ಹಾಸನ: ಚನ್ನರಾಯಪಟ್ಟಣ ತಾಲೂಕಿನ ಎಲ್ಲ ಪ್ರೌಢಶಾಲೆಗಳ ಆಟದ ಮೈದಾನಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಸುಸಜ್ಜಿತವಾಗಿ ಕ್ರೀಡಾಂಗಣಗಳನ್ನಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಕಲ್ಕೆರೆ ಸರ್ಕಾರಿ ಪ್ರೌಢಶಾಲೆ ಕ್ರೀಡಾಂಗಣದಲ್ಲಿ ನುಗ್ಗೇಹಳ್ಳಿ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಪಾಠ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಶಿಕ್ಷಣದ ಜೊತೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಆಸಕ್ತಿ ಮೂಡಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪಧಿಸುವಂತಾಗಲು ಶಿಕ್ಷಕರು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದ ಶಾಸಕು, ಅಧಿಕಾರಿಗಳು ಕ್ರೀಡಾ ಸಾಮಗ್ರಿಗಳನ್ನು ಎಲ್ಲ ಗ್ರಾಮೀಣ ಶಾಲೆಗಳಿಗೂ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಚಾವಣಿ ಮುರಿದಿರುವ ಶಾಲಾ ಕೊಠಡಿಗಳ ನವೀಕರಣ ಕಾಮಗಾರಿ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಮೆರಿಕಾ ದೇಶದಲ್ಲಿ ಭಾರತದ ಅಕ್ಕಿಗೆ ಬೇಡಿಕೆ ಹೆಚ್ಚಾಗಿದ್ದು, ಕೊಂಡುಕೊಳ್ಳಲು ಅಲ್ಲಿನ ಜನರು ಅಂಗಡಿಗಳ ಮುಂದಿ ಸರದಿ ಸಾಲಿನಲ್ಲಿ ನಿಂತುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರು ಟೊಮೆಟೊ ಜೊತೆ ಬೇರೆ ಬೇರೆ ತರಕಾರಿ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಲಾಭವಿದೆ. ರಾಗಿ ಬೆಳೆಗೆ ವಿಮೆ ಮಾಡಿಸಿ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆೃ ಜೆ.ಕೆ.ಭವ್ಯ ಜಯರಾಮ್, ಕ್ಷೇತ್ರಶಿಕ್ಷಣಾಧಿಕಾರಿ ಎಚ್.ಎನ್.ದೀಪಾ, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಕೆ.ಎನ್.ಅನಿಲ್, ಸಹಾಯಕ ನಿರ್ದೇಶಕ ಚೆಲುವನಾರಾಯಣ ಸ್ವಾಮಿ, ಶಿಕ್ಷಣ ಸಂಯೋಜಕ ನಿತ್ಯಾನಂದ, ಮುಖ್ಯಶಿಕ್ಷಕಿ ಬಿ.ಎನ್.ಜಯಂತಿ, ಪಿಡಿಒ ಶ್ರೀಧರ್, ಮುಖಂಡರಾದ ನಾಗೇಗೌಡ, ದೊರೆಸ್ವಾಮಿ, ಎಚ್.ಸಿ. ಧರ್ಮರಾಜ್, ಕೆ.ಎನ್.ಬೈರೇಗೌಡ, ಶಿಕ್ಷಕರಾದ ಜಿ.ಮಂಜುಳಾ, ಅಶೋಕ್ ಸುಂದರನ್, ಅಂತೋನಿ ಪ್ರಸಾದ್, ಕೆ.ಟಿ.ಕುಮಾರ್, ಇತರರು ಹಾಜರಿದ್ದರು.