧಪಡಿಸಲು 2014-15ರಿಂದಲೇ ಕಾರ್ಯ ನಿರತವಾಗಿತ್ತು. ಅಧಿಕಾರಿಗಳು ವರ್ಷಗಟ್ಟಲೇ ಕಚೇರಿಯ ಇತರೆ ಕೆಲಸಗಳನ್ನು ಬದಿಗಿಟ್ಟು ಹಲವು ಹೊಸತನಗಳಿಂದ ಕೂಡಿದ ಸಿಡಿಪಿ ಸಿದ್ಧಪಡಿಸಿದ್ದು, ಜನಪ್ರತಿನಿಧಿಗಳು ಪರಿಶೀಲಿಸಿದ್ದಾರೆ. ಹುಡಾದಿಂದ ಕಳೆದ ವರ್ಷ (ಮಾರ್ಚ್ 2018) ಅದು ಕೂಡ ವಿಧಾನಸಭೆ ಚುನಾವಣೆಗೆ ತಿಂಗಳು ಮೊದಲು ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ಪೌರಾಡಳಿತ ಸಚಿವರೇ ಎಲ್ಲಿದ್ದೀರಿ?

ಧಾರವಾಡ ಜಿಲ್ಲೆಯ ಸಿ.ಎಸ್. ಶಿವಳ್ಳಿ ಅವರು ಮೈತ್ರಿ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ್ದಾರೆ. ಅವಳಿ ನಗರದ ಅಭಿವೃದ್ಧಿಗೆ ಮಹತ್ವದ್ದಾದ ಸಿಡಿಪಿಗೆ ಅನುಮೋದನೆ ದೊರಕಿಸಿಕೊಟ್ಟರೆ ಜನ ಅವರನ್ನು ನೆನೆಯುತ್ತಾರೆ. ಆದರೆ, ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ? ಎಂಬುದೇ ಪ್ರಶ್ನೆಯಾಗಿದೆ. ಇನ್ನು ಈ ಭಾಗದ ಶಾಸಕರು, ಸಂಸದರು ಸರ್ಕಾರದ ಮೇಲೆ ಒತ್ತಡ ತರುವ ಗಂಭೀರ ಪ್ರಯತ್ನ ಮಾಡುತ್ತಿಲ್ಲ ಎಂದೂ ಜನ ಹೇಳುತ್ತಿದ್ದಾರೆ.

ಸಿಡಿಪಿಗೆ ಜನಪ್ರತಿನಿಧಿಗಳೇ ಅಡ್ಡಿ?:

ಈ ಭಾಗದ ಕೆಲ ಜನಪ್ರತಿನಿಧಿಗಳೇ ಸಿಡಿಪಿ ಅಂತಿಮ ಅನುಮೋದನೆಗೆ ಅಡ್ಡಿಯಾಗಿದ್ದಾರೆ ಎಂಬ ಅನುಮಾನವನ್ನೂ ಜನ ವ್ಯಕ್ತಪಡಿಸುತ್ತಿದ್ದಾರೆ. ಜನಪ್ರತಿನಿಧಿಗಳ ಪೈಕಿ ಕೆಲವರು ನೇರವಾಗಿ, ಪರೋಕ್ಷವಾಗಿ ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿದ್ದಾರೆ. ಸಿಡಿಪಿ ತಮ್ಮ ಅನುಕೂಲಕ್ಕೆ ತಕ್ಕಂತೆ ಇರಬೇಕು ಎಂಬುದು ಅವರ ದುರಾಸೆ. ಇದು ಕೂಡ ವಿಳಂಬಕ್ಕೆ ಕಾರಣವಾಗಿರಬಹುದೇ?

ಸಿಡಿಪಿಗೆ ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸಿ ಅವುಗಳನ್ನು ಪರಿಶೀಲಿಸಿಯೇ ಅಂತಿಮವಾಗಿ ಸರ್ಕಾರಕ್ಕೆ ಕಳಿಸಲಾಗಿದೆ. ಅಷ್ಟಿದ್ದರೂ ಸಿಡಿಪಿ ವರ್ಷದಿಂದ ಕುಳಿತಲ್ಲೇ ಕುಳಿತಿದೆ.