ಕ್ಷೇತ್ರದ ಅಭಿವೃದ್ಧಿಗೆ ಮಾಮನಿ ಕೊಡುಗೆ ಅಪಾರ

2 Min Read
ಕ್ಷೇತ್ರದ ಅಭಿವೃದ್ಧಿಗೆ ಮಾಮನಿ ಕೊಡುಗೆ ಅಪಾರ
ಸವದತ್ತಿಯ ಮಾಮನಿ ಕಲ್ಯಾಣ ಮಂಟಪದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ದಿ. ಆನಂದ ಮಾಮನಿ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಜರುಗಿತು. ನಳಿನಕುಮಾರ್ ಕಟೀಲ್, ಸಂಜಯ ಪಾಟೀಲ, ಮಹಾಂತೇಶ ಕವಟಗಿಮಠ, ಡಾ.ಪ್ರಭಾಕರ ಕೋರೆ, ಮಂಗಲ ಅಂಗಡಿ, ಈರಣ್ಣ ಕಡಾಡಿ, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡಗೌಡರ, ಪಿ.ರಾಜೀವ, ಧುರ್ಯೋಧನ ಐಹೊಳೆ, ಶ್ರೀಮಂತ ಪಾಟೀಲ, ಜಗದೀಶ ಮೆಟಗುಡ್ಡ ಇತರರು ಇದ್ದರು.

ಸವದತ್ತಿ, ಬೆಳಗಾವಿ: ಆನಂದ ಮಾಮನಿ ಅವರು ಕ್ಷೇತ್ರದ ಅಭಿವೃದ್ಧಿ ಕಾರ್ಯವನ್ನು ಅರ್ಧದಲ್ಲಿಯೇ ಬಿಟ್ಟು ಹೋಗಿದ್ದಾರೆ. ಅವರ ಕನಸನ್ನು ಅಪೂರ್ಣವಾಗಲು ಬಿಡುವುದಿಲ್ಲ. ಕ್ಷೇತ್ರದ ಕಾರ್ಯಕರ್ತರು ಮತ್ತು ಕುಟುಂಬದವರು ಧೈರ್ಯಗೆಡದಿರಿ. ಪಕ್ಷ ನಿಮ್ಮೊಂದಿಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಹೇಳಿದರು.
ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ವಿಧಾನಸಭೆ ಉಪಸಭಾಧ್ಯಕ್ಷ ದಿ. ಆನಂದ ಮಾಮನಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಕ್ಷ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿದೆ. ಸರಳತೆ, ಆದರ್ಶ ಜೀವನ ನಡೆಸಿದ ಆನಂದ ಮಾಮನಿ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದರು. ಶಿಕ್ಷಣ ಆರೋಗ್ಯ, ರಸ್ತೆ, ಕುಡಿಯುವ ನೀರು ಸೇರಿ ಕ್ಷೇತ್ರದ ಜನರಿಗೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಶ್ರಮಿಸಿದ್ದರು. ಕೇವಲ ಸರ್ಕಾರದ ಅನುದಾನವಲ್ಲದೆ ವೈಯಕ್ತಿಕವಾಗಿಯೂ ಅವರ ಸೇವೆ ಅನನ್ಯ. ಎಷ್ಟೋ ಅಂದರ ಬಾಳಿಗೆ ಬೆಳಕಾದವರು. ಸಾಕಷ್ಟು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಒಂದು ಕುಟುಂಬಕ್ಕೆ ಸೀಮಿತವಾಗಿರದೇ ಕ್ಷೇತ್ರವೇ ತನ್ನ ಕುಟುಂಬವೆಂದು ಬದುಕಿದವರು ಎಂದು ಸ್ಮರಿಸಿದರು. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಮನುಷ್ಯನಿಗೆ ಅಧಿಕಾರ, ಐಶ್ವರ್ಯ ಶಾಶ್ವತವಲ್ಲ. ಸಮಾಜಕ್ಕಾಗಿ ಏನು ಕೊಡುಗೆ ನೀಡಿದ್ದೇವೆ ಎಂಬುದು ಮುಖ್ಯ. ಆ ನಿಟ್ಟಿನಲ್ಲಿ ಆನಂದ ಮಾಮನಿ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಾಮನಿ ಅವರ ಕನಸನ್ನು ನನಸು ಮಾಡೋಣ ಎಂದರು. ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಮಾಮನಿ ಅವರು ಜನಪರ ನಾಯಕರಾಗಿದ್ದರು. ಕ್ಷೇತ್ರದ ಮೇಲಿನ ಕಾಳಜಿ, ಅವರ ಸಂಸ್ಕಾರ, ಪಕ್ಷದ ಮೇಲಿನ ಅವರ ನಿಷ್ಠೆ ನಿಜಕ್ಕೂ ಶ್ಲಾಘನೀಯ. ಅವರ ಆದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದರು. ಕೆಎಲ್ಇ ಶಿಕ್ಷಣ ಸಂಸ್ಥೆ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಒಬ್ಬ ಯುವ, ಅನುಭವಿ ಮುಖಂಡನನ್ನು ಕಳೆದುಕೊಂಡಿದ್ದೇವೆ. ಕೆಎಲ್ಇ ಸಂಸ್ಥೆಯ ಚುನಾವಣೆಯಲ್ಲಿ ಅವರ ತಂದೆಯ ಸಹಾಯ ಸ್ಮರಣೀಯ. ಸವದತ್ತಿ ಕ್ಷೇತ್ರದಲ್ಲಿ ವಿಜ್ಞಾನ ಕಾಲೇಜು ತೆರೆಯುವ ಬಯಕೆ ಅವರದಾಗಿತ್ತು. ಕ್ಷೇತ್ರದ ತುಂಬೆಲ್ಲ ಅವರ ಅಭಿಮಾನಿಗಳಿದ್ದಾರೆ.

See also  ದೇಶದ ಪ್ರಗತಿಯ ಕನಸು ಕಂಡಿದ್ದ ನಾಯಕ

ಈ ಕುಟುಂಬದ ಮೇಲಿನ ಪ್ರೀತಿ ಯಾವಾಗಲೂ ಹೀಗೆ ಇರಲಿ ಎಂದು ಆಶಿಸಿದರು. ಆನಂದ ಮಾಮನಿ ಅವರಿಗೆ ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಗಂಗಮ್ಮ ಮಾಮನಿ, ರತ್ನಾ ಮಾಮನಿ ಹಾಗೂ ಕುಟುಂಬಸ್ಥರಿಗೆ ಗಣ್ಯರು ಸಾಂತ್ವನ ಹೇಳಿದರು. ಕಲ್ಮಠದ ಶ್ರೀ, ಮೂಲಿಮಠದ ಶ್ರೀ, ಬೆಡಸೂರಮಠದ ಶ್ರೀ, ಹೂಲಿ ಅಜ್ಜನವರು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಬೆಳಗಾವಿ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡಗೌಡರ, ಪಿ.ರಾಜೀವ, ಧುರ್ಯೋಧನ ಐಹೊಳೆ, ಶ್ರೀಮಂತ ಪಾಟೀಲ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಇದ್ದರು.

Share This Article