ಕೋಲಾರ: ಖಜಾನೆ ಖಾಲಿ ಮಾಡುವ ಭಾಗ್ಯಗಳನ್ನು ಜಾರಿಗೆ ತರುವ ಬದಲು ಉದ್ಯೋಗ ಭಾಗ್ಯ ಕಲ್ಪಿಸಿದಲ್ಲಿ ಸರ್ಕಾರ ಪ್ರಜೆಗಳಿಗಾಗಿ ಸಾಲ ಮಾಡುವುದು ತಪ್ಪುತ್ತದೆ ಎಂದು ಭೋವಿ ಗುರುಪೀಠಾಧ್ಯಕ್ಷ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.
ಟಮಕದ ಕೆಯುಡಿಎ ವಸತಿ ಬಡಾವಣೆಯಲ್ಲಿ ಭೋವಿ ಭವನ ನಿರ್ಮಾಣಕ್ಕೆ ನೀಡಿರುವ ನಿವೇಶನದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ 848ನೇ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯಾವುದೇ ಸರ್ಕಾರವಿರಲಿ, ಪ್ರಜೆಗಳನ್ನು ಭಿಕ್ಷುಕರನ್ನಾಗಿ ಮಾಡದೆ ಸ್ವಾವಲಂಬಿಯಾಗಿ ಬದುಕಲು ಯೋಜನೆಗಳನ್ನು ಜಾರಿಗೊಳಿಸಬೇಕು. ಅನ್ನಭಾಗ್ಯ, ಶಾದಿ ಭಾಗ್ಯ, ಸೈಕಲ್ ಭಾಗ್ಯದ ಜತೆಗೆ ಉದ್ಯೋಗ ಭಾಗ್ಯ ಕೊಟ್ಟಲ್ಲಿ ಪ್ರಜೆಗಳೇ ಸರ್ಕಾರದ ಖಜಾನೆ ತುಂಬಿಸಬಲ್ಲರು ಎಂದು ಅಭಿಪ್ರಾಯಿಸಿದರು.
ಭೋವಿ ಸಮಾಜದ ಕುಲಕಸುಬು ಕಲ್ಲು ಗಣಿಗಾರಿಕೆಯಾಗಿದೆ. ಕಲ್ಲು ಒಡೆದು ಬದುಕುತ್ತಿದ್ದಾರೆಯೇ ಹೊರತು ತಲೆ ಒಡೆದು ಜೀವಿಸುವವರಲ್ಲ. ಸರ್ಕಾರದ ನೀತಿಗಳಿಂದ ಜೀವನೋಪಾಯಕ್ಕೆ ದಾರಿಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಶೇ.50 ಮೀಸಲು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸಿದ್ಧರಾಮೇಶ್ವರರು ಅಕ್ಷರ, ಆರ್ಥಿಕತೆ ಹಾಗೂ ಆಧ್ಯಾತ್ಮಿಕ ವಿಚಾರಗಳ ಪ್ರತಿಪಾದಕರಾಗಿದ್ದರು, ವೈಚಾರಿಕತೆಯ ತಳಹದಿಯಲ್ಲಿ ಧರ್ಮ ವಿಸ್ತರಿಸಲು ಬಸವಣ್ಣರಂತೆ ಶ್ರಮಿಸಿದ್ದಾರೆ. ಇಂತಹ ಮಹಾಪುರುಷರ ಜಯಂತಿ ಆಚರಿಸಿದಲ್ಲಿ ಮನೆ ಮನಗಳಲ್ಲಿ ವಿಚಾರ ಕ್ರಾಂತಿ ಜಾಗೃತಗೊಳ್ಳುತ್ತದೆ. ಬಲವಂತದ ಮತಾಂತರ ತಪ್ಪುತ್ತದೆ ಎಂದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಭೋವಿಗಳು ಕಲ್ಲು ಗಣಿಗಾರಿಕೆಯಿಂದ ಜೀವನ ಸಾಗಿಸುತ್ತಿದ್ದಾರೆ. ಅಧಿಕಾರಿಗಳು ನಿಮಯಗಳ ಸಾವಿರಾರು ರೂ. ದಂಡ ವಿಧಿಸಿದರೆ ಕಷ್ಟವಾಗುತ್ತದೆ. ಕಾನೂನು ಪಾಲನೆ ಜತೆಗೆ ಅಧಿಕಾರಿಗಳಿಗೆ ಮಾನವೀಯತೆಯ ಪಾಠ ಹೇಳಬೇಕು ಎಂದು ಡಿಸಿಗೆ ಸೂಚಿಸಿದರು.
