ಖರೀದಿದಾರರ ಕೈ ಸೇರಿದೆ ಶೇ. 50 ಫಸಲು 

ಶಿರಸಿ: ತಾಲೂಕಿನ ಶೇ. 50ರಷ್ಟು ಅಡಕೆ ಈ ವರ್ಷ ಫಸಲು ಗುತ್ತಿಗೆದಾರರು ಮತ್ತು ಟೆಂಡರ್ ಖರೀದಿದಾರರ ಕೈ ಸೇರಿದೆ. ಈ ಅಡಕೆ ಖರೀದಿಸಿದವರು ಸಂಸ್ಕರಿಸಿ ಉತ್ತರ ಭಾರತದ ವ್ಯಾಪಾರಸ್ಥರಿಗೆ ನೇರವಾಗಿ ಮಾರುವ ಸಾಧ್ಯತೆ ಇದೆ. ಸ್ಥಳೀಯ ಮಾರುಕಟ್ಟೆ ದರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ವ್ಯಕ್ತಗೊಂಡಿದೆ.
ಪ್ರತಿ ಡಿಸೆಂಬರ್-ಜನವರಿ ವೇಳೆ ತಾಲೂಕಿನಲ್ಲಿ ಅಡಕೆ ಕೊಯ್ಲಿನ ತುರುಸು ಜೋರಾಗಿರುತ್ತಿತ್ತು. ರೈತರು ಬಿಡುವಿಲ್ಲದ ಕೃಷಿ ಕಾರ್ಯದಲ್ಲಿ ನಿರತರಾಗಿರುತ್ತಿದ್ದರು. ಆದರೆ, ಈ ವರ್ಷದ ಅಡಕೆ ಕೊಯ್ಲಿನ ಚಿತ್ರಣವೇ ಬದಲಾಗಿದೆ. ಕೃಷಿ ಕಾರ್ವಿುಕರ ಕೊರತೆಯಿಂದಾಗಿ ಶೇ. 50ರಷ್ಟು ರೈತರು ಕೊಯ್ಲು ಮಾಡಿದ ಅಡಕೆಯನ್ನು ಸಂಸ್ಕರಿಸುವ ಕಾಯಕಕ್ಕಿಳಿದಿಲ್ಲ. ಹಾನಗಲ್, ಹಾವೇರಿ ಭಾಗದಿಂದಲೂ ಆಗಮಿಸಿದವರು ಟೆಂಡರ್​ನಲ್ಲಿ ಹಸಿ ಅಡಕೆಯನ್ನು ಖರೀದಿಸಿ ಸಂಸ್ಕರಿಸುತ್ತಿದ್ದಾರೆ. ಶಿರಸಿ ಎಪಿಎಂಸಿ ವ್ಯಾಪ್ತಿಯಲ್ಲಿ 1.96 ಲಕ್ಷ ಕ್ವಿಂಟಾಲ್ ಅಡಕೆ ವಾರ್ಷಿಕ ವಹಿವಾಟಿದ್ದು, ಈ ವರ್ಷ ಅರ್ಧದಷ್ಟು ಅಡಕೆ ಬೆಳೆ ಮಾರಾಟ ಸ್ಥಳೀಯ ಮಾರುಕಟ್ಟೆ ಮೂಲಕ ನಡೆಯುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
ಅಡಕೆಗೆ ಸೂಕ್ತ ದರ ಬರಲಿ, ಬರದಿರಲಿ ರೈತರು ತಮ್ಮ ಅಗತ್ಯತೆಗೆ ಅನುಗುಣವಾಗಿ ಅಡಕೆಯನ್ನು ಮಾರುಕಟ್ಟೆಗೆ ತರುತ್ತಿದ್ದರು. ಇದರಿಂದಾಗಿ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಅಡಕೆ ಪೂರೈಕೆಯಾಗಿ ದರ ಸ್ಥಿರವಾಗಿ ನಿಲ್ಲುತ್ತಿತ್ತು. ಈ ವರ್ಷದ ಪರಿಸ್ಥಿತಿ ಹಾಗಿಲ್ಲ. ಟೆಂಡರ್​ನಲ್ಲಿ ಹಸಿ ಅಡಕೆ ಖರೀದಿಸಿ ಸಂಸ್ಕರಿಸಿದವರು ಉತ್ತರ ಭಾರತದ ವ್ಯಾಪಾರಸ್ಥರ ಸಂಪರ್ಕ ಬೆಳೆಸಿ ಅಡಕೆ ಪೂರೈಸಿದರೆ ಸ್ಥಳೀಯವಾಗಿ ಅಡಕೆಗೆ ಬೇಡಿಕೆ ಇಲ್ಲದಂತಾಗಲಿದೆ. ಇದರಿಂದಾಗಿ ಸಣ್ಣ ಹಿಡುವಳಿದಾರರು ಸಮಸ್ಯೆ ಎದುರಿಸಬೇಕಾಗಬಹುದು ಎನ್ನುತ್ತಾರೆ ಮಾರುಕಟ್ಟೆ ವಿಶ್ಲೇಷಕರು.
