ಖರ್ಗೆ ಆಸ್ತಿ ಬಗ್ಗೆ ತನಿಖೆಯಾಗಲಿ; ರವಿಕುಮಾರ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೆಸರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಸಾವಿರಾರು ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ಲೇವಡಿ ಮಾಡಿದರು.

ಶಾಂತಿ ನಗರದ ಬಾಬುರಾವ ಚಿಂಚನಸೂರ ನಿವಾಸದ ಬಳಿ ಮಂಗಳವಾರ ಆಯೋಜಿಸಿದ್ದ ಕೋಲಿ ಸಮಾಜದ ಸಮಾವೇಶದಲ್ಲಿ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ಅನುದಾನ ಹರಿದು ಬರುತ್ತಿದೆ. ಆ ಅನುದಾನ ಎಲ್ಲಿ ಹೋಯಿತು ಎಂಬ ಉತ್ತರ ಕೊಡಿ ಎಂದು ರವಿಕುಮಾರ ಪ್ರಶ್ನಿಸಿದರು.

ಡಾ.ಉಮೇಶ ಜಾಧವ್ರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿದರೆ ಕೋಲಿ ಸಮಾಜ ಎಸ್ಟಿಗೆ ಸೇರಿಸುವುದಾಗಿ ರಕ್ತದಲ್ಲಿ ಬರೆದುಕೊಡುವೆ ಎಂದು ಭರವಸೆ ನೀಡಿದರು.

ಗೌಡರು ಚಿಂತಿಸೋದು ಯಾಕೆ ಗೊತ್ತಾ?

ಮಾಜಿ ಪ್ರಧಾನ ಮಂತ್ರಿಗಳು ಸದಾ ಏನು ಚಿಂತಿಸುತ್ತಾರೆ ನಿಮಗೆ ಗೊತ್ತಾ? 28 ಮೊಮ್ಮಕ್ಕಳಿದ್ದರೆ ಎಲ್ಲ ಕ್ಷೇತ್ರಗಳಿಗೂ ಸ್ಪರ್ಧಿಸಬಹುದಿತ್ತಲ್ಲ. ಇನ್ನೂ ಮೊಮ್ಮಕ್ಕಳನ್ನು ದೇವರು ಯಾಕೆ ಕೊಡಲಿಲ್ಲ ಎಂದು ಚಿಂತೆ ಮಾಡುತ್ತಿರುತ್ತಾರೆ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಲೇವಡಿ ಮಾಡಿದರು. ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಚಿಂಚನಸೂರ, ಖರ್ಗೆ 50 ವರ್ಷ ಕೋಲಿ ಸಮಾಜದ ಮತ ಪಡೆದು ಶಾಸಕ, ಸಚಿವ, ಸಂಸದರಾಗಿದ್ದಾರೆ. ಆದರೆ ಅವರು ಈ ಸಮಾಜಕ್ಕೆ ಕೊಟ್ಟ ಕೊಡುಗೆ ಏನು ಎಂದು ಪ್ರಶ್ನಿಸಿದರು. ಕಲಬುರಗಿಯನ್ನು ತಂದೆ ಮಗ ಇಬ್ಬರೆ ಆಳಬೇಕು ಎಂದು ನಿರ್ಧರಿಸಿದ್ದಾರೆ. ಅದಕ್ಕಾಗಿಯೆ ಮಾಲೀಕಯ್ಯ ಗುತ್ತೇದಾರ, ಜಾಧವ್, ಚಿಂಚನಸೂರ, ಮಾಲಕರೆಡ್ಡಿ ಅವರನ್ನು ಹೊರ ಹಾಕಿದ್ದಾರೆ ಎಂದು ಆರೋಪಿಸಿದರು.