ಖಾಕಿ ಮೂಗಿಗೆ ತುಪ್ಪ ಸವರಿದ ಸರ್ಕಾರ

|ಯಂಕಣ್ಣ ಸಾಗರ್,

ಬೆಂಗಳೂರು: ಪೊಲೀಸರ ವೇತನ ಪರಿಷ್ಕರಣೆ ಕುರಿತು ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಸಮಿತಿ ಸಲ್ಲಿಸಿದ್ದ ವರದಿ ಜಾರಿ ವಿಚಾರವಾಗಿ ವೇತನ ಅನುಸೂಚಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಸರ್ಕಾರದ ಮೂಗಿಗೆ ತುಪ್ಪ ಸವರುವ ಕೆಲಸಕ್ಕೆ ಪೊಲೀಸರಿಂದ ಬೇಸರ ವ್ಯಕ್ತವಾಗುತ್ತಿದೆ.

ಹೊಸದಾಗಿ ನೇಮಕಾತಿ ಹೊಂದಿದ ಪೇದೆಗಳ ಹೊರತುಪಡಿಸಿದರೆ, ಆರು ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿ ಮುಂಬಡ್ತಿ ಪಡೆದ ಅಧಿಕಾರಿ ಮತ್ತು ಸಿಬ್ಬಂದಿಗೆ ಔರಾದ್ಕರ್ ವರದಿಯ ಪರಿಷ್ಕೃತ ವೇತನ ಶ್ರೇಣಿಯ ಸೌಲಭ್ಯ ಸಿಗುವುದಿಲ್ಲ ಎಂಬುದು ಅನುಸೂಚಿಯಿಂದ ಸ್ಪಷ್ಟವಾದಂತಿದೆ. ಈ ಪಟ್ಟಿಯಲ್ಲಿ ಉಲ್ಲೇಖಿಸಿರುವ ಅಂಶಗಳು ಗೊಂದಲ ಸೃಷ್ಟಿಸಿವೆ. ಔರಾದ್ಕರ್ ಸಮಿತಿ 2016ರ ಸೆ.27ರಂದು ಸಲ್ಲಿಸಿದ್ದ ವರದಿಯಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಶೇ.30 ವೇತನ ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿತ್ತು. ಪರಿಷ್ಕೃ ವೇತನ ಜಾರಿಗೆ ಸರ್ಕಾರ ಮುಂದಾಗಿರಲಿಲ್ಲ. ವರದಿ ಅನುಷ್ಠಾನಕ್ಕೆ ನಿರಂತರ ಒತ್ತಾಯ ಕೇಳಿಬಂದಿತ್ತು. ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಜೂನ್​ನಲ್ಲಿ ನಡೆದ ಅಧಿವೇಶನದಲ್ಲಿ ಔರಾದ್ಕರ್ ವರದಿ ಶಿಫಾರಸು ಜಾರಿಗೆ ಒಪ್ಪಿಗೆ ಸೂಚಿಸಿತ್ತು. ಅಲ್ಲದೆ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಶೇ.8ರಿಂದ 10 ವೇತನ ಹೆಚ್ಚಳಕ್ಕೆ ಆದೇಶಿಸಿತ್ತು. ಆ ಪ್ರಕಾರ, ಆಗಸ್ಟ್​ನಲ್ಲಿ ಪೊಲೀಸರಿಗೆ ಪರಿಷ್ಕೃತ ವೇತನ ಜಮಾವಣೆ ಆಗಬೇಕಿತ್ತು. ಇದುವರೆಗೂ ಸಿಗದೆ ಇರುವುದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಅನುಸೂಚಿಯಲ್ಲಿನ ಆದೇಶದ ಪ್ರಕಾರ, ಪೇದೆಯಿಂದ ಬಡ್ತಿ ಹೊಂದಿದ ಮುಖ್ಯಪೇದೆ, ಸಹಾಯಕ ಸಬ್​ಇನ್​ಸ್ಪೆಕ್ಟರ್, ಪೊಲೀಸ್ ಸಬ್​ಇನ್​ಸ್ಪೆಕ್ಟರ್, ಪೊಲೀಸ್ ವರಿಷ್ಠಾಧಿಕಾರಿ (ಐಪಿಎಸ್ ಅಲ್ಲದ) ಕಮಾಂಡೆಂಟ್ ಹಾಗೂ ಬಿ ಸಮೂಹದ ಸಹಾಯಕ ಕಮಾಂಡೆಂಟ್, ಸಿ ಸಮೂಹದ ಸ್ಪೆಷಲ್ ಆರ್​ಎಸ್​ಐ, ಡಿ ಸಮೂಹದ ಅನುಯಾಯಿ ಮತ್ತು ಅನುಯಾಯಿ ಜಮೇದಾರ್ ವೃಂದದ ಪೊಲೀಸ್ ಸಿಬ್ಬಂದಿಗೂ ಪರಿಷ್ಕೃತ ವೇತನ ಶ್ರೇಣಿ ಲಭ್ಯವಾಗುವುದಿಲ್ಲ. ಇದು ಉಳಿವರ ನಿರಾಸೆಗೆ ಕಾರಣವಾಗಿದೆ.

ವೇತನ ಸ್ಪಷ್ಟೀಕರಣಕ್ಕೆ ಮನವಿ: ಹೊಸದಾಗಿ ನೇಮಕವಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹೊರತುಪಡಿಸಿದರೆ, ಇನ್ನುಳಿದ ಅಧಿಕಾರಿ ಮತ್ತು ಸಿಬ್ಬಂದಿ ವೃಂದಕ್ಕೆ ಯಾವ ಪ್ರಕಾರದಲ್ಲಿ ವೇತನ ನಿಗದಿಪಡಿಸಬೇಕು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಪೇದೆ ಹುದ್ದೆಯಿಂದ ಕಮಾಂಡೆಂಟ್ ಹುದ್ದೆವರೆಗೂ ಬಡ್ತಿ ಪಡೆದ ಅಧಿಕಾರಿ ಮತ್ತು ಸಿಬ್ಬಂದಿ ಮೂಲವೇತನಕ್ಕೆ ಎಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟೀಕರಣ ಕೊಡಬೇಕು. ಈ ಬಗ್ಗೆ ವೇತನ ಅನುಸೂಚಿ ತಯಾರಿಸಿ ಕಳುಹಿಸುವಂತೆ ಸರ್ಕಾರಕ್ಕೆ ಪೊಲೀಸರು ಮನವಿ ಪತ್ರ ಬರೆದಿದ್ದಾರೆ.

Leave a Reply

Your email address will not be published. Required fields are marked *