ಕ್ಷೇತ್ರದ ಜನರಿಗೆ ಅನ್ಯಾಯವಾದರೆ ಸಹಿಸೋಲ್ಲ

ಹೊಳೆಆಲೂರ: ಜನಾದೇಶ ಧಿಕ್ಕರಿಸಿ ಅಪವಿತ್ರ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರದ ಧೋರಣೆ ಏನೇ ಇರಲಿ, ನನ್ನ ಮತಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ವಿಷಯದಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಕಿಂಚಿತ್ತೂ ಅನ್ಯಾಯ ಮಾಡಿದರೂ ಸಹಿಸುವುದಿಲ್ಲ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಸಮೀಪದ ಅಸೂಟಿ ಗ್ರಾಮದಲ್ಲಿ ಆರ್​ಐಡಿಎಫ್ ಯೋಜನೆಯಡಿ 36.60 ಲಕ್ಷ ರೂ. ವೆಚ್ಚದ ಸಾರ್ವಜನಿಕ ಪಶು ಆಸ್ಪತ್ರೆ ಕಟ್ಟಡಕ್ಕೆ ಭೂಮಿ ಪೂಜೆ, ಅಪಘಾತದಲ್ಲಿ ಮರಣ ಹೊಂದಿದ ಮಹಾದೇವ ಕಮ್ಮಾರ, ಯಚ್ಚರಪ್ಪ ಬಾರಕೇರ ಕುಟುಂಬಕ್ಕೆ ತಲಾ 4 ಲಕ್ಷ ರೂ.ಗಳ ಚೆಕ್ ವಿತರಣೆ, ಎಸ್​ಸಿ, ಎಸ್​ಟಿ ಜನಾಂಗದ 87 ಫಲಾನುಭವಿಗಳಿಗೆ ಉಜ್ವಲ ಯೋಜನೆಯ ಸಿಲಿಂಡರ್ ವಿತರಿಸಿ ಅವರು ಮಾತನಾಡಿದರು.

ರೈತರ ಅನುಕೂಲಕ್ಕಾಗಿ ಫಸಲು ವಿಮೆ ಕಚೇರಿಯನ್ನು ಗದಗನಲ್ಲಿ ಆರಂಭಿಸಲು ವಿಮಾ ಕಂಪನಿಯೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಎರಡ್ಮೂರು ದಿನಗಳಲ್ಲಿ ಆರಂಭಿಸುವ ಭರವಸೆ ನೀಡಿದ್ದಾರೆ. ಕರಮುಡಿ, ಅಸೂಟಿ ಗ್ರಾಮಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಶೀಘ್ರದಲ್ಲೇ ನಿವಾರಿಸಲಾಗುವುದು ಎಂದರು.

ಸಾನ್ನಿಧ್ಯ ವಹಿಸಿದ್ದ ರೇವಣಸಿದ್ಧೇಶ್ವರ ಶ್ರೀಗಳು ಮಾತನಾಡಿ, ದಶಕಗಳಿಂದ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ವಂಚಿತವಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೇ ಕಾರಣವಿಟ್ಟುಕೊಂಡು ನಾಡು ಒಡೆಯುವ ವಿಚಾರ ಮಾಡುವ ಬದಲು ದೇಶ, ನಾಡು ನುಡಿ ಹಾಗೂ ಅಭಿವೃದ್ಧಿ ವಿಷಯ ಬಂದಾಗ ಈ ಭಾಗದ ಎಲ್ಲ ಜನಪ್ರತಿನಿಧಿಗಳು ರಾಜಕೀಯ ಬದಿಗೊತ್ತಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ಹೊಳೆಆಲೂರ ಮಂಡಲ ಅಧ್ಯಕ್ಷ ಅಶೋಕ ಹೆಬ್ಬಳ್ಳಿ, ಜಿಪಂ ಸದಸ್ಯ ಶಿವಕುಮಾರ ನೀಲಗುಂದ, ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ತಾಪಂ ಸದಸ್ಯ ಜಗದೀಶ ಬ್ಯಾಡಗಿ, ಗ್ರಾಪಂ ಅಧ್ಯಕ್ಷ ವೀರೇಶ ದಿಂಡೂರ, ಸಂಪತ್ ಕುಲಕರ್ಣಿ, ಅಂದಾನಯ್ಯ ವಿರಕ್ತಮಠ, ಮಹಾಂತೇಶ ಹೊಸಮಠ, ಫಕೀರಗೌಡ ಪಾಟೀಲ, ನಿಂಗನಗೌಡ ಮೋಟೆಗೌಡ್ರ, ನಿರ್ವಿುತಿ ಕೇಂದ್ರದ ಎಸ್.ಎಸ್. ಪಾಟೀಲ, ವಿನೋದಕುಮಾರ ಪಾಟೀಲ, ಶೇಖರಗೌಡ ಪಾಟೀಲ, ಹನಮಂತಗೌಡ ದ್ಯಾಮನಗೌಡ್ರ, ವೀರೂಪಾಕ್ಷಿ ಕಸವಣ್ಣವರ, ರೇವತಿ ಕುಲಕರ್ಣಿ, ರಾಜೇಶ್ವರಿ ದಿಂಡೂರ, ಇತರರು ಉಪಸ್ಥಿತರಿದ್ದರು.

ಮುಖ್ಯಮಂತ್ರಿಯಿಂದ ಉದ್ದಟತನದ ವರ್ತನೆ: ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿರುವುದನ್ನು ಸರಿಪಡಿಸುವಂತೆ ಮುಖ್ಯಮಂತ್ರಿಗಳನ್ನು ಬಿಜೆಪಿ ಅಗ್ರಹಿಸಿದರೆ ಕುಮಾರಸ್ವಾಮಿ ಅವರು ಸೂಕ್ತವಾಗಿ ಸ್ಪಂದಿಸುವ ಬದಲು ಕೇವಲ ಹಾಸನ, ಮಂಡ್ಯ, ಮೈಸೂರು ಪ್ರತಿನಿಧಿಯಂತೆ ಉದ್ದಟತನದಿಂದ ವರ್ತಿಸುತ್ತಾರೆ. ಅವರ ಹೇಳಿಕೆಯನ್ನು ಖಂಡಿಸಬೇಕಾದ ಕಾಂಗ್ರೆಸ್ ರಾಜಕೀಯಕ್ಕಾಗಿ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ಈ ಭಾಗದಲ್ಲಿರುವ ಅಲ್ಪ ಸ್ವಲ್ಪ ಅಸ್ತಿತ್ವವನ್ನು ಕಾಂಗ್ರೆಸ್ ಕಳೆದುಕೊಳ್ಳುವ ಕಾಲ ದೂರವಿಲ್ಲ ಎಂದರು.