ದಾಸ್ತಾನು ಫುಲ್ : ದಾವಣಗೆರೆ, ಚೆನ್ನಗಿರಿ ಮತ್ತು ಶಿವಮೊಗ್ಗ ಭಾಗದಲ್ಲಿ ಅಡಕೆ ಕೊಯ್ಲು ಕಾರ್ಯ ಈಗಾಗಲೇ ಸಂಪೂರ್ಣಗೊಂಡಿದ್ದು, ಸಿದ್ಧಗೊಂಡ ರಾಶಿ ಅಡಕೆಯನ್ನು ಉತ್ತರ ಭಾರತದ ವ್ಯಾಪಾರಸ್ಥರು ಖರೀದಿಸಿದ್ದಾರೆ. ಪಾನ್ ಮಸಾಲಾ ತಯಾರಕರಿಗೆ ಮೇ ತಿಂಗಳವರೆಗಿನ ಅಗತ್ಯದ ಅಡಕೆಯನ್ನು ಈ ವ್ಯಾಪಾರಸ್ಥರು ಈಗಾಗಲೇ ಪೂರೈಸಿದ್ದಾರೆ. ಪ್ರತಿ ಕ್ವಿಂಟಾಲ್ ರಾಶಿ ಅಡಕೆಗೆ 26ರಿಂದ 33 ಸಾವಿರ ರೂ.ವರೆಗೆ ಮಾರುಕಟ್ಟೆ ದರವಿದೆ. ಮೇ ತಿಂಗಳ ಬಳಿಕ ರಾಶಿ ಅಡಕೆಗೆ ಬೇಡಿಕೆ ಬರಬಹುದಾದರೂ ಫಸಲು ಗುತ್ತಿಗೆದಾರರು ಮತ್ತು ಹಸಿ ಅಡಕೆ ಟೆಂಡರ್ ಪಡೆದವರು ಒಮ್ಮೆಲೇ ಅಗತ್ಯ ಪ್ರಮಾಣದ ಅಡಕೆ ಪೂರೈಸುವ ಸಾಧ್ಯತೆ ಇದೆ. ಹೀಗಾಗಿ, ಅಡಕೆಗೆ ಯಾವಾಗ ದರ ಬರಬಹುದು ಎಂಬ ಕಲ್ಪನೆಯೂ ಮಾರುಕಟ್ಟೆ ತಜ್ಞರಿಗೆ ಲಭಿಸುತ್ತಿಲ್ಲ!
ಮಾರುಕಟ್ಟೆಯ ಹಾಲಿ ಸ್ಥಿತಿ: ಸರಾಸರಿ 35ರಿಂದ 37 ಸಾವಿರ ರೂ. ರಾಶಿ ಅಡಕೆಗೆ ದರವಿರಬೇಕಿದ್ದ ಈ ದಿನಗಳಲ್ಲಿ ಶಿರಸಿ ಮಾರುಕಟ್ಟೆಯಲ್ಲಿ 26ರಿಂದ 33 ಸಾವಿರ ರೂ. ಲಭಿಸುತ್ತಿದೆ. ಚಾಲಿ ಅಡಕೆಗೆ 30 ಸಾವಿರ ರೂ. ದರವನ್ನು ರೈತರು ನಿರೀಕ್ಷಿಸುತ್ತಿದ್ದರೆ, ಮಾರುಕಟ್ಟೆಯಲ್ಲಿ 20ರಿಂದ 27 ಸಾವಿರ ರೂ. ಪ್ರತಿ ಕ್ವಿಂಟಾಲ್​ಗೆ ದರ ಲಭಿಸುತ್ತಿದೆ. ಈ ದರದಿಂದ ಬೇಸತ್ತ ಬಹುತೇಕ ರೈತರು ಫಸಲು ಗುತ್ತಿಗೆ ಮತ್ತು ಹಸಿ ಅಡಕೆ ಟೆಂಡರ್​ನತ್ತ ವಾಲಿದ್ದಾರೆ.
“ರಾಶಿ ಅಡಕೆಯು ಈ ವರ್ಷ ಫಸಲು ಗುತ್ತಿಗೆದಾರರು ಮತ್ತು ಹಸಿ ಅಡಕೆ ಟೆಂಡರ್ ಪಡೆದವರಲ್ಲಿ ಅಧಿಕ ಪ್ರಮಾಣದಲ್ಲಿದೆ. ಆಸ್ಸಾಂ ಭಾಗದಿಂದಲೂ ಅಡಕೆಯು ದೆಹಲಿ ಮಾರುಕಟ್ಟೆಗೆ ಬರುತ್ತಿರುವುದು ಮಾರುಕಟ್ಟೆ ಅಸ್ಥಿರತೆಗೆ ಕಾರಣವಾಗುತ್ತಿದೆ.”
| ಜಿ.ಎಂ. ಹೆಗಡೆ ಮುಳಖಂಡ, ಅಡಕೆ ವ್ಯಾಪಾರಸ್ಥ, ಶಿರಸಿ