ಡಿಸಿ ಜೆ. ಮಂಜುನಾಥ್ ಮಾತನಾಡಿ, ಕಲ್ಲು ಗಣಿಗಾರಿಕೆ ಸಂಬಂಧ ಎಫ್-3 ನಡಿ ಅರ್ಹರನ್ನು ಗುರುತಿಸಲು ವಿವಿಧ ಇಲಾಖೆ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಕೋಲಾರದಲ್ಲಿ 66 ಬ್ಲಾಕ್ ಗುರುತಿಸಲಾಗಿದೆ. ಬೇರೆ ತಾಲೂಕುಗಳಲ್ಲಿ 97 ಬ್ಲಾಕ್‌ಗಳಿದ್ದು ಭೋವಿ ಸಮುದಾಯಕ್ಕೆ ಶೇ.25 ಮೀಸಲಾತಿ ನೀಡಲಾಗುತ್ತಿದೆ. ಈವರೆಗೆ 212 ಅರ್ಜಿ ಬಂದಿದ್ದು 9 ಬ್ಲಾಕ್‌ಗಳಲ್ಲಿ ಕಲ್ಲಿ ಗಣಿಗಾರಿಕೆಗಾಗಿ ಅನುಮತಿ ನೀಡಲಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಮಾತನಾಡಿ, 8 ವರ್ಷಗಳಿಂದ ಭೋವಿ ಭವನಕ್ಕಾಗಿ ನಿವೇಶನ ಪಡೆಯಲು ನಡೆಸಿದ ಹೋರಾಟಕ್ಕೆ ಫಲ ಸಿಕ್ಕಿದೆ. ಸರ್ಕಾರ ಅಗತ್ಯ ಅನುದಾನ ನೀಡಿದರೆ ವರ್ಷದೊಳಗೆ ಭವನ ನಿರ್ಮಿಸಲಾಗುವುದು. ಕಾರ್ಯಕ್ರಮಕ್ಕೆ ಎಲ್ಲ ಜನಪ್ರತಿನಿಧಿಗಳನ್ನು ಖುದ್ದು ಆಹ್ವಾನಿಸಿದ್ದರೂ ಗೈರಾಗಿರುವುದು ಸಮುದಾಯದ ಬಗೆಗೆ ಎಷ್ಟು ಕಾಳಜಿಯಿದೆ ಎಂಬುದನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಬಿಜೆಪಿ ಹಿರಿಯ ಮುಖಂಡ ಹನುಮಪ್ಪ, ಭೋವಿ ಸಮಾಜದ ಮುಖಂಡರಾದ ವೆಂಕಟಮುನಿಯಪ್ಪ, ಗೋಪಾಲಪ್ಪ, ಮುನಿರಾಜು, ಮಾಲೂರು ಲೋಕೇಶ್, ವಿನೋದ್ ಕುಮಾರ್, ಮಲ್ಲೇಶ್ ಬಾಬು, ಕೆ.ಎಂ.ಮುನಿಯಪ್ಪ, ಸುಬ್ಬರಾಯಪ್ಪ, ಕೋನಪ್ಪ, ಕೆ.ಸಿ.ನಾರಾಯಣಸ್ವಾಮಿ, ಕೆ.ವಿ.ಕುಮಾರ್, ಕೆ.ವಿ.ಮಂಜುನಾಥ್, ಸಹದೇವ್, ಗಣೇಶ್, ಪಾಂಡು ಉಪಸ್ಥಿತರಿದ್ದರು.